ADVERTISEMENT

ಜಂಬೂಸವಾರಿ ದಾರಿಯಲ್ಲಿ ‘ಫೀಡಿಂಗ್ ಸೆಂಟರ್‌’...

ಮೈಸೂರು ದಸರಾ ಸಮಿತಿಯಿಂದ ನೂತನ ಪ್ರಯೋಗ; ಅನುಷ್ಠಾನಕ್ಕೆ ಸಿದ್ಧತೆ

ಡಿ.ಬಿ, ನಾಗರಾಜ
Published 15 ಸೆಪ್ಟೆಂಬರ್ 2019, 11:17 IST
Last Updated 15 ಸೆಪ್ಟೆಂಬರ್ 2019, 11:17 IST
   

ಮೈಸೂರು: ‘ಹಸುಗೂಸಿನೊಂದಿಗೆ ಮೈಸೂರಿಗೆ ಬಂದು ಜಂಬೂಸವಾರಿ ನೋಡಲಾದೀತೇ..? ಹಸಿದು ಕೊಂಡ ಕಂದಮ್ಮಗೆ ಹಾಲೂಡಿಸುವುದಾದರೂ ಎಲ್ಲಿ, ಹೇಗೆ?’ ಎಂದೆಲ್ಲ ಚಿಂತಿಸಿ, ತಾಯಂದಿರು ನಿರಾಶರಾಗಬೇಕಿಲ್ಲ.

ಈ ಬಾರಿ, ಜಂಬೂಸವಾರಿಯ ಮಾರ್ಗದಲ್ಲಿ ಹಾಲೂಡಿಸುವ ಕೇಂದ್ರ (ಫೀಡಿಂಗ್ ಸೆಂಟರ್‌)ಗಳೂ ಇರಲಿವೆ! ಹಸಿದ ಮಕ್ಕಳಿಗೆ ಹಾಲುಣಿಸಲು ತಾಯಂದಿರಿಗೆ ಅಗತ್ಯ ಸೌಕರ್ಯವಿರುವ ಇಂತಹ ಕೇಂದ್ರಗಳನ್ನು ಪರಿಚಯಿಸಲು ದಸರಾ ಸಮಿತಿ ಸಿದ್ಧತೆ ನಡೆಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆಯಂತೆ ಅಧಿಕಾರಿ ಪಡೆ ರೂಪುರೇಷೆ ತಯಾರಿಸಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಹಾದಿಯುದ್ದಕ್ಕೂ ಕನಿಷ್ಠ ಅರ್ಧ ಕಿಲೋ ಮೀಟರ್‌ಗೆ ಒಂದರಂತೆ ಫೀಡಿಂಗ್‌ ಸೆಂಟರ್‌ ಇರುವಂತೆ ನೋಡಿಕೊಳ್ಳಲು ಯೋಜಿಸಿದೆ. ಇದರಿಂದ, ವಿವಿಧೆಡೆಯಿಂದ ಬರುವ ಮಕ್ಕಳ ತಾಯಂದಿರು ನಿರಾತಂಕವಾಗಿ ದಸರೆಯನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಿತಿಯ ಆಶಯವೂ ಆಗಿದೆ.

ADVERTISEMENT

‘ಚಿನ್ನದ ಅಂಬಾರಿ ಹೊತ್ತ ‘ಅರ್ಜುನ’ ಸಾರಥ್ಯದ ಗಜಪಡೆ ಸಾಗುವ ಮಾರ್ಗದ ರಸ್ತೆ ಬದಿಯಲ್ಲಿ ಅಲ್ಲಲ್ಲೇ ಚಿಕ್ಕ ಟೆಂಟ್‌ ಕೊಠಡಿ ನಿರ್ಮಿಸಲಾಗುವುದು. ಇದರೊಳಗೆ ಏಕ ಕಾಲಕ್ಕೆ ನಾಲ್ಕೈದು ಮಹಿಳೆಯರು ಕೂರಲು ಅನುಕೂಲವಾ ಗುವಂತೆ ಕುರ್ಚಿಗಳನ್ನು ಹಾಕಲಾಗುವುದು. ಟೇಬಲ್‌ ಇರಲಿದೆ. ಕುಡಿಯುವ ನೀರು, ಟಿಶ್ಯೂ ಪೇಪರ್ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಒದಗಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ತಿಳಿಸಿದರು.

‘ಈ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ನಿಭಾಯಿಸಬೇಕು ಎಂದು ಸಚಿವರು ಸೂಚಿಸಿದ್ದು, ಇದರಂತೆ ಅಧಿಕಾರಿಗಳು ಕಾರ್ಯಾರಂಭ ಮಾಡಿದ್ದಾರೆ. ಈ ಟೆಂಟ್‌ಗಳು ಮಕ್ಕಳ ತಾಯಂದಿರಿಗಷ್ಟೇ ಅಲ್ಲ; ಜಂಬೂ ಸವಾರಿ ವೀಕ್ಷಿಸಲು ನಿಂತು ಕಾಯುವ ಸಂದರ್ಭದಲ್ಲಿಕೊಂಚ ಹೊತ್ತು ವಿರಮಿಸಲು ವಯೋವೃದ್ಧ ಮಹಿಳೆಯರಿಗೂ ಸಹಕಾರಿಯಾಗಲಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಎದೆ ಹಾಲುಣಿಸುವ ಕೇಂದ್ರಗಳ ಸನಿಹವೇ ಇ–ಟಾಯ್ಲೆಟ್‌ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಕ್ಕಳ ನಿಸರ್ಗ ಬಾಧೆಯನ್ನು ತೀರಿಸಲು ಇವು ಸಹಕಾರಿಯಾಗಲಿವೆ. ಭದ್ರತೆಯ ದೃಷ್ಟಿಯಿಂದ, ಈ ಕೇಂದ್ರಗಳಿಗೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ನಿಯೋಜಿಸುವಂತೆ ಸಚಿವರು ಈಗಾಗಲೇ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದಾರೆ’ ಎಂದು ದಸರಾ ಸಮಿತಿಯ ಸಂಚಾಲಕರೂ ಆಗಿರುವ ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.