ADVERTISEMENT

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 9:53 IST
Last Updated 9 ಅಕ್ಟೋಬರ್ 2021, 9:53 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರೊ.ಎಚ್.ಕೆ.ಲಕ್ಕಪ್ಪಗೌಡ ಅವರಿಗೆ ನುಡಿನಮನ ಸಲ್ಲಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರೊ.ಎಚ್.ಕೆ.ಲಕ್ಕಪ್ಪಗೌಡ ಅವರಿಗೆ ನುಡಿನಮನ ಸಲ್ಲಿಸಿದರು.   

ಮೈಸೂರು: ‘ಈಗ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆ. ಸಾಹಿತಿಗಳು ಕೇಂದ್ರ ಸರ್ಕಾರವನ್ನು ಟೀಕಿಸಿದರೆ ಅದು ದೇಶದ್ರೋಹ ಅನ್ನುತ್ತಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಅತಿ ಅಪಾಯಕಾರಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಹಾಗೂ ಪ್ರೊ.ಎಚ್.ಜೆ.ಲಕ್ಕಪ್ಪಗೌಡ ಸಾಹಿತ್ಯಾಭಿಮಾನಿ ಬಳಗದ ವತಿಯಿಂದ ಇಲ್ಲಿನ ಗಾನಭಾರತೀಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರೊ.ಎಚ್.ಕೆ.ಲಕ್ಕಪ್ಪಗೌಡ ಅವರಿಗೆ ನುಡಿನಮನ ಹಾಗೂ ಅವರ ಬದುಕು ಬರಹ; ಒಂದು ಮೆಲುಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರ್ಥಪೂರ್ಣವಾದ ಟೀಕೆ, ಆಧಾರಸಹಿತವಾದ ಟೀಕೆ ಪ್ರಜಾಪ್ರಭುತ್ವದಲ್ಲಿ ಬೇಕು. ಟೀಕೆಯೆ ಇಲ್ಲವಾದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲ ಇಲ್ಲ ಎಂದರು.

ಜಾನಪದ ವಿದ್ವಾಂಸರ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲ ವರ್ಗದವರಿಂದ ಸಾಂಸ್ಕೃತಿಕ ನಾಯಕರು ಬರಬೇಕು. ಬಸವಣ್ಣ ಎಲ್ಲ ವರ್ಗದವರಿಗೂ ಲಿಂಗ ದೀಕ್ಷೆ ಕೊಟ್ಟು ಸಮಾನತೆ ನೀಡಿದರು. ಬಸವಣ್ಣನವರ ನಂತರ ಕುವೆಂಪು ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ನಾಡು ಕಂಡ ಸಾಂಸ್ಕೃತಿಕ ನಾಯಕರು. ಜತೆಗೆ ಕರ್ನಾಟಕದ ಏಕೈಕ ವೈಚಾರಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.