ADVERTISEMENT

ಅನುಮತಿ ನೀಡದೆ ಇದ್ದರೂ ಮಹಿಷ ದಸರಾ: ಪುರುಷೋತ್ತಮ್‌

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 9:14 IST
Last Updated 13 ಸೆಪ್ಟೆಂಬರ್ 2021, 9:14 IST

ಮೈಸೂರು: ಸರ್ಕಾರವು ಮಹಿಷ ದಸರಾಕ್ಕೆ ಅನುಮತಿ ನೀಡಿದರೆ ಅಥವಾ ನೀಡದೇ ಇದ್ದರೂ ಅ.5ರಂದು ಆಚರಣೆ ನಡೆಯಲಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ್‌ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಅಂದು ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ನಡೆಯಲಿದೆ. ಅನುಮತಿ ನೀಡದೆ ಇದ್ದರೆ ಅಶೋಕಪುರಂನಲ್ಲಿ ಕಾನುನು ಬದ್ಧವಾಗಿ, ಕೋವಿಡ್‌ ಮಾರ್ಗಸೂಚಿಯಂತೆ, ಯಾರಿಗೂ ತೊಂದರೆ ಮಾಡದೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ಮಹಿಷನನ್ನು ಗೌರವಿಸಲಾಗುತ್ತಿದೆ. ಮಹಿಷ ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಅಲ್ಲ. ಪ್ರಚೋದನಕಾರಿ ವ್ಯಕ್ತಿಯೂ ಅಲ್ಲ. ಮಹಿಷನ ಕಾಲದಲ್ಲಿ ಜಾತಿ ಎಂಬುದೇ ಇರಲಿಲ್ಲ. ಪುರಾಣದ ಕತೆಗಳಿಂದ, ಮನು ಧರ್ಮದ ಮೂಲಕ ಜಾತಿ ವ್ಯವಸ್ಥೆ ಭಾರತ ದೇಶದಲ್ಲಿ ಬಂದಿದೆ ಎಂದರು.

ADVERTISEMENT

ಸಂಶೋಧಕರು 20 ವರ್ಷ ಸಂಶೋಧನೆ ಮಾಡಿ ಮಹಿಷ ಮಂಡಲ ಇತ್ತು ಎಂದು ಸಾಕ್ಷೀಕರಿಸಿದ್ದಾರೆ. ವಿಶ್ವದ ಪ್ರಾಚೀನ ದೇಶಗಳ ಜತೆ ಪ್ರಾಚೀನ ಭಾರತದ ನಕ್ಷೆಯನ್ನು ಪ್ರಕಟಿಸಿ ಅದರಲ್ಲಿ ಮಹಿಷ ಮಂಡಲದ ಸುತ್ತಲಿನ ಪ್ರಮುಖ ಪ್ರಾಂತ್ಯಗಳನ್ನೂ, ಉತ್ತರದ 16 ಜಾನಪದ ಪ್ರಾಂತ್ಯಗಳನ್ನೂ ಹೆಸರಿಸಿದ್ದಾರೆ ಎಂದರು.

ಜಾತಿ ವ್ಯವಸ್ಥೆಯ ಮನಸ್ಥಿತಿ ಇರುವ ವ್ಯಕ್ತಿಗಳು ಮಹಿಷ ದಸರಾವನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳನ್ನು, ಅಧಿಕಾರಿಗಳನ್ನು ನಿಂದಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಆಗಿಲ್ಲ. ಇದು ಖಂಡನೀಯ. ಒಬ್ಬ ಸಂಸದ ಪ್ರಚೋದನಕಾರಿ ಹೇಳಿಕೆ ನೀಡಿರುವುದು ತಲೆತಗ್ಗಿಸುವ ವಿಚಾರ ಎಂದು ಪ್ರತಾಪಸಿಂಹ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಪ್ರೊ.ಮಹೇಶ್ವಚಂದ್ರಗುರು ಮಾತನಾಡಿ, ಇತಿಹಾಸಕ್ಕೆ ಗೌರವ ಕೊಡುವ ಉದ್ದೇಶದಿಂದ ಮಹಿಷ ದಸರಾ ಹಮ್ಮಿಕೊಳ್ಳಲಾಗಿದೆ. ಮಹಿಷ ಎಂಬುದು ಸತ್ಯ, ಚಾಮುಂಡಿ ಎಂಬುದು ಮಿಥ್ಯೆ. ಚಾರಿತ್ರಿಕ ಪುರುಷನಾಗಿರುವ ಮಹಿಷನನ್ನು ದಮನ ಮಾಡುವುದು ಅಕ್ಷಮ್ಯ. ಮಹಿಷ ಪ್ರಕೃತಿ, ಇತಿಹಾಸ ಮತ್ತು ಸಂವಿಧಾನ ಸಂಕೇತ. ಮಾನವೀಯತೆಗೆ ವಿರುದ್ಧವಾಗಿರುವ ವೈದಿಕರು ವಿವಿಧ ಕಾಲಘಟ್ಟದಲ್ಲಿ ಪುರಾಣಗಳನ್ನು ಸೃಷ್ಟಿಸಿದ್ದಾರೆ. ಅವರ ನಡೆ ನುಡಿಯನ್ನು ವಿಚಾರವಾದಿಗಳು, ಪ್ರಗತಿಪರರು ಖಂಡಿಸಬೇಕು ಎಂದರು.

2019ರಲ್ಲಿ ಅಧಿಕಾರಕ್ಕೆ ಬಂದ ಮನುವಾದಿಗಳು, ಮಾನವೀಯತೆಯ ವಿರೋಧಿಗಳು ಮಹಿಷ ದಸರಾಕ್ಕೆ ಅಡ್ಡಿ, ಆತಂಕ ಉಂಟು ಮಾಡಿದ್ದರು. ಸಂಸದ ಪ್ರತಾಪ ಸಿಂಹ ಅವರಿಗೆ ಮೂಲನಿವಾಗಳ ಬಗ್ಗೆ ಏಕೆ ಅಗೌರವ? ಸಮಾನತೆ ವಿರೋಧಿಸುವವರನ್ನು ನಾವು ಸಾಂವಿಧಾನಿಕವಾಗಿ ವಿರೋಧ ಮಾಡುತ್ತಿದ್ದೇವೆ. ಮೂಲನಿವಾಸಿಗಳ ಧಾರ್ಮಿಕ ಹಕ್ಕಾಗಿರುವ ಮಹಿಷ ದಸರಾವನ್ನು ಆಚರಿಸುತ್ತೇವೆ. ಸರ್ಕಾರದ ದಸರಾಕ್ಕೆ ಇದು ಪರ್ಯಾಯ ಅಲ್ಲ. ಇದು ಮೂಲನಿವಾಸಿಗಳ ದಸರಾ. ಅದಕ್ಕಾಗಿ ಅನುಮತಿ ನೀಡಬೇಕು ಎಂದರು.

ಪ್ರೊ.ಕೆ.ಎಸ್‌.ಭಗವಾನ್‌ ಮಾತನಾಡಿ, ಮಹಿಷ ಒಬ್ಬ ಕೆಟ್ಟ ವ್ಯಕ್ತಿಯಾಗಿದ್ದರೆ ಆತನ ಹೆಸರನ್ನು ಒಂದು ಪ್ರದೇಶಕ್ಕೆ ಇಡುತ್ತಿದ್ದರೇ? ಆತ ಒಬ್ಬ ಜನ ರಕ್ಷಕ ರಾಜ ಎಂದರು.

ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್‌.ಶಿವರಾಮು, ದಲಿತ ವೆಲ್ಫೇರ್‌ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಿಕ್ಕಂದಾನಿ, ಸಾಹಿತಿ ಸಿದ್ದಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.