ADVERTISEMENT

‘ಕೈಗಾರಿಕೆ ತ್ಯಾಜ್ಯ; ಯೋಜಿತ ಸಂಸ್ಕರಣೆ ಅಗತ್ಯ’

ಅಬುದಾಬಿಯ ಜಾಯೀದ್‌ ವಿಶ್ವವಿದ್ಯಾಲಯದ ಡಾ.ಜಿಬ್ರಾ ನ್‌ ಇಕ್ಬಾಲ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:37 IST
Last Updated 16 ಸೆಪ್ಟೆಂಬರ್ 2021, 6:37 IST
ವೆಬಿನಾರ್‌ನಲ್ಲಿ ಡಾ.ಜಿಬ್ರಾನ್‌ ಇಕ್ಬಾಲ್‌ ಮಾತನಾಡಿದರು
ವೆಬಿನಾರ್‌ನಲ್ಲಿ ಡಾ.ಜಿಬ್ರಾನ್‌ ಇಕ್ಬಾಲ್‌ ಮಾತನಾಡಿದರು   

ಮೈಸೂರು: ‘ಕೈಗಾರಿಕೆಗಳಲ್ಲಿ ಬಳಸಿದ ನೀರನ್ನು ಯೋಜಿತವಾಗಿ ಸಂಸ್ಕರಿಸದಿದ್ದರೆ ಜಲಮೂಲಗಳ ಜೊತೆಗೆ ಜೀವ ಸಂಕುಲಕ್ಕೂ ಹಾನಿಯಾಗಲಿದೆ’ ಎಂದು ಅಬುದಾಬಿಯ ಜಾಯೀದ್‌ ವಿಶ್ವವಿದ್ಯಾಲಯದ ಡಾ.ಜಿಬ್ರಾನ್‌ ಇಕ್ಬಾಲ್‌ ಆತಂಕ ವ್ಯಕ್ತಪಡಿಸಿದರು.

ನಗರದ ಜೆಎಸ್ಎಸ್‌ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ರಸಾಯನ ವಿಜ್ಞಾನ ವಿಭಾಗವು ‘ಔಷಧ ಮತ್ತು ವಸ್ತು ವಿಜ್ಞಾನ’ ಕುರಿತು ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಇ–ಸಮ್ಮೇಳನದಲ್ಲಿ ‘ನೀರಿನ ಸಂಸ್ಕರಣೆಯಲ್ಲಿ ನ್ಯಾನೊ ತಂತ್ರಜ್ಞಾನದ ಬಳಕೆ’ ಕುರಿತು ಅವರು ಮಾತನಾಡಿದರು.

‘2050ರ ವೇಳೆಗೆ ವಿಶ್ವದ ಶೇ 40ರಷ್ಟು ಜನ ನೀರಿನ ಅಭಾವವನ್ನು ಎದುರಿಸಲಿದ್ದಾರೆ. ಪಾದರಸ, ಲೋಹದ ಚೂರುಗಳು, ಸೀಸ, ಸಲ್ಫೆಟ್‌, ಸೈನೆಡ್‌ ಮೊದಲಾದ ರಾಸಾಯನಿಕಗಳು ಜಲಮೂಲಗಳನ್ನು ಸೇರುತ್ತಿದ್ದು, ಜೀವಿಗಳ ಆಹಾರ ಸರಪಳಿ ಮೇಲೆ ಪರಿಣಾಮ ಬೀರುತ್ತಿದೆ. ಮಾನವನ ದೇಹವನ್ನು ಹೊಕ್ಕಿದ ವಿಷಯುಕ್ತ ಪದಾರ್ಥಗಳು ನರವ್ಯೂಹವನ್ನು ಬಾಧಿಸುತ್ತಿದ್ದು, ಮಕ್ಕಳ ಕಲಿಕೆಗೂ ಹಿನ್ನಡೆ ಉಂಟಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ನಗರಗಳ ತ್ಯಾಜ್ಯ ಹಾಗೂ ಕೈಗಾರಿಕೆಗಳಲ್ಲಿ ಬಳಸಿದ ನೀರಿನ ಸಂಸ್ಕರಣೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ತ್ಯಾಜ್ಯ ನೀರಿನ ಸಂಸ್ಕರಣೆಯ ಮಾನದಂಡಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು’ ಎಂದು ಪ್ರತಿಪಾದಿಸಿದರು.

ಇ–ಸಮ್ಮೇಳನಕ್ಕೆ ಚಾಲನೆ ನೀಡಿದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ‘ಆಧುನಿಕ ಕಾಯಿಲೆಗಳಿಗೆ ಔಷಧಗಳನ್ನು ಕಂಡು ಹಿಡಿಯಲು ಎಲ್ಲ ವಿಜ್ಞಾನ ಶಾಖೆಗಳ ತಜ್ಞರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ರಸಾಯನ ಜೀವ ವಿಜ್ಞಾನದಲ್ಲಿ ಸಂಶೋಧನೆಗಳು ಹೆಚ್ಚು ನಡೆಯುತ್ತಿವೆ’ ಎಂದರು.

‘ರಸಾಯನ ವಿಜ್ಞಾನದ ಹೊಸ ಬೆಳವಣಿಗೆಗಳು’ ಕುರಿತು ದಕ್ಷಿಣ ಆಫ್ರಿಕಾದ ನಟಾಲ್‌ನ ವಿಜ್ಞಾನಿ ಡಾ.ರಾಜಶೇಖರ್‌ ಕರ್ಪೂರಮಠ ಮಾತನಾಡಿದರು.

ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಚ್‌.ಸಿ.ಹೊನ್ನಪ್ಪ, ವಿಭಾಗದ ಮುಖ್ಯಸ್ಥ ಡಾ.ಮಲ್ಲೇಶ, ಜೆ.ಎಸ್‌.ವಿದ್ಯಾ, ಡಾ.ಎನ್‌.ವಿಜೇಂದ್ರ ಕುಮಾರ್‌, ಡಾ.ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.