ADVERTISEMENT

ಸಂಗೀತ ವಿ.ವಿಯಲ್ಲಿ ಅಕ್ರಮ: ಮರು ತನಿಖೆಗೆ ರಾಜೀವ್‌ ತಾರನಾಥ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 21:11 IST
Last Updated 13 ಸೆಪ್ಟೆಂಬರ್ 2021, 21:11 IST
   

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ, ಆರ್ಥಿಕ ಅಶಿಸ್ತಿಗೆ ಸಂಬಂಧಿಸಿದಂತೆ ಮರು ತನಿಖೆ ನಡೆಸಬೇಕು ಎಂದು ಸರೋದ್‌ ವಾದಕ ಪಂಡಿತ್ ರಾಜೀವ್ ತಾರನಾಥ್ ಒತ್ತಾಯಿಸಿದ್ದಾರೆ.

‘12 ವರ್ಷಗಳಲ್ಲಿ ವಿಶ್ವವಿದ್ಯಾಲಯಕ್ಕೆ ಬಂದ ಅನುದಾನವೆಷ್ಟು, ಖರ್ಚಾದ ಹಣ ಎಷ್ಟು ಎಂಬ ಮಾಹಿತಿ ಇಲ್ಲ. ಕುಲಸಚಿ
ವರೂ ಸೇರಿದಂತೆ ಪ್ರಮುಖ ಸ್ಥಾನಗಳಿಗೆ ನೇಮಕಾತಿ ನಡೆದಿಲ್ಲ. ಯಾರನ್ನೋ ಕರೆದು ಅಧ್ಯಾಪಕರನ್ನಾಗಿ ನೇಮಕ ಮಾಡಲಾಗಿದೆ. ಸಂಬಳವೂ ಬೇಕಾಬಿಟ್ಟಿಯಾಗಿದೆ’ ಎಂದು ಆರೋಪಿಸಿದ್ದಾರೆ.

‘ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ ಅವರೇ ಹಲವು ಕಾಲ ಕುಲಸಚಿವ, ಪ್ರಭಾರ ಮೌಲ್ಯಮಾಪನ ಕುಲಸಚಿವ, ಪ್ರಭಾರ ಹಣಕಾಸು ಅಧಿಕಾರಿಯಾಗಿಯೂ ಏಕವ್ಯಕ್ತಿಯಿಂದ ಏಕ ತೀರ್ಮಾನದಂತೆ ಆಡಳಿತ ನಿರ್ವಹಿಸಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ಸಿಬ್ಬಂದಿಗೆ ನೋಟಿಸ್ ನೀಡಿ, ಭಯ ಉಂಟು ಮಾಡಿದ್ದಾರೆ. ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

‘ಸಂಗೀತ ಮತ್ತು ಪ್ರದರ್ಶಕ ಕಲೆಗಳನ್ನು ಕಲಿಸಲು ಆರಂಭವಾದ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಿರುವುದು ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಿದಂತಾಗುತ್ತದೆ’ ಎಂದಿದ್ದಾರೆ.

ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಗುಣಮಟ್ಟದ ಚೇತರಿಕೆಗೆ ಉನ್ನತಮಟ್ಟದ ಸಮಿತಿಯ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

‘ಹಾದಿ ತಪ್ಪಿಸಲಾಗುತ್ತಿದೆ’: ‘ಆರೋಪಗಳೆಲ್ಲವೂ ಸತ್ಯಕ್ಕೆ ದೂರ. ಸರ್ಕಾರದ ಆದೇಶದನ್ವಯ ವೇತನ ಸ್ಥಗಿತಗೊಂಡಿರುವ ಕೆಲವು ನೌಕರರು ರಾಜೀವ್‌ ತಾರನಾಥ್ ಅವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಹಣಕಾಸಿನ ದುರುಪಯೋಗ ನಡೆದಿಲ್ಲ. ಅಕಾಡೆಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸಮಿತಿ ಇರುವಾಗ ಏಕತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಕುಲಪತಿ ನಾಗೇಶ್‌ ವಿ.ಬೆಟ್ಟಕೋಟೆ ಪ್ರತಿಕ್ರಿಯಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯವೇ ಹೊಸಕೋರ್ಸ್‌ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲವೂ ನಿಯಮಬದ್ಧವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.