ADVERTISEMENT

ಎಚ್.ಡಿ.ಕೋಟೆ: ಕುಗ್ರಾಮದ ಯುವಕ ಗುವಾಹಟಿಯ ಐಐಟಿ ಸಂಶೋಧಕ

ಸಾವಯವ ರಸಾಯನ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡುತ್ತಿರುವ ಮನಿಯಾ

ಸತೀಶ್‌ ಬಿ
Published 22 ಸೆಪ್ಟೆಂಬರ್ 2021, 5:07 IST
Last Updated 22 ಸೆಪ್ಟೆಂಬರ್ 2021, 5:07 IST
ಗುವಾಹಟಿಯ ಐಐಟಿಯಲ್ಲಿ ಸಂಶೋಧನೆ ಮಾಡುತ್ತಿರುವ ಮನಿಯಾ
ಗುವಾಹಟಿಯ ಐಐಟಿಯಲ್ಲಿ ಸಂಶೋಧನೆ ಮಾಡುತ್ತಿರುವ ಮನಿಯಾ   

ಎಚ್.ಡಿ.ಕೋಟೆ: ತಾಲ್ಲೂಕಿನ ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ, ರಾಷ್ಟ್ರೀಯ ಉದ್ಯಾನವನದ ಮಧ್ಯಭಾಗ ದಲ್ಲಿರುವ ವಡಕನಮಾಳ ಗ್ರಾಮದ ವಿ.ಎನ್‌.ಮನಿಯಾ ಎಂಬುವರು ಅಸ್ಸಾಂನ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಸಾವಯವ ರಸಾಯನ ವಿಜ್ಞಾನ (ಆರ್ಗ್ಯಾನಿಕ್‌ ಕೆಮಿಸ್ಟ್ರಿ) ವಿಷಯದಲ್ಲಿ ಸಂಶೋಧನೆ ಮಾಡಲು ಆಯ್ಕೆಯಾಗಿದ್ದಾರೆ.

ಐಐಟಿನಲ್ಲಿ ಸಂಶೋಧನೆಗೆ ಸೇರಿದ ತಾಲ್ಲೂಕಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನಿಯಾ ಅವರು ನಂಜೇಗೌಡ ಹಾಗೂ ಶಾರದಾ ದಂಪತಿಯ ಪುತ್ರ. ತಂದೆ–ತಾಯಿ ಕೃಷಿಕರು. ಬಡತನವನ್ನು ಮೆಟ್ಟಿ ಸತತ ಪರಿಶ್ರಮ, ಅಧ್ಯಯನದಿಂದ ಈ ಸಾಧನೆ ಮಾಡಿದ್ದಾರೆ.

ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಕನಮಾಳ ಕಾಡಿನೊಳಗಿ ರುವ ಕುಗ್ರಾಮ. ಇಲ್ಲಿ 80 ಮನೆಗಳಿದ್ದು, ಮೂಲಸೌಕರ್ಯಗಳ ಕೊರತೆ ಇದೆ.

ADVERTISEMENT

ಕನ್ನಡ ಮಾಧ್ಯಮದಲ್ಲೇ ಓದಿದ್ದ ಮನಿಯಾ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡರು. ವಿಜ್ಞಾನ ಮತ್ತು ಇಂಗ್ಲಿಷ್‌ ಕಷ್ಟವಾಗಿದ್ದರಿಂದ ವಿಜ್ಞಾನ ವಿಭಾಗ ಬಿಟ್ಟು ಕಲಾ ವಿಭಾಗಕ್ಕೆ ಸೇರಿ ಕೊಳ್ಳಲು ಮನಸ್ಸು ಮಾಡಿದ್ದರು. ಆದರೆ, ಓದಲೇಬೇಕೆಂಬ ಛಲದಿಂದ ಪಿಯುಸಿ ಯಲ್ಲಿ ಶೇ 84ರಷ್ಟು ಅಂಕದೊಂದಿಗೆ ತೇರ್ಗಡೆ ಹೊಂದಿದ್ದರು. ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಹಾಗೂ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ರಸಾಯನ ವಿಜ್ಞಾನ ವಿಭಾಗದಲ್ಲಿ ಎಂಎಸ್ಸಿ ಮುಗಿಸಿದ್ದರು.

ಐಐಟಿಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ಬುದ್ಧಿವಂತಿಕೆ ಬೇಕು. ಗೇಟ್ ಅಥವಾ ಸಿಎಸ್‌ಐಆರ್– ಎನ್‌ಇಟಿ ಪರೀಕ್ಷೆ ಪಾಸು ಮಾಡಿರಬೇಕು. ಮನಿಯಾ ಎರಡು ಪರೀಕ್ಷೆಗಳನ್ನು ಪಾಸು ಮಾಡಿದ್ದು, ಹೈದರಾಬಾದ್ ಐಐಟಿ, ಧಾರವಾಡ ಐಐಟಿ, ಎನ್‌ಐಎಸ್‌ಇಆರ್ ಭುವನೇಶ್ವರ್, ಐಐಟಿ ಗುವಾಹಟಿಗೆ ಆಯ್ಕೆಯಾಗಿದ್ದರು.

ದಾನಿಗಳ ನೆರವು ಬೇಕು: ಸಂಶೋಧನೆ ಮಾಡಲು ಮನಿಯಾ ಅವರಿಗೆ ಫೆಲೋಶಿಪ್ ಸಿಗುತ್ತದೆ. ಆದರೆ, ಅದು ಬರಲು ಅನೇಕ ತಿಂಗಳು ಬೇಕು. ಮೊದಲ ಸೆಮಿಸ್ಟರ್‌ಗೆ ₹50 ಸಾವಿರ ಕಟ್ಟಬೇಕಿತ್ತು. ಮನಿಯಾ ಅವರ ಆರ್ಥಿಕ ಸಂಕಷ್ಟ ಕಂಡು ಪಿಎಚ್.ಡಿ ಮಾರ್ಗದರ್ಶಕರೇ ಹಣ ಭರಿಸಿದ್ದಾರೆ. ಅವರಿಗೆ ದಾನಿಗಳ ನೆರವು ಬೇಕಿದೆ.

ಕೈ ಹಿಡಿದ ವೀ–ಲೀಡ್‌: ಮನಿಯಾ ಅವರ ಓದುವ ಆಸಕ್ತಿಯನ್ನು ಗುರುತಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ ಆರ್ಥಿಕ ನೆರವು, ತರಬೇತಿ ನೀಡಿತ್ತು.

***

ನಮ್ಮೂರಿಗೆ ಬಸ್ ಸೌಲಭ್ಯ ಇಲ್ಲ. ವಿದ್ಯಾಭ್ಯಾಸಕ್ಕೂ ತೊಂದರೆ ಇದೆ. ವಿ–ಲೀಡ್ ಎರಡು ವರ್ಷ ಉಚಿತ ತರಬೇತಿ ನೀಡಿತು.

-ವಿ.ಎನ್‌.ಮನಿಯಾ, ಸಂಶೋಧನಾ ವಿದ್ಯಾರ್ಥಿ

***

ಐಐಟಿಯಲ್ಲಿ ಸಂಶೋಧನೆ ಮಾಡಲು ಮನಿಯಾ ಆಯ್ಕೆ ಆಗಿರುವುದು ಸಂತಸದ ವಿಷಯ. ಗ್ರಾಮೀಣ ಮಕ್ಕಳಿಗೆ ಮನಿಯಾ ಅವರ ಸಾಧನೆ ಸ್ಫೂರ್ತಿ.

-ಡಾ.ಆರ್.ಬಾಲಸುಬ್ರಹ್ಮಣ್ಯಂ, ಸಂಸ್ಥಾಪಕ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.