ADVERTISEMENT

ಮೈಸೂರಿನಲ್ಲಿ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಸೆಪ್ಟೆಂಬರ್ 8ರಿಂದ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 9:09 IST
Last Updated 3 ಸೆಪ್ಟೆಂಬರ್ 2022, 9:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೆ.8ರಿಂದ 10ರವರೆಗೆ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಪರಿಷತ್ತಿನ ಸಂಯೋಜಕ ಎ.ಎನ್.ಮಹೇಶ್‌ ತಿಳಿಸಿದರು.

‘ಇದೇ ಮೊದಲ ಬಾರಿಗೆ ಖ್ಯಾತ ವಿಜ್ಞಾನಿ ಎ.ಎಸ್. ಕಿರಣ್‌ಕುಮಾರ್‌ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸೆ.8ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ವಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಗುವುದು’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಪರಿಷತ್ತಿನ ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗ ನೀಡಿವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು, ವಿಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸುವುದು, ವಿಚಾರ ವಿನಿಮಯ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವುದು ಪ್ರಮುಖ ಉದ್ದೇಶವಾಗಿದೆ’ ಎಂದು ವಿವರಿಸಿದರು.

ನಾಲ್ವರಿಗೆ ಪ್ರಶಸ್ತಿ:

‘8 ಗೋಷ್ಠಿಗಳು ಹಾಗೂ ಪರಿಣತರಿಂದ 17 ಉ‍ಪನ್ಯಾಸಗಳಿರಲಿವೆ. ರಾಜ್ಯದ ವಿವಿಧೆಡೆಯಿಂದ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ವಿಜ್ಞಾನ ಜನಪ್ರಿಯಗೊಳಿಸಲು ಶ್ರಮಿಸಿದ ನಾಲ್ವರಿಗೆ ಕೆಆರ್‌ವಿಪಿ ಸಂಸ್ಥಾ‍ಪಕ ಅಧ್ಯಕ್ಷ ಎಚ್.ನರಸಿಂಹಯ್ಯ ಅವರ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆ ನಡೆದಿದೆ. ಗೋಷ್ಠಿಗಳ ಪ್ರಮುಖಾಂಶಗಳನ್ನು ಸೇರಿಸಿ ಸ್ಮರಣ ಸಂಚಿಕೆ ಹೊರತರಲಾಗುವುದು. ಇದೇ ಮೊದಲ ಬಾರಿಗೆ ನಿರ್ಣಯಗಳನ್ನು ಕೈಗೊಂಡು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಪಾಲ್ಗೊಳ್ಳಲು ಬಯಸುವವರು ₹ 250 ಪಾವತಿಸಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ:984405284 (ಸಿ.ಕೃಷ್ಣೇಗೌಡ) ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಕೆಆರ್‌ವಿಪಿಯ ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ, ಖಜಾಂಚಿ ಈ.ಬಸವರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಹರಿಪ್ರಸಾದ್, ಕೃಷ್ಣಮೂರ್ತಿ ರಾಜ್‌ ಅರಸ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್‌ ಮತ್ತು ಜಿಲ್ಲಾ ಸಮಿತಿ ಸದಸ್ಯ ಮುರಳೀಧರ್ ಇದ್ದರು.

ಗೋಷ್ಠಿಗಳ ಶೀರ್ಷಿಕೆಗಳು

* ವಿಜ್ಞಾನ ಶಿಕ್ಷಣ–ವಿಶೇಷವಾಗಿ ಭೌತವಿಜ್ಞಾನದಲ್ಲಿನ ಕೆಲವು ಅನುಭವಗಳು

* ಆನಂದಕರ ಅಣುಗುಣ

* ಶಾಂತಿಗಾಗಿ ವಿಜ್ಞಾನ

* ವಿಜ್ಞಾನ ಮತ್ತು ಮೂಢನಂಬಿಕೆಗಳು

* ಸಾಗರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ

* ವೈವಿಧ್ಯ– ಜೀವ ಜಗತ್ತಿನ ಜೀವಾಳ

* ವಿಜ್ಞಾನದ ಸೌಂದರ್ಯ ಮತ್ತು ಸೌಂದರ್ಯದ ವಿಜ್ಞಾನ

* ಭಾರತೀಯ ಬಾಹ್ಯಾಕಾಶ ಸಂಶೋಧನೆ–ಸಮಾಜದ ಏಳಿಗೆಯಲ್ಲಿ

* ಕೆರೆಗಳು–ಜೀವ ಜಲದ ಕಣಗಳು

* ಜೇಮ್ಸ್‌ ವೆಬ್ ದೂರದರ್ಶಕ

* ಜನವಿಜ್ಞಾನ ಚಳವಳಿಯ ಅನುಭವಗಳು

* ಮಹಿಳೆ ಮತ್ತು ವಿಜ್ಞಾನ

* ನಿತ್ಯ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನ

* ಸೌರಗ್ರಹದಿಂದ ಕಪ್ಪು ಕುಳಿಗಳತ್ತ– ನೂತನ ಖಗೋಳ ವಿಜ್ಞಾನದ ಸಿಂಹಾವಲೋಕನ

* ಕೃತಕ ಬುದ್ಧಿಮತ್ತೆಯಿಂದ ಮಾನವ ಸಮುದಾಯದ ಪ್ರಗತಿ

* ಮಿದುಳಿನ ವಯೋಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.