ADVERTISEMENT

ನಾವೇನು ಬಳೆ ತೊಟ್ಟುಕೊಂಡಿಲ್ಲ: ಪ್ರತಾಪ ಸಿಂಹ ಹೇಳಿಕೆಗೆ ತನ್ವೀರ್‌ ಸೇಠ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 8:54 IST
Last Updated 9 ಸೆಪ್ಟೆಂಬರ್ 2021, 8:54 IST
ತನ್ವೀರ್‌ ಸೇಠ್ ಮತ್ತು ಪ್ರತಾಪ ಸಿಂಹ
ತನ್ವೀರ್‌ ಸೇಠ್ ಮತ್ತು ಪ್ರತಾಪ ಸಿಂಹ   

ಮೈಸೂರು: ‘ಸುಪ್ರೀಂ ಕೋರ್ಟ್‌ ತೀರ್ಪಿನಂತೆ ನಡೆಯುತ್ತಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸುವ ನೆಪದಲ್ಲಿ ಸಂಸದ ಪ್ರತಾಪ ಸಿಂಹ ಕೋಮುದ್ವೇಷ ಬಿತ್ತುತ್ತಿದ್ದಾರೆ’ ಎಂದು ಶಾಸಕ ತನ್ವೀರ್‌ ಸೇಠ್ ಟೀಕಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾವ ಸಂದರ್ಭದಲ್ಲಿ, ಏನು ಮಾತನಾಡಬೇಕೆಂದು ತಿಳಿದಿರಬೇಕು. ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಧಮಕಿ ಹಾಕಿದರೆ, ನಾವು ಯಾರೂ ಬಳೆ ತೊಟ್ಟು ಕುಳಿತುಕೊಂಡಿಲ್ಲ’ ಎಂದು ತಿರುಗೇಟು ನೀಡಿದರು.

‘ಚುನಾಯಿತ ಪ್ರತಿನಿಧಿ ಜನರ ರಕ್ಷಣೆಗೆ ನಿಲ್ಲಬೇಕೇ ಹೊರತು, ಪರಸ್ಪರ ಎತ್ತಿಕಟ್ಟುವುದಲ್ಲ. ಕೋಮು ಭಾವನೆ ಕೆರಳಿಸುವ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ನಿನ್ನೆ ಮೊನ್ನೆ ತಯಾರಿಸಿ ಕೊಟ್ಟಿಲ್ಲ. ಅದನ್ನು 2013 ರಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು’ ಎಂದು ಪ್ರತಿಪಾದಿಸಿದರು.

ADVERTISEMENT

‘ಸಂಸದರ ವರ್ತನೆ ಬಿಜೆಪಿಗೆ ನಾಚಿಕೆಗೇಡಿನ ಸಂಗತಿ. ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸುವ ಬದಲು ಕೋಮು ದ್ವೇಷ ಹರಡಲು ಯತ್ನಿಸಿರುವ ಅವರು 2013ರ ಸುಪ್ರೀಂ ಕೋರ್ಟ್‌ ಆದೇಶವನ್ನು ಓದಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸಲಹೆ ನೀಡಿದರು.

‘ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಕೋಮುಗಲಭೆ ಸೃಷ್ಟಿಸಿ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ಜನ ಈ ಕುತಂತ್ರದ ಬಗ್ಗೆ ಎಚ್ಚರದಿಂದಿರಬೇಕು’ ಎಂದರು.

ಬುಧವಾರ ನಡೆದ ಮೈಸೂರು ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಪ್ರತಾಪ ಸಿಂಹ ಅವರು, ‘ಮೊದಲು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ತೆರವುಗೊಳಿಸಿ, ನಂತರ ದೇವಾಲಯಗಳನ್ನು ಮುಟ್ಟಿ’ ಎಂದು ಜಿಲ್ಲಾಧಿಕಾರಿಗೆ ತಾಕೀತು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.