ADVERTISEMENT

ಸೌಂದರ್ಯ ಸ್ಪರ್ಧೆಯಲ್ಲಿ ಬೆಸ್ಟ್‌ ಸ್ಕಿನ್‌ ಅವಾರ್ಡ್‌ ಪಡೆದ ಬೆಳಗಾವಿಯ ನೀತಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:14 IST
Last Updated 14 ಆಗಸ್ಟ್ 2022, 13:14 IST
ನೀತಾ
ನೀತಾ   

ಬೆಳಗಾವಿ: ಮಿಸೆಸ್ ಇಂಡಿಯಾ– ಕರ್ನಾಟಕ ಸಂಘಟನೆವತಿಯಿಂದ ಬೆಂಗಳೂರಿನಲ್ಲಿ ಈಚೆಗೆ ನಡದ ‘ಮಿಸೆಸ್‌ ಇಂಡಿಯಾ– ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ನೀತಾ ಶಿರಗಾಂವಕರ್‌ ‘ಬೆಸ್ಟ್‌ ಸ್ಕಿನ್‌ ಅವಾರ್ಡ್‌’ ತಮ್ಮದಾಗಿಸಿಕೊಂಡಿದ್ದಾರೆ.

ರಾಜ್ಯದ ವಿವಿಧೆಡೆಯಿಂದ 36 ಸ್ಪರ್ಧಿಗಳು ಅಂತಿಮ ಸುತ್ತಿನಲ್ಲಿ ಇದ್ದರು. ತ್ವಚೆ ಸೌಂದರ್ಯ ವಿಭಾಗದಲ್ಲಿ 30 ವರ್ಷದ ನೀತಾ ರಾಜ್ಯಮಟ್ಟದ ಪ್ರಶಸ್ತಿ ಬಾಚಿಕೊಂಡರು. ಎರಡು ಮಕ್ಕಳ ತಾಯಿ ಆಗಿರುವ ಅವರಿಗೆ ಪ್ರಸಕ್ತ ವರ್ಷದ ‘ಮಿಸೆಸ್‌ ಕರ್ನಾಟಕ– ಬೆಳಗಾವಿ’ ಬಿರುದನ್ನೂ ನೀಡಲಾಯಿತು.

22ರಿಂದ 40 ವರ್ಷ, 40ರಿಂದ 60 ಹಾಗೂ 60 ವರ್ಷ ವಯಸ್ಸು ಮೇಲ್ಪಟ್ಟವರಿಗಾಗಿ ಮೂರು ಹಂತಗಳಲ್ಲಿ ಈ ಸ್ಪರ್ಧೆ ನಡೆಯಿತು. 70 ವರ್ಷ ದಾಟಿದ ಇಬ್ಬರು ಗೃಹಿಣಿಯರೂ ರ್‍ಯಾಂಪ್‌ ಮೇಲೆ ಬಳಕುವ ಮೂಲಕ ಸ್ಪರ್ಧೆಗೆ ಹೊಸ ಕಳೆ ತಂದರು. ರೇಷ್ಮೆ ಸೀರೆ ಸುತ್ತು, ಅರೆ ಪಾಶ್ಚಿಮಾತ್ಯ ಉಡುಗೆ ಸುತ್ತು ಗಮನ ಸೆಳೆದವು.

ADVERTISEMENT

ಮುಖ್ಯ ತೀರ್ಪುಗಾರರಾದ ಅಂತರರಾಷ್ಟ್ರೀಯ ಮ್ಯಾರಥಾನ್‌ ಪ‍ಟು ಪ್ರೀತಿ ರಾವ್, ಫ್ಯಾಷನ್ ಡಿಸೈನರ್ ಸಂಜಯ್ ಚೌರಾರಿಯಾ, 2019ರ ಮಿಸೆಸ್ ಪ್ಲಾನೆಟ್ ಕಿರೀಟ ವಿಜೇತೆ ಪ್ರಿಯಾಂಕಾ ಅಭಿಷೇಕ್, ನಟ ವಿಕ್ರಮ್ ಸೂರಿ, ನಟಿ ನಮಿತಾ ರಾವ್‌ ತೀರ್ಪುಗಾರರಾಗಿದ್ದರು.

‘ಕೌಟಿಲ್ಯ’ ಚಲನಚಿತ್ರದ ನಾಯಕ ನಟ ಲಕ್ಷ್ಮೀಶ್ ಭಟ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ಉಪಾಧ್ಯಕ್ಷ ಜೈ ಜಗದೀಶ್, ಕಾರ್ಯದರ್ಶಿ ಸುಂದರ್ ರಾಜ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.

‘ಪ್ರತಿಯೊಬ್ಬ ಮಹಿಳೆ ತನ್ನ ಎತ್ತರ, ತೂಕ, ವಯಸ್ಸು ಅಥವಾ ಬಣ್ಣ ಲೆಕ್ಕಿಸದೆ ಸುಂದರವಾಗಿ ಕಾಣಿಸಲು ಸಾಧ್ಯವಿದೆ. ವಿವಾಹದ ನಂತರವೂ ಸೌಂದರ್ಯ ಸ್ಪರ್ಧೆಗೆ ಪ್ರೇರೇಪಿಸುವುದು. ಜೀವನದಲ್ಲಿ ಸ್ಫೂರ್ತಿ ತುಂಬುವುದು ಇದರ ಉದ್ದೇಶ’ ಎಂದು ಸಂಘಟನೆಯ ನಿರ್ದೇಶಕಿ ಪ್ರತಿಭಾ ಸೌಂಶಿಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.