ADVERTISEMENT

ಯುವಕನ ಕೊಂದ ಹುಲಿ, ಸತ್ತ ಹುಲಿ ಒಂದೇ: ಎಸಿಎಫ್ ಸತೀಶ್ ಕುಮಾರ್‌

ಕ್ಯಾಮೆರಾ ಟ್ರ್ಯಾಪಿಂಗ್ ಚಿತ್ರ ಆಧರಿಸಿ ಈ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 5:07 IST
Last Updated 22 ಸೆಪ್ಟೆಂಬರ್ 2021, 5:07 IST
ಹುಣಸೂರು ನಗರದ ಹುಲಿ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಅಯ್ಯನಕೆರೆ ಹಾಡಿ ಯುವಕನನ್ನು ಬೇಟೆಯಾಡಿದ ಹುಲಿಯ ಕ್ಯಾಮೆರಾ ಟ್ರ್ಯಾಪಿಂಗ್ ಚಿತ್ರದ ಬಗ್ಗೆ ಎಸಿಎಫ್ ಸತೀಶ್ ಕುಮಾರ್ ಮಾಹಿತಿ ನೀಡಿದರು
ಹುಣಸೂರು ನಗರದ ಹುಲಿ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಅಯ್ಯನಕೆರೆ ಹಾಡಿ ಯುವಕನನ್ನು ಬೇಟೆಯಾಡಿದ ಹುಲಿಯ ಕ್ಯಾಮೆರಾ ಟ್ರ್ಯಾಪಿಂಗ್ ಚಿತ್ರದ ಬಗ್ಗೆ ಎಸಿಎಫ್ ಸತೀಶ್ ಕುಮಾರ್ ಮಾಹಿತಿ ನೀಡಿದರು   

ಹುಣಸೂರು: ‘ತಾಲ್ಲೂಕಿನ ಅಯ್ಯನಕೆರೆ ಹಾಡಿ ಯುವಕನನ್ನು ಬೇಟೆಯಾಡಿದ ಹುಲಿಗೂ ಕಾರ್ಯಾಚರಣೆ ವೇಳೆ ಪತ್ತೆಯಾದ ಹುಲಿಯ ಕಳೇಬರಕ್ಕೂ ಸಾಮ್ಯತೆ ಇದೆ’ ಎಂದು ಎಸಿಎಫ್ ಸತೀಶ್ ಕುಮಾರ್ ತಿಳಿಸಿದರು.

ನಗರದ ಹುಲಿ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಮಂಗಳ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಣ್ಯದಲ್ಲಿ ಅಳವಡಿಸಿದ್ದ ಟ್ರ್ಯಾಪಿಂಗ್‌ ಕ್ಯಾಮೆರಾದಲ್ಲಿ ಜುಲೈನಲ್ಲಿ ಸೆರೆ ಸಿಕ್ಕ ಹುಲಿ ಮೈ ಮೇಲಿನ ಪಟ್ಟೆಗೂ ಯುವಕನನ್ನು ಬೇಟೆಯಾಡಿ ಸತ್ತಿರುವ ಹುಲಿ ಮೈ ಮೇಲಿನ ಪಟ್ಟೆಗೂ ಸಾಮ್ಯತೆ ಇದೆ’ ಎಂದರು.

‘ಸೆ.8ರಂದು ಗಣೇಶ್‌ (20) ಎಂಬುವರನ್ನು ಹುಲಿ ಕೊಂದಿತ್ತು. ಸೆ.9ರಂದು ಹುಲಿ ಹೆಜ್ಜೆ ಗುರುತು ಆಧರಿಸಿ 20 ಕಡೆಗಳಲ್ಲಿ ಟ್ರ್ಯಾಪಿಂಗ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ನರ ಬೇಟೆಯಾಡಿದ್ದ ಹುಲಿ, 5 ಮತ್ತು 300 ಮೀಟರ್ ದೂರದಲ್ಲಿ
ಅಳವಡಿಸಿದ್ದ ಎರಡು ಕ್ಯಾಮೆರಾಗಳಲ್ಲಿ ಸೆರೆ ಸಿಕ್ಕಿತ್ತು. ಅದರ ಆಧಾರದಲ್ಲಿ ಯುವಕನನ್ನು ಬಲಿಪಡೆದ ಸ್ಥಳದಲ್ಲಿ ಬೋನು ಇಟ್ಟು ಹುಲಿ ಸೆರೆಗೆ ಕ್ರಮಕೈಗೊಳ್ಳಲಾಗಿತ್ತು’ ಎಂದು ಹೇಳಿದರು.

ADVERTISEMENT

‘ಅರಣ್ಯ ಇಲಾಖೆಯು ಬಫರ್ ವಲಯ ಮತ್ತು ಕೊಡಗು ಗಡಿಭಾಗದಲ್ಲಿ 70 ಕ್ಯಾಮೆರಾಗಳನ್ನು ಅಳವಡಿಸಿತ್ತು. ತಾಂತ್ರಿಕ ತಂಡವನ್ನು ರಚಿಸಿ ಟ್ರ್ಯಾಪಿಂಗ್ ಕ್ಯಾಮೆರಾದ ಚಿತ್ರಗಳನ್ನು ಪ್ರತಿದಿನ ಪರಿಶೀಲಿಸಲಾಗಿತ್ತು’ ಎಂದು ವಿವರಿಸಿದರು.

ಹುಲಿ ಪತ್ತೆ ಮಾಡಿದ್ದ ಗಣೇಶ: ‘ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಗಣೇಶ, ಅರ್ಜುನ, ಬಲರಾಮ ಮತ್ತು ಭೀಮ ಆನೆಗಳನ್ನು ಬಳಸಿ ಕೂಂಬಿಂಗ್‌ ನಡೆಸಿದ್ದರು. ಇಡೀ ಅರಣ್ಯದಲ್ಲಿ ಹುಡುಕಿದರೂ ಹುಲಿ ಪತ್ತೆಯಾಗಿರಲಿಲ್ಲ. ಕಲ್ಲಾರೆಕೆರೆ ಬಳಿ ಹುಲಿ ಕಳೇಬರದ ವಾಸನೆಯನ್ನು ಗಣೇಶ ಆನೆ ಗ್ರಹಿಸಿತ್ತು. ಅದನ್ನು
ಆಧರಿಸಿ ಸತ್ತ ಹುಲಿಯನ್ನು ಪತ್ತೆ ಮಾಡಲಾಗಿತ್ತು’ ಎಂದು ಸತೀಶ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್‌ಎಫ್‌ಒ ಹನುಮಂತರಾಜು, ನವೀನ್, ತಾಂತ್ರಿಕ ತಂಡದ ಗೋಪಿ ಇದ್ದರು.

‘ವ್ಯಾಪ್ತಿ ವಿಸ್ತರಣೆ ವೇಳೆ ಹುಲಿ ದಾಳಿ’

‘ನಾಗರಹೊಳೆ ಅರಣ್ಯದ 843 ಚದರ ಕಿ.ಮೀ ವ್ಯಾಪ್ತಿಯಲ್ಲಿ 130 ಹುಲಿಗಳಿವೆ. ಕೋರ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹುಲಿಗಳು ತಮ್ಮ ವ್ಯಾಪ್ತಿ ವಿಸ್ತರಣೆಗೆ ಅರಣ್ಯದಲ್ಲಿ ಹುಡುಕಾಟ ನಡೆಸುವುದು ಸಾಮಾನ್ಯ. ಈ ಸಂದರ್ಭದಲ್ಲಿ ಯುವಕನ ಮೇಲೆ ಹುಲಿಯೊಂದು ದಾಳಿ ನಡೆಸಿದೆ’ ಎಂದು ಎಸಿಎಫ್ ಸತೀಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.