ADVERTISEMENT

ಜನಸಾಗರದ ನಡುವೆ ಸಾಗಿದ ಜಂಬೂ ಸವಾರಿ

ಎತ್ತ ನೋಡಿದರೂ ಜನವೋ ಜನ..; ಮುಂಜಾನೆಯಿಂದ ರಾತ್ರಿಯಾದರೂ ಬತ್ತದ ಉತ್ಸಾಹ

ಡಿ.ಬಿ, ನಾಗರಾಜ
Published 8 ಅಕ್ಟೋಬರ್ 2019, 15:42 IST
Last Updated 8 ಅಕ್ಟೋಬರ್ 2019, 15:42 IST
ಮೈಸೂರಿನಲ್ಲಿ ಮಂಗಳವಾರ ನಡೆದ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ ಕಣ್ತುಂಬಿಕೊಳ್ಳಲು ನೆರೆದಿದ್ದ ಅಪಾರ ಜನಸಾಗರಪ್ರಜಾವಾಣಿ ಚಿತ್ರ : ಅನೂಪ್ ರಾಗ್. ಟಿ.
ಮೈಸೂರಿನಲ್ಲಿ ಮಂಗಳವಾರ ನಡೆದ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ ಕಣ್ತುಂಬಿಕೊಳ್ಳಲು ನೆರೆದಿದ್ದ ಅಪಾರ ಜನಸಾಗರಪ್ರಜಾವಾಣಿ ಚಿತ್ರ : ಅನೂಪ್ ರಾಗ್. ಟಿ.   

ಮೈಸೂರು: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಜನಾಕರ್ಷಣೆಯಾದ ಜಂಬೂ ಸವಾರಿ ಅಪಾರ ಜನಸಾಗರದ ನಡುವೆ ವಿಜಯದಶಮಿಯಂದು (ಮಂಗಳವಾರ) ವೈಭೋಗದಿಂದ ನೆರವೇರಿತು.

ಎತ್ತ ನೋಡಿದರೂ ಜನಸಾಗರ. ಜಂಬೂ ಸವಾರಿ ಸಾಗಿದ ರಾಜಮಾರ್ಗದುದ್ದಕ್ಕೂ ಕಿಕ್ಕಿರಿದಿದ್ದ ಜನಸಂದಣಿ ಕಾಲಿಡಲು ಜಾಗವಿಲ್ಲದಂತೆ ಜಮಾಯಿಸಿತ್ತು. ಮೂಡಣದ ಬಾನಂಗಳದಲ್ಲಿ ಭಾಸ್ಕರ ಉದಯಿಸುವ ಮುನ್ನವೇ ನೆರೆದಿದ್ದ ಜನಸ್ತೋಮ, ಪಡುವಣದಲ್ಲಿ ದಿನಕರ ಕೆಂಬಣ್ಣದೊಂದಿಗೆ ಅಸ್ತಂಗತನಾದರೂ; ತಮ್ಮೊಳಗಿನ ಉತ್ಸಾಹವನ್ನು ಕಿಂಚಿತ್ ಕುಂದಿಸಿಕೊಳ್ಳದೇ ಅಪೂರ್ವ ಕ್ಷಣಗಳಿಗಾಗಿ ಕಾದು ಕೂತಿತ್ತು.

ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ಅಂದಾಜು ಐದು ಕಿ.ಮೀ. ದೂರದ ರಾಜಮಾರ್ಗದ ಎರಡೂ ಬದಿ ಜನಸಾಗರವೇ ನೆರೆದಿತ್ತು. ತಮ್ಮ ಕಣ್ಮುಂದೆಯೇ ಹತ್ತು ಹಲವು ಕಲಾ ತಂಡಗಳು, ಸ್ತಬ್ಧಚಿತ್ರಗಳು ಹಾದು ಹೋದರೂ; ಯಾರೊಬ್ಬರ ಮನದೊಳಗಿನ ಕುತೂಹಲ ತಣಿಯಲಿಲ್ಲ. ತದೇಕ ಚಿತ್ತದಿಂದಲೇ ಅರಮನೆಯಿಂದ ಬರುವ ಮಾರ್ಗದತ್ತಲೇ ತಮ್ಮ ನೋಟ ನೆಟ್ಟಿದ್ದು ಸಹಜ ದೃಶ್ಯವಾಗಿತ್ತು.

ADVERTISEMENT

ಹಲವು ಕಲಾ ತಂಡಗಳ ಕಲಾವಿದರೇ ತಮ್ಮ ಬಳಿ ಬಂದು ಪ್ರದರ್ಶನ ನೀಡಿದರೂ; ಯಾರೊಬ್ಬರ ಮನ ತಣಿಯಲಿಲ್ಲ. ವ್ಹಾವ್... ಅತ್ಯದ್ಭುತ ಎಂಬ ಉದ್ಗಾರ ಹೊರಹೊಮ್ಮಿದರೂ; ತೃಪ್ತಪೆಯ ಭಾವ ಮೊಗದಲ್ಲಿ ಗೋಚರಿಸಲಿಲ್ಲ. ಗಜಪಡೆ ಸಾಲಾಗಿ ಹೆಜ್ಜೆ ಹಾಕಿದರೂ ಸಮಾಧಾನ ಕಂಡು ಬರಲಿಲ್ಲ. ಚಿನ್ನದ ಅಂಬಾರಿಯೊಳಗೆ ಚಾಮುಂಡೇಶ್ವರಿಯನ್ನು ಹೊತ್ತಿದ್ದ ಅರ್ಜುನ ರಾಜಗಾಂಭೀರ್ಯದೊಂದಿಗೆ ರಾಜ ಮಾರ್ಗದಲ್ಲಿ ಹೆಜ್ಜೆ ಹಾಕುವುದು ಕಂಡಾಕ್ಷಣವೇ ಎಲ್ಲರ ಮನದಲ್ಲೂ ಪುಳಕ.

ತಮ್ಮ ಕಣ್ಣಳತೆ ದೂರದಲ್ಲಿ ಅರ್ಜುನ ಕಂಡಾಕ್ಷಣ ಕೂತಿದ್ದವರೆಲ್ಲಾ ಎದ್ದು ನಿಂತರು. ಧನ್ಯತಾಭಾವದೊಂದಿಗೆ ಕೈ ಮುಗಿದು ನಮಿಸಿದರು. ಚಿನ್ನದ ಅಂಬಾರಿ, ಅಂಬಾರಿಯೊಳಗಿನ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು. ಸಮೀಪದಲ್ಲೇ ಸಾಗಿದ ಅಂಬಾರಿಯ ಜತೆ ಸೆಲ್ಫಿ ತೆಗೆದುಕೊಂಡರು. ವಿಡಿಯೊ ಚಿತ್ರೀಕರಿಸಿಕೊಂಡರು. ಹಲವರು ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರಗೈದು ಖುಷಿಪಟ್ಟರು.

ಅರ್ಜುನ ಸಾಗಿದ ಹಾದಿಯುದ್ದಕ್ಕೂ ನೂಕುನುಗ್ಗಲು. ರಸ್ತೆಯ ಇಕ್ಕೆಲಗಳಲ್ಲೂ ಭಾರಿ ಜನಸ್ತೋಮ. ಅಂಬಾರಿಯ ಹಿಂದೆ ರಸ್ತೆಗಿಳಿದ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸವಾಗಿತ್ತು. ಅರ್ಜುನನ ಸುತ್ತಲೂ ಖಾಕಿ ಸರ್ಪಗಾವಲಿತ್ತು. ಅರಮನೆಯ ಆವರಣದಿಂದ ಬನ್ನಿಮಂಟಪದವರೆಗೂ ಇದೇ ಚಿತ್ರಣ ಎಲ್ಲೆಡೆ ಗೋಚರಿಸಿತು.

ಪಾಸ್‌ ಇದ್ದರೂ ಪ್ರವೇಶವಿಲ್ಲ..!
ಅರಮನೆ, ಪಂಜಿನ ಕವಾಯತು ಮೈದಾನ ಪ್ರವೇಶಕ್ಕೆ ದಸರಾ ಸಮಿತಿ ವಿತರಿಸಿದ್ದ ಪಾಸ್‌ ಹೊಂದಿದ್ದ ಹಲವರಿಗೆ ಪ್ರವೇಶವೇ ದೊರಕದಾಯಿತು. ಮಂಗಳವಾರ ಮಧ್ಯಾಹ್ನ 12ರ ವೇಳೆಗ ಅರಮನೆ ಸುತ್ತ ಜನಜಂಗುಳಿಯೇ ನೆರೆದಿತ್ತು. ಪ್ರವೇಶದ್ವಾರ ತೆರೆದ ಕೆಲ ಹೊತ್ತಿನಲ್ಲೇ ಅರಮನೆ ಆವರಣ ಜನರಿಂದ ತುಂಬಿ ತುಳುಕಿತು. ಕೊನೆಗೆ ಪಾಸ್‌ ಇದ್ದ ಬಹುತೇಕರಿಗೆ ಪ್ರವೇಶ ಸಿಗದಿದ್ದಕ್ಕೆ ಅಸಮಾಧಾನವೂ ವ್ಯಕ್ತವಾಯಿತು.

‘ಪೊಲೀಸರು, ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿ ಹೇಳಿದವರನ್ನಷ್ಟೇ ಬಿಟ್ಟರು. ನಾವು ತಾಸುಗಟ್ಟಲೇ ಕಾದು ನಿಂತರು ಪ್ರವೇಶ ಕೊಡಲಿಲ್ಲ. ಒಳ ಹೋಗಲು ಯತ್ನಿಸಿದರೆ ಹಿಡಿದು ಹೊರಗೆಳೆದರು’ ಎಂದು ಟಿ.ಎನ್.ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

‘ಅರಮನೆ ಪ್ರವೇಶಕ್ಕೆ 26,000 ಪಾಸ್‌, ಪಂಜಿನ ಕವಾಯತು ವೀಕ್ಷಣೆಗೆ 32,000ಕ್ಕೂ ಹೆಚ್ಚು ಪಾಸ್‌ ವಿತರಿಸಲಾಗಿದೆ. ಆದರೆ ಈ ಪಾಸ್‌ ಯಾರಿಗೆ ದೊರೆತವು ಎಂಬುದೇ ಅರಿಯದಾಗಿದೆ. ಈ ಬಾರಿಯ ಗೋಲ್ಡ್‌ ಕಾರ್ಡ್‌ ಪಾಸ್‌ಗಳು ಸಹ ಪಾರದರ್ಶಕವಾಗಿ ವಿತರಣೆಯಾಗಿಲ್ಲ. ಜಿಲ್ಲಾಡಳಿತವೇ ಪಾಸ್‌ನ ವಿಷಯದಲ್ಲಿ ಕೊನೆ ಕ್ಷಣದವರೆಗೂ ಕತ್ತಲಲ್ಲಿತ್ತು’ ಎಂಬ ಮಾತುಗಳೇ ಅಧಿಕಾರಿ ವರ್ಗದಿಂದ ಕೇಳಿ ಬಂದವು. ಎರಡು ದಿನದಿಂದ ಕಾಳಸಂತೆಯಲ್ಲಿ ಮಾರಾಟವಾಗಿದ್ದು, ಗೋಚರಿಸಿತು.

ನೀರು–ಮಜ್ಜಿಗೆ ವಿತರಣೆ
ರಾಜಮಾರ್ಗದುದ್ದಕ್ಕೂ ಜಂಬೂಸವಾರಿಯ ಭದ್ರತೆಗಿದ್ದ ಪೊಲೀಸರು, ಕಲಾ ಪ್ರದರ್ಶನ ನೀಡಿದ ಕಲಾವಿದರಿಗೆ ಹಲವು ಸಂಘ–ಸಂಸ್ಥೆಗಳು ನೀರು–ಮಜ್ಜಿಗೆ ವಿತರಿಸಿದವು.

‘ಮುಖರ್ಜಿ ಫೌಂಡೇಶನ್‌ನಿಂದ 2013ರಿಂದಲೂ ನೀರು–ಮಜ್ಜಿಗೆ ವಿತರಿಸಲಾಗುತ್ತಿದೆ. ಈ ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ 10 ಕಡೆ ನೀರು–ಮಜ್ಜಿಗೆ ವಿತರಿಸಿದ್ದೇವೆ. ಬನ್ನಿಮಂಟಪದಲ್ಲಿ ನಾಲ್ಕು ಕಡೆ ಮಳಿಗೆ ತೆರೆದು ಪೊಲೀಸರಿಗೆ ಮಧ್ಯಾಹ್ನ–ರಾತ್ರಿಯ ಊಟ ಕೊಟ್ಟೆವು. ನೀರು–ಮಜ್ಜಿಗೆಯನ್ನು ನೀಡಿದೆವು. 5000 ಲೀಟರ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ವಿತರಿಸಿದೆವು. 120 ಸ್ವಯಂಸೇವಕರು ಈ ಕಾರ್ಯ ನಿರ್ವಹಿಸಿದೆವು’ ಎಂದು ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ಸಿ.ಎಸ್.ಸುಹಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದೇಶಿಗರ ಕಾತರ
ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ವಿದೇಶಿಗರು ಸಹ ಕಾತರತೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ರಾಜಮಾರ್ಗದ ನಡುವೆ ಅಲ್ಲಲ್ಲೇ ಕೂತು ಚಿನ್ನದ ಅಂಬಾರಿ ಹೊತ್ತ ಅರ್ಜುನ ಬರುವುದನ್ನೇ ಕಾದರು.

ರಾಜಮಾರ್ಗದಲ್ಲಿ ಸಂಚರಿಸಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಜನಸಾಗರದ ಚಿತ್ರಣವನ್ನು, ದಸರಾ ಸಂಭ್ರಮವನ್ನು ಸೆರೆ ಹಿಡಿದರು. ಎದುರು ಸಿಕ್ಕವರಿಗೆ ಶುಭ ಕೋರಿದರು. ಮಾತನಾಡಿಸಿದವರಿಗೆ ಹಸ್ತಲಾಘವ ನೀಡಿದರು. ಹಸಿವು ನೀಗಿಸಿಕೊಳ್ಳಲು ಹಣ್ಣುಗಳ ಮೊರೆ ಹೊಕ್ಕರು.

ಕೆಲ ಸಂಘಟನೆಗಳು ವಿದೇಶಿಗರನ್ನು ಆಯ್ದ ಜಾಗದಲ್ಲಿ ವೀಕ್ಷಣೆಗಾಗಿ ಕೂರಿಸಿದ್ದು ಗಮನ ಸೆಳೆಯಿತು. ಇಲ್ಲಿ ನೆರಳು–ಕುರ್ಚಿಯ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು.

ರಾತ್ರಿಯೇ ಜಾಗ ಹಿಡಿದಿದ್ದರು..!
ಮೈಸೂರಿಗರು, ಆಜುಬಾಜಿನ ಹಳ್ಳಿಗರು, ದೂರದ ಊರಿನವರು ಸಹ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ವೀಕ್ಷಣೆಗಾಗಿ ಸೋಮವಾರ ರಾತ್ರಿಯೇ ತಮ್ಮ ಜಾಗ ಹಿಡಿದುಕೊಂಡಿದ್ದರು. ಚಾಪೆಯೊಂದನ್ನು ಹಾಸಿ ನಿಗದಿಪಡಿಸಿಕೊಂಡಿದ್ದರು. ಇದರಲ್ಲಿ ಉತ್ತರ ಕರ್ನಾಟಕದವರೂ ಸೇರಿದ್ದು ವಿಶೇಷವಾಗಿತ್ತು.

ಕೆಲ ಪಟ್ಟಭದ್ರರು ಹಿಂದಿನ ವರ್ಷಗಳಂತೆಯೇ ಈ ಬಾರಿಯೂ ತಾವೇ ಶಾಮಿಯಾನ ಹಾಕಿಸಿಕೊಂಡು, ಕುರ್ಚಿಗಳನ್ನು ಹಾಕಿಕೊಂಡು ಜಂಬೂಸವಾರಿ ವೀಕ್ಷಣೆಗೆ ತಮ್ಮದೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದು ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.