ADVERTISEMENT

ಮೈಸೂರು ದಸರಾ: ಅರಮನೆಗೆ ಗಜಪಡೆ, ಸಂಭ್ರಮಕ್ಕಿಲ್ಲ ತಡೆ!

ರಾಜಠೀವಿಯಲ್ಲಿ ಬಂದ ಆನೆಗಳು l ಮಕ್ಕಳಲ್ಲಿ ಪುಳಕ l ನಗರದಲ್ಲಿ ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 3:51 IST
Last Updated 17 ಸೆಪ್ಟೆಂಬರ್ 2021, 3:51 IST
ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ದಸರಾ ಆನೆಗಳು ಗಜಗಾಂಭೀರ್ಯದಿಂದ ಹಜ್ಜೆ ಹಾಕಿದವು
ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ದಸರಾ ಆನೆಗಳು ಗಜಗಾಂಭೀರ್ಯದಿಂದ ಹಜ್ಜೆ ಹಾಕಿದವು   

ಮೈಸೂರು: ‘ದಸರಾ ಸಂಭ್ರಮಕ್ಕೆ ಯಾವುದೇ ತಡೆ ಇಲ್ಲ’ ಎಂಬಂತೆ ಗಜಪಡೆ ಗುರುವಾರ ಅರಮನೆಗೆ ಆಗಮಿಸಿತು.

ಅರಣ್ಯ ಭವನದಿಂದ ಅರಮನೆವರೆಗೆ ಗಜಪಡೆಯ 35 ನಿಮಿಷದ ನಡಿಗೆಯು, ಕೋವಿಡ್‌ ನಡುವೆಯೂ ದಸರೆಗೆ ಚಾಮುಂಡೇಶ್ವರಿಯ ಕಾವಲಿದೆ ಎಂಬುದನ್ನು ಸಾಬೀತುಪಡಿಸಿತು.

ಎಂಟು ಆನೆಗಳ ರಾಜಗಾಂಭೀರ್ಯದ ನಡಿಗೆಯು ನಗರದಲ್ಲಿ ಹಬ್ಬದ ವಾತಾವರಣವನ್ನೂ ಸೃಷ್ಟಿಸಿತ್ತು. ಆನೆಗಳು ನಡೆದು ಬಂದ ದಾರಿಯ ಎರಡೂ ಬದಿಯಲ್ಲಿ ಹಿರಿಯರು ಹಾಗೂ ಮಕ್ಕಳೊಂದಿಗೆ ನಿಂತಿದ್ದ ಸಾವಿರಾರು ಮಂದಿ ಕೈಮುಗಿದು ಧನ್ಯತೆ ಅನುಭವಿಸಿದರು.

ADVERTISEMENT

ಮಂಗಳವಾದ್ಯ, ಪೊಲೀಸ್‌ ವಾದ್ಯ ಮೇಳದ ನಡುವೆ ಉಪ್ಪರಿಗೆಯಿಂದ ಸುರಿದ ಹೂಮಳೆ, ಪೂರ್ಣಕುಂಭದ ಸಂಭ್ರಮದಲ್ಲಿ ರಾಜಠೀವಿಯ ಆನೆಗಳು ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಯನ್ನು ಪ್ರವೇಶಿಸಿದವು. ‘ಗಜ ಗಾಂಭೀರ್ಯ’ವನ್ನು ನೂರಾರು ಮಂದಿ ಕಣ್ತುಂಬಿಕೊಂಡರು.

ಅಂಬಾರಿ ಹೊರಲಿರುವ ಅಭಿಮನ್ಯು, ಅಶ್ವತ್ಥಾಮ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮಿ, ಗೋಪಾಲಸ್ವಾಮಿ ಆನೆಗಳು ಒಟ್ಟಿಗೇ ಹೆಜ್ಜೆ ಇಟ್ಟವು. ಮದವೇರಿದ್ದ ವಿಕ್ರಮ ಆನೆಯನ್ನು ಮಾತ್ರ ಪ್ರತ್ಯೇಕವಾಗಿ ಕರೆ ತರಲಾಯಿತು.

ನಸುಕಿನ 5.30ಕ್ಕೆ ಅರಣ್ಯ ಭವನದಲ್ಲಿ ಆನೆಗಳನ್ನು ವಿವಿಧ ಆಭರಣಗಳಿಂದ ಸಿಂಗರಿಸಲಾಗಿತ್ತು. ನಂತರ, ಎಪಿಸಿಸಿಎಫ್ ಜಗತ್‌ರಾಮನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಉಪಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಕಮಲಾ ಕರಿಕಾಳನ್ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ವೇದಘೋಷಗಳೊಂದಿಗೆ ಆನೆಗಳ ಪಾದ ತೊಳೆದು, ಅರಿಸಿನ, ಕುಂಕುಮ, ಗಂಧ, ಭಸ್ಮ, ವಿಭೂತಿ, ಅಕ್ಷತೆ, ಗರಿಕೆ ಹಾಗೂ ನಾನಾ ಬಗೆಯ ಪುಷ್ಪಗಳಿಂದ ಅಲಂಕರಿಸಿದರು.

ಧೂಪ– ದೀಪಗಳಿಂದ ಆರತಿ ಬೆಳಗಿದ ನಂತರ ಪಂಚಫಲ, ಜೇನುತುಪ್ಪದ ಎಳ್ಳುಂಡೆ, ಚಕ್ಕುಲಿ, ಕೋಡುಬಳೆ, ಕಡುಬು, ಮೋದಕ ಹಾಗೂ ಕಬ್ಬು, ಬೆಲ್ಲವನ್ನು ನೈವೇದ್ಯ ರೂಪದಲ್ಲಿ ಆನೆಗಳಿಗೆ ತಿನ್ನಿಸಿದರು. ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳನ್ನು ಬರಮಾಡಿಕೊಂಡರು. ಅರಮನೆಯ ಆ ವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಫಾಲನೇತ್ರ, ಉಪಮೇಯರ್ ಅನ್ವರ್‌ ಬೇಗ್, ಮೈಲ್ಯಾಕ್ ಅಧ್ಯಕ್ಷ ಫಣೀಶ್‌ಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎಂ.ಆರ್.ಕೃಷ್ಣಪ್ಪಗೌಡ, ಪ್ರವಾಸೋದ್ಯಮ ನಿಗಮ ಮಂಡಳಿ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಇದ್ದರು.

ವಿಕ್ರಮನ ಹಠ: ಮಾವುತರ ಪೇಚಾಟ: ಎರಡು ತಿಂಗಳಿಂದ ಮದವೇರಿದ್ದ ವಿಕ್ರಮ ಆನೆ ಈ ಬಾರಿ ಬರಲಾರೆ ಎಂದು ಹಠ ಹಿಡಿದಿದ್ದು ಮಾವುತರ ಪೇಚಾಟಕ್ಕೆ ಕಾರಣವಾಯಿತು. ಏನೆಲ್ಲ ಕಸರತ್ತು ನಡೆಸಿದರೂ ವಿಕ್ರಮ ಕೊನೆಗೂ ಆನೆ ಗುಂಪಿಗೆ ಸೇರಲಿಲ್ಲ. ತನ್ನ ಪಾಡಿಗೆ ತಾನು ಪ್ರತ್ಯೇಕವಾಗಿ ಹಲವು ಮಾರು ದೂರ ನಿಂತು, ಹೆಣ್ಣಾನೆಯನ್ನು ನಿರೀಕ್ಷಿಸುತ್ತಿದ್ದ.

ಪ್ರತ್ಯೇಕವಾಗಿ ಕರೆತರುವ ವೇಳೆ ಕಾವಾಡಿಯೊಬ್ಬರಿಗೆ ಸೊಂಡಿಲಿ
ನಿಂದ ಹೊಡೆಯಿತು. ಕೆಳಗೆ ಬಿದ್ದ ಕಾವಾಡಿಯನ್ನು ಜತೆಯಲ್ಲಿದ್ದವರು ಉಪಚರಿಸಿದರು. ಅರಮನೆಯ ಆವರಣದಲ್ಲೂ ಪ್ರತ್ಯೇಕವಾಗಿಯೇ ಕೆಲಹೊತ್ತು ವಿಕ್ರಮನನ್ನು ಇರಿಸಿ ನಂತರ ಲಕ್ಷ್ಮೀ ಆನೆಯ ಜತೆ ಬಿಡಲಾಯಿತು. ಚೈತ್ರ ಮತ್ತು ಕಾವೇರಿ ಆನೆ ಅಭಿಮನ್ಯುವಿನ ಸಂಗಡ ಸೇರಿದ್ದವು. ಲಕ್ಷ್ಮೀ ಆನೆಯು ಗೋಪಾಲಸ್ವಾಮಿಯ ಜತೆಗಿತ್ತು.

ದಾರಿ ಮಧ್ಯೆ ವಾದ್ಯಗಳ ಶಬ್ದಕ್ಕೆ ಬೆಚ್ಚಿ ಪಾದಚಾರಿ ಮಾರ್ಗದತ್ತ ಹೊರಳಿದ ಅಶ್ವತ್ಥಾಮ ಆನೆಯನ್ನು ಕೂಡಲೇ ಮಾವುತ ಮತ್ತು ಕಾವಾಡಿಗಳು ನಿಯಂತ್ರಿಸಿದರು.

ಅರಮನೆಗೆ ಬಂದ ಹೆಣ್ಣಾನೆಗಳ ಪೈಕಿ ‘ಚೈತ್ರಾ’ ಎರಡು ಗಂಡಾನೆಗಳ ನಡುವೆ ಸಿಲುಕಿ ಬಳಲಿತು. ಮದವೇರಿದ್ದ ವಿಕ್ರಮ ಆನೆ ಒಂದೆಡೆ, ಗೋಪಾಲಸ್ವಾಮಿ ಮತ್ತೊಂದೆಡೆ ‘ಚೈತ್ರಾ’ಳನ್ನು ಕಾಡಿದವು.

19ರಿಂದ ತಾಲೀಮು: ‘ದಸರಾ ಗಜಪಡೆಯ ತಾಲೀಮು ಸೆ. 19ರಿಂದ ಆರಂಭವಾಗಲಿದೆ’ ಎಂದು ಡಿಸಿಎಫ್ ಕರಿಕಾಳನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅ. 17ರವರೆಗೆ ಅರಮನೆಯಲ್ಲಿರುವ ಆನೆಗಳ ಆರೈಕೆಗಾಗಿ 50 ಸಿಬ್ಬಂದಿ ಇದ್ದಾರೆ. 2 ದಿನಗಳ ಸಂಪೂರ್ಣ ವಿಶ್ರಾಂತಿ ಬಳಿಕ ವಿಶೇಷ ಆಹಾರ ಹಾಗೂ ತಾಲೀಮನ್ನು ಸೆ.19ರಿಂದ ಆರಂಭಿಸಲಾಗುವುದು. ಕನಿಷ್ಠ ಒಂದರಿಂದ ಒಂದೂವರೆ ಕಿ.ಮೀವರೆಗೂ ಆನೆಗಳನ್ನು ನಡೆಸಲು ಸಿದ್ಧತೆಗಳಾಗಿವೆ’ ಎಂದರು.

‘ವಿಶೇಷ ಆಹಾರದ ದಾಸ್ತಾನು ಕೊಠಡಿಗೆ ಕೇವಲ ಇಬ್ಬರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಆನೆಗಳನ್ನು ಕಟ್ಟಿ ಹಾಕುವ ಸ್ಥಳದಲ್ಲಿ 8 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಸ್ವಚ್ಛವಾಗದ ಫಲಕ!: ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಗಜಪಡೆ ಅರಮನೆ ತಲುಪಿದರೂ ಇಲ್ಲಿನ ಕೆಲವು ಫಲಕಗಳು ಇನ್ನೂ ಮಾಸಿವೆ. ಆನೆಗಳು ಪ್ರವೇಶಿಸುವ ಜಯಮಾರ್ತಾಂಡ ದ್ವಾರದಲ್ಲೇ ಇದ್ದ ‘ಮೈಸೂರು ಅರಮನೆ’ ಎಂಬ ಫಲಕವು ತೀರಾ ಮಾಸಿ ಹೋಗಿದೆ. ಬಿಳಿಯ ಬಣ್ಣವೊಂದು ಕಪ್ಪು ಬಣ್ಣದ ಗ್ರಾನೈಟ್‌ ಅನ್ನು ಆವರಿಸಿದೆ. ಇದರ ಸ್ವಚ್ಛತಾ ಕೆಲಸ ಇನ್ನೂ ನಡೆಯದೇ ಇರುವುದು ಗುರುವಾರ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.