ADVERTISEMENT

ಎನ್‌ಟಿಎಂ ಶಾಲೆ, ನಿರಂಜನ ಮಠ ಉಳಿಸಿ: ರಾಮಕೃಷ್ಣ ಆಶ್ರಮದ ವಿರುದ್ಧ ಪ್ರತಿಭಟನೆ

ನಿರಂಜನ ಮಠ, ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 4:05 IST
Last Updated 16 ಸೆಪ್ಟೆಂಬರ್ 2021, 4:05 IST
ಮೈಸೂರಿನ ನಿರಂಜನ ಮಠ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ)ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ನೂರಾರು ಮಂದಿ ಬುಧವಾರ ನಗರದಲ್ಲಿ ಪ್ರತಿಭಟನಾಜಾಥಾ ನಡೆಸಿದರು
ಮೈಸೂರಿನ ನಿರಂಜನ ಮಠ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ)ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ನೂರಾರು ಮಂದಿ ಬುಧವಾರ ನಗರದಲ್ಲಿ ಪ್ರತಿಭಟನಾಜಾಥಾ ನಡೆಸಿದರು   

ಮೈಸೂರು: ಇಲ್ಲಿನ ಮಹಾರಾಣಿ ಮಾದರಿ ಶಾಲೆ (ಎನ್‌ಟಿಎಂ) ಹಾಗೂ ನಿರಂಜನ ಮಠ ಉಳಿಸಬೇಕು ಎಂದು ಆಗ್ರಹಿಸಿ ಬುಧವಾರ ನಗರದಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು. ಮೆರವಣಿಗೆಯುದ್ದಕ್ಕೂ ರಾಮಕೃಷ್ಣ ಆಶ್ರಮದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

‘ಕನ್ನಡ ಶಾಲೆ-ನಿರಂಜನ ಮಠ ಆಸ್ಮಿತೆ ಉಳಿವು-ಸಂರಕ್ಷಣಾ ಜಾಥಾ’ ಘೋಷವಾಕ್ಯದಡಿ ನಾರಾಯಣಶಾಸ್ತ್ರಿ ರಸ್ತೆಯ ಎನ್‌ಟಿಎಂ ಶಾಲೆಯಿಂದ ಆರಂಭವಾದ ಮೆರವಣಿಗೆಯು ಕೃಷ್ಣವಿಲಾಸರಸ್ತೆ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.

‘ಕನ್ನಡ ಶಾಲೆ ಮತ್ತು ಶಾಲೆಗೆ ಹೊಂದಿಕೊಂಡಿರುವ ನಿರಂಜನ ಮಠವನ್ನು ಸಂರಕ್ಷಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.

ADVERTISEMENT

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಕರ್ನಾಟಕ ಕಾವಲುವಡೆ, ಪರಿಸರ ವೇದಿಕೆ, ಸ್ವರಾಜ್ ಇಂಡಿಯಾ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿವಿಎಸ್‌ ಪಕ್ಷಗಳ ಕಾರ್ಯಕರ್ತರೂ ಪ್ರತಿಭಟನೆಯಲ್ಲಿದ್ದರು.

ರಾಮಕೃಷ್ಣಾಶ್ರಮದ ಎದುರು ರ್‍ಯಾಲಿ– ಎಚ್ಚರಿಕೆ

ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ‘ಶಾಲೆ ಕೆಡವಿ ಸ್ಮಾರಕ ನಿರ್ಮಿಸುವುದಿಲ್ಲ ಎಂದು ರಾಮಕೃಷ್ಣಾಶ್ರಮವು ಪತ್ರದಲ್ಲಿ ಬರೆದುಕೊಡಬೇಕು. ಇಲ್ಲದಿದ್ದರೆ, ರಾಮಕೃಷ್ಣಾಶ್ರಮದ ಎದುರು ರ‍್ಯಾಲಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಮಾತನಾಡಿ, ‘ವಿವಾದ ಬಿಟ್ಟು ಮೈಸೂರಿನಲ್ಲಿಯೇ ಬೇರೆ ಕಡೆ ಶಾಲೆ ನಿರ್ಮಿಸುವುದು ಒಳ್ಳೆಯದು’ ಎಂದು ಸಲಹೆ ನೀಡಿದರು.

ಲೇಖಕರಾದ ಕಾಳೇಗೌಡ ನಾಗವಾರ, ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯ, ಜನಾರ್ದನ್, ಗೋಪಾಲಕೃಷ್ಣ, ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಇದ್ದರು.

ನಿರಂಜನಮಠದಲ್ಲಿ ಸ್ವಾಮಿವಿವೇಕನಂದರು ಕೆಲಕಾಲ ತಂಗಿದ್ದರು ಎಂಬ ಕಾರಣಕ್ಕೆ ಎನ್‌ಟಿಎಂ ಶಾಲೆಯನ್ನೂ ಒಳಗೊಂಡಂತೆ ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ರಾಮಕೃಷ್ಣ ಆಶ್ರಮ ಮುಂದಾಗಿದೆ. ಅದನ್ನು ವಿರೋಧಿಸಿ 2 ತಿಂಗಳಿಂದ ನಗರದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.