ADVERTISEMENT

ಮೈಸೂರು ದಸರಾ | ಪಂಜಿನ ಕವಾಯತು, ಡೇರ್ ಡೆವಿಲ್ಸ್ ಸಾಹಸ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:43 IST
Last Updated 8 ಅಕ್ಟೋಬರ್ 2019, 19:43 IST
ದಸರಾ ಅಂಗವಾಗಿ ಬನ್ನಿಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತಿನ ಸೊಬಗು
ದಸರಾ ಅಂಗವಾಗಿ ಬನ್ನಿಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತಿನ ಸೊಬಗು   

ಮೈಸೂರು: ಎದೆ ಝಲ್ಲೆನಿಸುಂತೆ ಮಾಡಿದ ಡೇವಿರ್‌ ಡೆವಿಲ್ಸ್‌ ತಂಡ, ದೇಶಪ್ರೇಮ ಉಕ್ಕಿಹರಿಸಿದ ಪಥಸಂಚಲನ, ಮನಸ್ಸಿಗೆ ಮುದ ನೀಡಿದ ನೃತ್ಯ ಪ್ರದರ್ಶನ, ಬೆಂಕಿಯೊಂದಿಗಿನ ಸರಸ, ಲೇಸರ್‌ ಬೆಳಕಿನ ಚಿತ್ತಾರ...

ನಾಡಹಬ್ಬ ದಸರೆ ಅಂಗವಾಗಿ ಮಂಗಳವಾರ ರಾತ್ರಿ ಬನ್ನಿಮಂಟಪದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು. ಕ್ರೀಡಾಂಗಣದಲ್ಲಿ ಕಿಕ್ಕಿರಿದ್ದು ನೆರೆದಿದ್ದ 32 ಸಾವಿರಕ್ಕೂ ಅಧಿಕ ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದ ಈ ಸಮಾರಂಭದೊಂದಿಗೆ ನಾಡಹಬ್ಬಕ್ಕೆ ವರ್ಣರಂಜಿತ ತೆರೆಬಿತ್ತು.

ಎರಡೂವರೆ ಗಂಟೆ ನಡೆದ ಸಾಹಸ, ನೃತ್ಯ, ಸಂಗೀತ ಮತ್ತು ಲೇಸರ್‌ ಬೆಳಕಿನ ಪ್ರದರ್ಶನ ಜನರನ್ನು ಮೂಕವಿಸ್ಮಿತಗೊಳಿಸಿದವು.

ADVERTISEMENT

ಸಂಜೆ 7ಕ್ಕೆ ಆರಂಭವಾದ ಕಾರ್ಯಕ್ರಮ ರಾತ್ರಿ 9.30ರ ವರೆಗೆ ಮುಂದುವರಿಯಿತು. ಆರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸಿದರು. ಆ ಬಳಿಕ ಕುಶಾಲುತೋಪು ಹಾಗೂ 21 ಸುತ್ತು ಸಿಡಿಮದ್ದು ಸಿಡಿಸಲಾಯಿತು.

ಅನಂತರ ನಡೆದ ಆಕರ್ಷಕ ಪಥಸಂಚಲನ ನೆರೆದವರಲ್ಲಿ ದೇಶಪ್ರೇಮ ಉಕ್ಕಿಹರಿಸಿತು. ಅಶ್ವಾರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ ತುಕಡಿಗಳು, ಗೃಹರಕ್ಷಕ ದಳ, ಎನ್‌ಸಿಸಿ, ಸೇವಾದಳ ಒಳಗೊಂಡಂತೆ 19 ತಂಡಗಳು ವಿ.ಶೈಲೇಂದ್ರ ಅವರ ನೇತೃತ್ವದಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡವು.

ಡೇರ್‌ಡೆವಿಲ್ಸ್‌ ಸಾಹಸ: ರಾಜಸ್ತಾನದ ಜಬಲ್ಪುರದ ‘ಡೇರ್‌ ಡೆವಿಲ್ಸ್‌’ ಮಿಲಿಟರಿ ತಂಡದವರು ಮೋಟರ್‌ ಬೈಕ್‌ಗಳಲ್ಲಿ ನೀಡಿದ ಸಾಹಸ ಪ್ರದರ್ಶನ ಎಲ್ಲರ ಮೈನವಿರೇಳಿಸಿತು. ದಿಶಾಂತ್‌ ಕಠಾರಿಯಾ ನೇತೃತ್ವದ 30 ಸದಸ್ಯರು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ವಿವಿಧ ಕಸರತ್ತು ನೀಡಿದರು.

ಬೈಕ್‌ಗಳು ವಿರುದ್ಧ ದಿಕ್ಕುಗಳಿಗೆ ವೇಗವಾಗಿ ದೂಳೆಬ್ಬಿಸುತ್ತಾ ಸಾಗಿದಾಗ ಎಲ್ಲರೂ ರೋಮಾಂಚನಗೊಂಡರು. ಬೈಕ್‌ಗಳಲ್ಲಿ ನಾನಾ ಭಂಗಿಗಳಲ್ಲಿ ಕುಳಿತು ಕಸರತ್ತು ಪ್ರದರ್ಶಿಸಿದರು. ಇಂಧನ ಟ್ಯಾಂಕ್‌ ಮೇಲೆ ನಿಂತು, ವ್ಯಾಯಾಮ ಮಾಡುತ್ತಾ, ಏಣಿ ಏರುತ್ತಾ ಕಸರತ್ತು ನಡೆಸಿದರು.

ಒಂದೇ ಬೈಕ್‌ನಲ್ಲಿ 8–10 ಮಂದಿಯಿಂದ ಲೋಟಸ್‌, ಕ್ರಿಸ್‌ಮಸ್‌ ಟ್ರೀ ಆಕೃತಿ ನಿರ್ಮಿಸಿದರು. ರಾಮ, ರಾವಣನ ನಡುವಿನ ಯುದ್ಧದ ಸನ್ನಿವೇಶವನ್ನು ತೋರಿಸಿದರು. ಬೆಂಕಿಯ ರಿಂಗ್‌ನೊಳಗೆ ಮತ್ತು ಸಾಲಾಗಿ ಮಲಗಿದ 12 ಮಂದಿಯ ಮೇಲಿನಿಂದ ಬೈಕ್‌ನಲ್ಲಿ ಜಂಪ್‌ ಮಾಡುವ ಪ್ರದರ್ಶನ ನೀಡಿದರು.

‘ಸಿಸರ್‌ (ಕತ್ತರಿ) ಕ್ರಾಸಿಂಗ್’, ಡಬಲ್‌ ಕ್ರಾಸಿಂಗ್‌, ಪ್ಯಾರಲಲ್ ಕ್ರಾಸಿಂಗ್‌ ಮತ್ತು ಸುಸೈಡಲ್ ಕ್ರಾಸಿಂಗ್ ಸಾಹಸ ಪ್ರದರ್ಶಿಸುವಾಗಲಂತೂ ಎಲ್ಲರಿಗೂ ಒಂದು ಕ್ಷಣ ಎದೆಬಡಿತ ನಿಂತ ಅನುಭವ. ಮಕ್ಕಳು, ಹಿರಿಯರು ತಮಗರಿವಿಲ್ಲದೆಯೇ ‘ಹೋ’ ಎಂದು ಉದ್ಗರಿಸಿದರು.

ನೃತ್ಯ ವೈಭವ: ಡಿಎನ್‌ಎ ಎಂಟರ್‌ಟೇನ್‌ಮೆಂಟ್‌ ವತಿಯಿಂದ ನೃತ್ಯ ಪ್ರದರ್ಶನ ಆಯೋಜಿಸಲಾಯಿತು. 235 ಕಲಾವಿದರು 18 ನಿಮಿಷ ಪ್ರದರ್ಶನ ನೀಡಿದರು.

‘ಎಷ್ಟೊಂದು‌ ಸುಂದರ ಮೈಸೂರು ದಸರಾ’ ಹಾಡಿಗೆ ಕಲಾವಿದರು ಹೆಜ್ಜೆ ಹಾಕಿ ಮೈಸೂರು ರಾಜರ ಆಡಳಿತದ ನೆನಪುಗಳನ್ನು ಬಿಚ್ಚಿಟ್ಟರು. ‘ಬಾರಿಸು ಕನ್ನಡ ಡಿಂಡಿಮವ’, ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.

ಟೆಂಟ್‌ ಪೆಗ್ಗಿಂಗ್‌: ಮೈಸೂರಿನ ಅಶ್ವಾರೋಹಿ ಪಡೆಯ ಸಿಬ್ಬಂದಿ 12 ಕುದುರೆಗಳ ಜತೆ ನಡೆಸಿಕೊಟ್ಟ ಟೆಂಟ್‌ ಪೆಗ್ಗಿಂಗ್‌ ಸಾಹಸ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ನಾಗಾಲೋಟದಿಂದ ಕುದುರೆ ಸವಾರಿ ಮಾಡುತ್ತಾ ಬಂದು ಭರ್ಚಿಯಿಂದ ಮೇಲಕ್ಕೆತ್ತುವ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಆ ಬಳಿಕ ಲೇಸರ್ ಕಿರಣಗಳ ಪ್ರದರ್ಶನ ನಡೆಯಿತು. ದಸರಾ ಇತಿಹಾಸ, ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಬೃಹತ್‌ ಪರದೆಯಲ್ಲಿ ಲೇಸರ್‌ ಬೆಳಕಿನಲ್ಲಿ ಮೂಡಿಸಲಾಯಿತು.

ಕೊನೆಯಲ್ಲಿ ಆಕರ್ಷಕ ಪಂಜಿನ ಕವಾಯತು ನಡೆಯಿತು. ಹಾಸನದಲ್ಲಿ ತರಬೇತಿ ನಿರತರಾಗಿರುವ 300 ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಸಂಗೀತದ ತಾಳಕ್ಕೆ ತಕ್ಕಂತೆ ಬೆಂಕಿಯೊಂದಿಗೆ ಸರಸವಾಡಿದರು. ‘ಸುಸ್ವಾಗತ’, ‘ಕರ್ನಾಟಕ ಪೊಲೀಸ್’, ‘ವೆಲ್‌ಕಂ ಟು ಆಲ್’, 'ಹ್ಯಾಪಿ ದಸರಾ' ಬರಹಗಳನ್ನು ಪಂಜಿನ ಮೂಲಕ ಮೂಡಿಸಿದರು. ಆಕರ್ಷಕ ಪಟಾಕಿ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಸಿ.ಟಿ.ರವಿ, ಮಾಧುಸ್ವಾಮಿ, ವಿ.ಸೋಮಣ್ಣ, ಶಾಸಕ ತನ್ವೀರ್ ಸೇಠ್, ಮೇಯರ್‌ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.