ADVERTISEMENT

ಜಿಲ್ಲಾಡಳಿತ ಕಳ್ಳರಂತೆ ಬಂದು ದೇಗುಲಗಳನ್ನು ತೆರವುಗೊಳಿಸುತ್ತಿದೆ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 8:13 IST
Last Updated 12 ಸೆಪ್ಟೆಂಬರ್ 2021, 8:13 IST
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡಿದರು. –ಪ್ರಜಾವಾಣಿ ಚಿತ್ರ
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡಿದರು. –ಪ್ರಜಾವಾಣಿ ಚಿತ್ರ   

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳ ತೆರವು ಕಾರ್ಯಾಚರಣೆ ಮುಂದುವರಿಸಿದರೆ ದೇವಸ್ಥಾನ ಉಳಿಸಿ ಎಂಬ ಜನಾಂದೋಲನ ರೂಪಿಸಲಾಗುವುದು ಎಂದು ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದರು.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಾಗೂ ಸುಪ್ರೀಂಕೋರ್ಟ್ ಆದೇಶವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೆ ಜಿಲ್ಲಾಡಳಿತ ಕೇವಲ ದೇಗುಲಗಳನ್ನಷ್ಟೇ ತೆರವುಗೊಳಿಸುತ್ತಿರುವುದು ಸರಿಯಲ್ಲ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಧಾರ್ಮಿಕ ಸ್ಥಳಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ ಜಿಲ್ಲಾಡಳಿತ ಈ ಅಂಶವನ್ನು ಕೈಬಿಟ್ಟು ನಸುಕಿನಲ್ಲಿ ಬರುವ ಕಳ್ಳರಂತೆ ತೆರವು ಮಾಡುತ್ತಿದೆ’ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಸ್ಥಳಗಳನ್ನು ತೆರವು ಮಾಡಬೇಕು ಎಂದು ಸರ್ಕಾರ 2010 ರಲ್ಲಿ ಹೊರಡಿಸಿರುವ ಆದೇಶವನ್ನು ಸಹ ವಾಪಸ್ ಪಡೆಯಬೇಕು. ಪ್ರತಿ ದೇಗುಲವನ್ನೂ ಪ್ರತ್ಯೇಕವಾಗಿ ಪರಿಗಣಿಸಿ, ಬದಲಿ ಸ್ಥಳ ನೀಡುವುದು, ಸಾಧ್ಯವಾದರೆ ಸಕ್ರಮಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈಗ ಜಿಲ್ಲಾಡಳಿತ 9 ಹಿಂದೂ ದೇಗುಲಗಳ ತೆರವುಗೊಳಿಸಿದೆ. ಚರ್ಚ್, ಮಸೀದಿ, ದರ್ಗಾಗಳ ತೆರವು ಮಾಡಿಲ್ಲ. ಮುಂದೆ ತೆರವು ಮಾಡುವಂತಹ ಪಟ್ಟಿಯಲ್ಲಿ 90ಕ್ಕೂ ಹೆಚ್ಚು ದೇಗುಲಗಳಿವೆ. ಕೇವಲ ಒಂದು ಧರ್ಮವನ್ನಷ್ಟೆ ಅಧಿಕಾರಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರಿದರು.

2009 ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಬಿಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಿದ್ದರೂ, ಕ್ಯಾತಮಾರನಹಳ್ಳಿಯ ವಸತಿ ಪ್ರದೇಶದಲ್ಲಿ ಹಾಗೂ ಎನ್.ಆರ್.ಕ್ಷೇತ್ರದಲ್ಲಿ ಹಲವು ಮಸೀದಿಗಳು ಅನಧಿಕೃತವಾಗಿ ತಲೆ ಎತ್ತಿವೆ. ದೇವರಾಜ ಅರಸು ರಸ್ತೆಯಲ್ಲಿ ಗೋರಿ ಇದೆ. ಈ ಎಲ್ಲ ಕಟ್ಟಡ ತಲೆ ಎತ್ತಲು ಅವಕಾಶ ಮಾಡಿಕೊಟ್ಟಿರುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಅಲ್ಲವೆ ಎಂದು ಪ್ರಶ್ನಿಸಿದರು.

ಮಸೀದಿಗಳ ತಂಟೆಗೆ ಬಂದರೆ ನಾವೇನೂ ಬಳೆ ತೊಟ್ಟಿಲ್ಲ ಎಂದು ಶಾಸಕ ತನ್ವೀರ್ ಸೇಠ್‌ ಹೇಳುವ ಮೂಲಕ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಸೋನಿಯಾಗಾಂಧಿ‌ ಇಂದಿರಾಗಾಂಧಿ, ಒನಕೆ ಓಬವ್ವ ಎಲ್ಲರೂ ಮಹಿಳೆಯರು ಎಂಬುದನ್ನು‌ಅವರು ಮರೆಯಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.