ADVERTISEMENT

ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಅಭಿಮನ್ಯು, ಮಾವುತನ ಕಂಡರೆ ಬಲು ಪ್ರೀತಿ

ಕೆ.ಓಂಕಾರ ಮೂರ್ತಿ
Published 16 ಸೆಪ್ಟೆಂಬರ್ 2021, 7:42 IST
Last Updated 16 ಸೆಪ್ಟೆಂಬರ್ 2021, 7:42 IST
ಅಭಿಮನ್ಯು ಮೇಲೆ ಕುಳಿತಿರುವ ಮಾವುತ ವಸಂತ
ಅಭಿಮನ್ಯು ಮೇಲೆ ಕುಳಿತಿರುವ ಮಾವುತ ವಸಂತ   

ಮೈಸೂರು: ‘ಅಭಿಮನ್ಯು ಆನೆಯನ್ನು ನನ್ನ ಕಾಲಿನಿಂದಲೇ ನಿಯಂತ್ರಿಸುತ್ತೇನೆ. ಕಾಲುಗಳೇ ಬ್ರೇಕ್‌, ಕ್ಲಚ್‌ ಹಾಗೂ ಸ್ಟಿಯರಿಂಗ್‌...’

– ಹೀಗೆ ಹೇಳುವಾಗ ಮಾವುತ ವಸಂತ ಅವರ ಮೊಗದಲ್ಲಿ ಮಹತ್ತರವಾದದ್ದನ್ನು ಸಾಧಿಸಿದ ಖುಷಿ ಇಣುಕಿತ್ತು. ಅವರಿಗೆ ಅಭಿಮನ್ಯುವೇ ಜೀವಾಳ.

‘ಆನೆ ಪಳಗಿಸುವುದು, ಅವುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು, ದಸರೆಯ ಜನಸಾಗರದ ನಡುವೆ ನಡೆಸಿಕೊಂಡು ಹೋಗುವುದು ಹಾಗೂ ಕಾರ್ಯಾಚರಣೆಗೆ ಬಳಸಿಕೊಳ್ಳುವುದು ನಾವು ಕೊಡುವ ಕಮಾಂಡ್‌ ಅವಲಂಬಿಸಿರುತ್ತದೆ. ಮಾತನಾಡಿ ಕಮಾಂಡ್‌ ಕೊಡುವುದು ತೀರಾ ಕಡಿಮೆ. ಮದವಿದ್ದಾಗಲೂ ಕಾರ್ಯಾಚರಣೆಗೆ ಬಳಸಿದ್ದೇನೆ. ಬೇರೆಯವರು ಸವಾರಿಗೆ ಮುಂದಾದರೆ ಅವರ ಮಾತನ್ನು ಈ ಆನೆ ಕೇಳಲ್ಲ, ಕೆಲಸವನ್ನೂ ಮಾಡಲ್ಲ’ ಎಂದು ಹೇಳಿದರು.

ADVERTISEMENT

‘ಇದನ್ನು ಇಂಜೆಕ್ಷನ್‌ ನೀಡಿ ಸೆರೆ ಹಿಡಿದಿದ್ದಲ್ಲ; ಖೆಡ್ಡಾಕ್ಕೆ ಕೆಡವಿ ಸೆರೆ ಹಿಡಿದ ಬಲಶಾಲಿ ಸಲಗ. ಜೊತೆಗೆ ಧೈರ್ಯಶಾಲಿ. ಈ ಆನೆ ಜೊತೆಯಲ್ಲಿದ್ದರೆ ಯಾವುದೇ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಲಗವನ್ನು 1977ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಳ್ಳ ಪ್ರದೇಶದಲ್ಲಿ ಖೆಡ್ಡಾಕ್ಕೆ ಬೀಳಿಸಿ ಸೆರೆ ಹಿಡಿಯಲಾಗಿತ್ತು. ಆರಂಭದಲ್ಲಿ ಲಾರಿಗೆ ಟಿಂಬರ್‌ ತುಂಬಿಸಲು ಬಳಸಲಾಗುತಿತ್ತು. ಅದಕ್ಕೆ ಆಗ ಸಣ್ಣಪ್ಪ ತರಬೇತಿ ನೀಡಿ ಪಳಗಿಸಿದ್ದರು. ‌ಅವರ ನಿವೃತ್ತಿ ಬಳಿಕ ಜವಾಬ್ದಾರಿ ಪುತ್ರ ವಸಂತ ಅವರ ಹೆಗಲೇರಿತು.

‘ನಮ್ಮ ಅಜ್ಜ (ತಾಯಿ ತಂದೆ) ಮಾವುತರಾಗಿದ್ದರು. ಅದನ್ನು ನೋಡಿ ತಂದೆ ಸಣ್ಣಪ್ಪ ಆನೆ ಪಳಗಿಸುವುದನ್ನು ಕಲಿತರು. ನಾನು ಕೂಡ ಅವರ ಹಾದಿಯನ್ನೇ ಹಿಡಿದೆ. ಶಾಲೆಗೆ ಕಾಲಿಡಲೇ ಇಲ್ಲ. ಮೊಬೈಲ್‌ನಲ್ಲಿ ಹೆಸರು ಬರೆದು ನಂಬರ್‌ ಸೇವ್‌ ಮಾಡಿಕೊಳ್ಳಲೂ ನನಗೆ ಬರುವುದಿಲ್ಲ. ಆದರೆ, ಆನೆ ಪಳಗಿಸುವ ವೃತ್ತಿಯೇ ನನ್ನ ಕೈಹಿಡಿಯಿತು’ ಎಂದು ಭಾವುಕರಾದರು.

ಚಿಕ್ಕಂದಿನಿಂದಲೇ ಆನೆ ಜೊತೆ ಒಡನಾಟವಿದ್ದುದರಿಂದ ಇಬ್ಬರ ನಡುವೆ ಗಾಢ ಆಪ್ತತೆ ಬೆಳೆದಿದೆ. ಉಳಿದ ಯಾರನ್ನೂ ಈ ಆನೆ ತನ್ನ ಬಳಿ ಬಿಟ್ಟುಕೊಳ್ಳುವುದಿಲ್ಲ.

‌‘ಕಾರ್ಯಾಚರಣೆ ವೇಳೆ ಆನೆಗಳ ನಡುವೆ ದೊಡ್ಡ ಕಾಳಗವೇ ನಡೆಯುತ್ತದೆ. ಕಾಡಾನೆಗಳ ಅಬ್ಬರಕ್ಕೆ ಸಾಕಾನೆಗಳು ಒಮ್ಮೆಲೇ ಹಿಂದಿರುಗಿ ಓಡುತ್ತವೆ. ದುತ್ತನೇ ಎದುರಾಗುವ ಹುಲಿ ಕಂಡು ಬೆದರುತ್ತವೆ. ಆದರೆ, ನಾವು ನೀಡುವ ಕಮಾಂಡ್‌ ಮೇಲೆ ಆನೆಗಳು ಧೈರ್ಯದಿಂದ ಮುನ್ನುಗ್ಗುತ್ತವೆ. ನಾವು ಭಯಪಟ್ಟರೆ ಆನೆಯೂ ಭಯಪಡುತ್ತದೆ’ ಎಂದರು.‌

ಖೆಡ್ಡಾ ಮತ್ತು ಚುಚ್ಚುಮದ್ದು: ಕಾಡಾನೆ, ಪುಂಡಾನೆಗಳನ್ನು ಎರಡು ವಿಧಗಳಲ್ಲಿ ಸೆರೆ ಹಿಡಿಯುತ್ತಾರೆ. ಖೆಡ್ಡಾ ತೋಡಿ, ಅದಕ್ಕೆ ಆನೆ ಬೀಳುವಂತೆ ಮಾಡುತ್ತಾರೆ. ಮತ್ತೊಂದು ವಿಧಾನವೆಂದರೆ ಸಾಕಾನೆ ಮೇಲೆ ಸಾಗಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವುದು. ಈಗ ಈ ವಿಧಾನವೇ ಚಾಲ್ತಿಯಲ್ಲಿದೆ. ಹಿಂದೆ ಖೆಡ್ಡಾ ತೋಡಿ ಸೆರೆ ಹಿಡಿಯಲಾಗುತಿತ್ತು.

‘ಅರಿವಳಿಕೆ ನೀಡಿ ಸೆರೆ ಹಿಡಿದ ಆನೆಗಳು ಸಾಮಾನ್ಯ ಸ್ಥಿತಿಗೆ ಬರಲು, ಬಲಶಾಲಿಯಾಗಲು ಕನಿಷ್ಠ ಐದು ವರ್ಷ ಬೇಕು’ ಎಂಬುದು ವಸಂತ ಅವರ ಪ್ರತಿಪಾದನೆ.

ಯಾರು ಬಲಿಷ್ಠ: ಅರ್ಜುನನೋ, ಅಭಿಮನ್ಯುವೋ?: ‌ಹಿಂದೆ ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದ ಅರ್ಜುನ ಆನೆ ಬಲಶಾಲಿಯೋ, ಈಗ ಅಂಬಾರಿ ಹೊರುತ್ತಿರುವ ಅಭಿಮನ್ಯು ಆನೆ ಬಲಶಾಲಿಯೋ?

ಈ ಪ್ರಶ್ನೆಗೆ, ಸುಮಾರು 22 ವರ್ಷಗಳಿಂದ ದಸರೆಯಲ್ಲಿ ‍ಪಾಲ್ಗೊಳ್ಳುತ್ತಿರುವ ಆನೆ ತರಬೇತುದಾರ ಅಕ್ರಂ ಜಾಣತನದ ಉತ್ತರ ಕೊಡುತ್ತಾರೆ.

‘ಈ ಎರಡೂ ಆನೆಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಧೈರ್ಯ, ತಾಕತ್ತು ಪ್ರದರ್ಶಿಸುತ್ತವೆ. ಆದರೆ ಅದೆಲ್ಲ, ಆನೆಗಳ ಮೇಲೆ ಕೂರುವ ಮಾವುತನನ್ನು ಅವಲಂಬಿಸಿರುತ್ತದೆ. ಆತನ ಆಜ್ಞೆ, ಸಂಜ್ಞೆ, ಕಾಲು ಹಾಗೂ ಕೈ ಮೂಲಕ ನೀಡುವ ಸೂಚನೆಗೆ ತಕ್ಕಂತೆ ಪ್ರತಿಕ್ರಿಯಿಸುತ್ತವೆ. ಕಾರ್ಯಾಚರಣೆ ವೇಳೆ ಕಾಡಾನೆಯೋ, ಹುಲಿಯೋ ಎದುರಾದಾಗ ಮಾವುತ ಭಯಗೊಂಡರೆ ಆನೆ ಅರ್ಧ ಸೋತಂತೆ. ಮಾವುತ ಧೈರ್ಯದಿಂದ ಆನೆಗೆ ಆಜ್ಞೆ ಮಾಡಿದರೆ ಅವು ಮುನ್ನುಗ್ಗಿಸಿ ಎದುರಾಳಿಯ ಸೊಕ್ಕಡಗಿ
ಸುತ್ತವೆ’‌ ಎಂದು ಹೇಳುತ್ತಾರೆ.

l ನಾಳೆ: ಹುಲಿ ಸೆರೆಗೂ ಎತ್ತಿದ ಕೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.