ADVERTISEMENT

ರೋಹಿಣಿ ಸಿಂಧೂರಿ, ಮನೀಷ್ ಮೌದ್ಗಿಲ್ ಬ್ಲ್ಯಾಕ್‌ಮೇಲ್‌ಗೆ ಹೆದರಲ್ಲ: ಸಾ.ರಾ. ಮಹೇಶ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:38 IST
Last Updated 6 ಸೆಪ್ಟೆಂಬರ್ 2021, 8:38 IST
ಶಾಸಕ ಸಾ.ರಾ.ಮಹೇಶ್‌
ಶಾಸಕ ಸಾ.ರಾ.ಮಹೇಶ್‌   

ಮೈಸೂರು: ‘ಐಎಎಸ್‌ ಅಧಿಕಾರಿಗಳಾದ ಮನೀಷ್‌ ಮೌದ್ಗಿಲ್‌, ರೋಹಿಣಿ ಸಿಂಧೂರಿ ಅವರ ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆ ನಾನು ಹೆದರಲ್ಲ. ನನ್ನ ಬಾಯಿ ಮುಚ್ಚಿಸಲು ಯಾರಿಗೂ ಸಾಧ್ಯವಿಲ್ಲ. ನನಗೆ ಸೇರಿದ ಆಸ್ತಿಯ ಮರು ಸರ್ವೆಗೆ ಆದೇಶಿಸಿದ್ದನ್ನು ಸ್ವಾಗತಿಸುತ್ತೇನೆ’ ಎಂದು ಶಾಸಕ ಸಾ.ರಾ.ಮಹೇಶ್‌ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮರು ಸರ್ವೆಗೆ ಆದೇಶಿಸಿರುವುರಿಂದ ಸಾ.ರಾ.ಮಹೇಶ್‌ಗೆ ಢವಢವ ಆಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂತಹ ಯಾವುದೇ ಢವಢವ ಆಗಿಲ್ಲ. ಮರು ಸರ್ವೆ ನಡೆಸಲಿ. ನಾನು ಭೂ ಒತ್ತುವರಿ ಮಾಡಿದ್ದರೆ, ಅದನ್ನು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

‘ಸರ್ವೆ ಇಲಾಖೆ ಆಯುಕ್ತ ಮನೀಷ್‌ ಮೌದ್ಗಿಲ್‌ ಕಾನೂನುಬಾಹಿರವಾಗಿ ಆದೇಶ ಮಾಡಿದ್ದರೂ ಅವರನ್ನು ಸ್ವಾಗತಿಸುತ್ತೇನೆ. ಇದು ಭ್ರಷ್ಟಾಚಾರ ಮತ್ತು ಪ್ರಾಮಾಣಿಕತೆ ನಡುವಿನ ಹೋರಾಟ. ಇದನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ವಿರಮಿಸುವುದದಿಲ್ಲ’ ಎಂದರು.

ADVERTISEMENT

‘ಗೋಮಾಳ ಒತ್ತುವರಿ ಮಾಡಿ ಸಾ.ರಾ.ಚೌಲ್ಟ್ರಿ ನಿರ್ಮಿಸಲಾಗಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಆ ಬಗ್ಗೆ ನಾನೇ ಪ್ರಾದೇಶಿಕ ಆಯುಕ್ತರ ಮೇಲೆ ಒತ್ತಡ ಹೇರಿ ತನಿಖೆ ನಡೆಸಿದ್ದೆ. ಸರ್ವೆ ನಡೆದು ವರದಿಯೂ ಬಂದಿತ್ತು. ಒತ್ತುವರಿ ಆಗಿಲ್ಲ ಎಂಬುದು ಸ್ಪಷ್ವವಾಗಿತ್ತು’ ಎಂದರು.

‘ಮೌದ್ಗಿಲ್‌ ಅವರೇ ಇದೀಗ ನಿಮ್ಮ ಶಿಷ್ಯೆಯ ಮಾತು ಕೇಳಿ ಮರು ಸರ್ವೆಗೆ ಅದೇಶಿಸಿದ್ದೀರಿ. ನನ್ನ ಜಾಗದ ಅಕ್ಕಪಕ್ಕದವರು ಯಾರೂ ತಕರಾರು ಎತ್ತಿ ಅರ್ಜಿ ಸಲ್ಲಿಸಿಲ್ಲ. ತಕರಾರು ಅರ್ಜಿ ಇಲ್ಲದಿರುವಾಗ ಸರ್ವೆಗೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವೂ ನಿಮಗೆ ಇಲ್ಲವೇ’ ಎಂದು ಪ್ರಶ್ನಿಸಿದರು.

ವಿಶ್ವನಾಥ್‌, ಮೌದ್ಗಿಲ್ ಚೈನ್‌ ಹಿಡಿದು ಸರ್ವೆ ಮಾಡಲಿ:‘ಮರು ಸರ್ವೆಗೆ ಸಾ.ರಾ.ಮಹೇಶ್‌ ಹೆದರುವುದು ಏಕೆ’ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಕೇಳಿರುವುದಕ್ಕೆ ಪ್ರತಿಕ್ರಿಯಿಸಿ, ‘ಹೆದರೋರು ಯಾರು? ಸರ್ವೆ ತಂಡವನ್ನು ನಾನು ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ. ಒಂದು ಕಡೆ ವಿಶ್ವನಾಥ್‌, ಇನ್ನೊಂದು ಕಡೆ ಮನೀಷ್‌ ಮೌದ್ಗಿಲ್‌ ಚೈನ್‌ ಹಿಡಿದು ಸರ್ವೆ ಮಾಡಲಿ. ಬೇಕಿದ್ದರೆ ರೋಹಿಣಿ ಸಿಂಧೂರಿ ಚೈನ್‌ ಹಿಡಿಯಲು ನೆರವಾಗಲಿ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.