ADVERTISEMENT

ರಾಜ್ಯ ಬಜೆಟ್‌ 2023: ಕೈಗಾರಿಕಾ ವಸಾಹತು, ಯಳಂದೂರು ಆಸ್ಪತ್ರೆಗೆ ಮೇಲ್ದರ್ಜೆ ಭಾಗ್ಯ

ರಾಜ್ಯ ಬಜೆಟ್‌: ಪ್ರವಾಸೋದ್ಯಮ, ರೈಲ್ವೆ ಯೋಜನೆ, ನೀರಾವರಿ, ಚಂಗಡಿ ಗ್ರಾಮ ಸ್ಥಳಾಂತರದ ಪ್ರಸ್ತಾಪವಿಲ್ಲ

ಸೂರ್ಯನಾರಾಯಣ ವಿ
Published 17 ಫೆಬ್ರುವರಿ 2023, 19:30 IST
Last Updated 17 ಫೆಬ್ರುವರಿ 2023, 19:30 IST
ಯಳಂದೂರಿನ ಸಾರ್ವಜನಿಕ ಆಸ್ಪತ್ರೆ
ಯಳಂದೂರಿನ ಸಾರ್ವಜನಿಕ ಆಸ್ಪತ್ರೆ   

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿರುವ 2023–24ನೇ ಸಾಲಿನ ಬಜೆಟ್‌ನಲ್ಲಿ, ರಜತ ವರ್ಷದ ಸಂಭ್ರಮದಲ್ಲಿರುವ ಗಡಿ ಜಿಲ್ಲೆಗೆ ಮಹತ್ವದ ಕೊಡುಗೆಗಳಿಲ್ಲ. ಮೂರು ಯೋಜನೆಗಳನ್ನಷ್ಟೇ ಪ್ರಸ್ತಾಪಿಸಲಾಗಿದೆ.

‘ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ (ಕೆಎಸ್ಎಸ್‌ಐಡಿಸಿ) ತಾಲ್ಲೂಕಿನ ಬದನಗುಪ್ಪೆಯಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲಾಗುವುದು, ಯಳಂದೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಮತ್ತು ಮಾನವ ವನ್ಯಜೀವಿ ಸಂಘರ್ಷ ತಡೆಯುವುದು, ಸೆರೆ ಹಿಡಿದ ಪ್ರಾಣಿಗಳನ್ನು, ಅವುಗಳ ಆವಾಸ ಸ್ಥಾನ ಗುರುತಿಸಿ ಬಿಡುಗಡೆ ಮಾಡಲು ಬಂಡೀಪುರದಲ್ಲಿ ವ್ಯವಸ್ಥೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ಯಳಂದೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗು ಹಲವು ವರ್ಷಗಳಿಂದಲೇ ಇತ್ತು. ಆರೋಗ್ಯ ಇಲಾಖೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಆದರೆ, ಅನುಮೋದನೆ ಸಿಕ್ಕಿರಲಿಲ್ಲ. ಈಗ ಬಜೆಟ್‌ ಭಾಷಣದಲ್ಲೇ ಯೋಜನೆ ಘೋಷಣೆಯಾಗಿರುವುದು ತಾಲ್ಲೂಕಿನ ಜನರ ಸಂತಸಕ್ಕೆ ಕಾರಣವಾಗಿದೆ.

ADVERTISEMENT

ಚಾಮರಾಜನಗರ ತಾಲ್ಲೂಕಿನ ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಕೆಎಸ್‌ಎಸ್‌ಐಡಿಸಿ ವತಿಯಿಂದ ಕೈಗಾರಿಕಾ ವಸಾಹತು ಸ್ಥಾಪಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಈ ಪ್ರದೇಶದಲ್ಲಿ 40 ಎಕರೆ ಜಾಗವನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಚಟುವಟಿಕೆಗಳಿಗಾಗಿ ಮೀಸಲಿಡಲಾಗಿದ್ದು, ಆ ಪ್ರದೇಶದಲ್ಲಿ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಅವಕಾಶ ಸಿಗಲಿದೆ.

ಬಂಡೀಪುರದಲ್ಲಿ ವನ್ಯಜೀವಿ– ಪ್ರಾಣಿ ಸಂಘರ್ಷಕ್ಕೆ ತುತ್ತಾಗಿರುವ ಪ್ರಾಣಿಗಳನ್ನು ಸೆರೆ ಹಿಡಿದು, ಅವುಗಳನ್ನು ವಾಪಸ್‌ ಕಾಡಿಗೆ ಬಿಡುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಬೊಮ್ಮಾಯಿಯವರು ಹೇಳಿದ್ದರೂ, ಅದರ ರೂಪುರೇಷೆ ವಿವರಿಸಿಲ್ಲ. ಬಂಡೀಪುರದಲ್ಲಿ ಪ್ರಾಣಿಗಳ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಮೂರೂ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನವನ್ನೂ ಘೋಷಿಸಲಾಗಿಲ್ಲ.

ಪ್ರಮುಖ ಯೋಜನೆಗಳಿಲ್ಲ: ಉಳಿದಂತೆ ಜಿಲ್ಲೆಗೆ ಬಜೆಟ್‌ನಲ್ಲಿ ಬೇರೆ ಮಹತ್ವದ ಯೋಜನೆಗಳನ್ನು ಪ್ರಕಟಿಸಿಲ್ಲ. ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ₹1,400 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದರು. ಬಜೆಟ್‌ನಲ್ಲಿ ಈ ಯೋಜನೆ ಪ್ರಸ್ತಾಪಿಸುವ ನಿರೀಕ್ಷೆ ಜನರಲ್ಲಿತ್ತು. ಆದರೆ, ಅದರ ಪ್ರಸ್ತಾಪವಾಗಿಲ್ಲ.

ಗುಂಡ್ಲುಪೇಟೆ ತಾಲ್ಲೂಕಿಗೆ ನೀರಾವರಿ ಯೋಜನೆ, ಚಾಮರಾಜನಗರಕ್ಕೆ 2ನೇ ಹಂತದ ಕುಡಿಯುವ ನೀರಿನ ಯೋಜನೆ, ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ 2ನೇ ಹಂತದ ಕಬಿನಿ ಯೋಜನೆ, ಹನೂರು ತಾಲ್ಲೂಕಿನ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗಳ ಘೋಷಣೆಯ ನಿರೀಕ್ಷೆಯಲ್ಲಿ ಜನರಿದ್ದರು. ಅದು ಹುಸಿಯಾಗಿದೆ.

ಭರಚುಕ್ಕಿ, ಹೊಗೇನಕಲ್‌ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂಬ ಒತ್ತಾಯ ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಕೇಳಿ ಬಂದಿತ್ತು. ರಾಮನಗರ, ವಿಜಯನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಘೋಷಣೆ ಮಾಡಲಾಗಿದೆ. ಗಡಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ.

ಜಿಲ್ಲೆಯ ರೈಲ್ವೆ ಯೋಜನೆ ಅದರಲ್ಲೂ ವಿಶೇಷವಾಗಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚಾಮರಾಜನಗರ–ಕೊಳ್ಳೇಗಾಲ–ಬೆಂಗಳೂರು ರೈಲು ಮಾರ್ಗ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಲಿದೆ ಎಂಬ ಜನರ ನಿರೀಕ್ಷೆ, ಹಾಗೆಯೇ ಉಳಿದಿದೆ.

ಅರಣ್ಯ ಇಲಾಖೆಯ ಮಹತ್ವಕಾಂಕ್ಷಿ ಚಂಗಡಿ ಗ್ರಾಮ ಸ್ಥಳಾಂತರ ಯೋಜನೆ, ಕಾಡಂಚಿನ ಜನರ ಸಮಸ್ಯೆಗಳು, ಮಹದೇಶ್ವರ ಬೆಟ್ಟದ ಕುಗ್ರಾಮಗಳಿಗೆ ಸೌಕರ್ಯ ಕಲ್ಪಿಸುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವಿಲ್ಲದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಉಳಿದಂತೆ, ರೈತರ ಅಲ್ಪಾವಧಿ ಬಡ್ಡಿ ರಹಿತ ಸಾಲದ ಮೊತ್ತವನ್ನು ₹5ಲಕ್ಷಕ್ಕೆ ಏರಿಸಿರುವುದು, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ, ವಿದ್ಯಾರ್ಥಿನಿಯರಿಗೆ, ಸಂಘಟಿತ ಮಹಿಳೆಯರಿಗೆ ಉಚಿತ ಬಸ್‌ಪಾಸ್‌, ಪದವಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಶಾಲಾ ಕೊಠಡಿಗಳು, ಶೌಚಾಲಯಗಳ ನಿರ್ಮಾಣ, ಮಹಿಳೆಯರಿಗೆ ಅನುಕೂಲಕರ ಯೋಜನೆಗಳ ಘೋಷಣೆ ಮಾಡಿರುವುದಕ್ಕೆ ಸಾರ್ವಜನಿಕ ವಲಯಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಶಾಸಕರು ಏನಂತಾರೆ?

ಪ್ರಾಮುಖ್ಯ ಇಲ್ಲ

ಚುನಾವಣೆ ಹತ್ತಿರದಲ್ಲಿರುವುದರಿಂದ ಈ ಬಜೆಟ್‌ಗೆ ಹೆಚ್ಚಿನ ಪ್ರಾಮುಖ್ಯ ಇಲ್ಲ. ಮುಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಏನೂ ಕೊಡುಗೆಗಳಿಲ್ಲ. ನಮ್ಮ ಜಿಲ್ಲೆ ಎಂದಲ್ಲ, ಎಲ್ಲಿಗೂ ಕೊಟ್ಟಿಲ್ಲ. ಚುನಾವಣೆ ಹತ್ತಿರದಲ್ಲಿರುವುದರಿಂದ ಬರೀ ಜನಪ್ರಿಯ ಘೋಷಣೆಗಳನ್ನು ಮಾಡಿದ್ದಾರೆ.

–ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

ಸರ್ವವ್ಯಾಪಿ, ಸರ್ವ ಸ್ಪರ್ಶಿ

ಈ ಬಾರಿಯ ಬಜೆಟ್ ಸರ್ವ ವ್ಯಾಪ್ತಿ, ಸರ್ವ ಸ್ಪರ್ಶಿ. ದಲಿತರ ಪರ ಹಾಗೂ ಮಹಿಳೆಯರ ಪರ, ವಿದ್ಯಾರ್ಥಿಗಳ ಪರ, ಕಾರ್ಮಿಕರ ಪರ, ಇರುವಂತಹ ಪೂರಕ ಬಜೆಟ್ ಇದಾಗಿದೆ. ಯಳಂದೂರು ಪಟ್ಟಣಕ್ಕೆ 100 ಬೆಡ್ ಹಾಸಿಗೆಯ ಸುಸರ್ಜಿತ ಆಸ್ಪತ್ರೆ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ಹಾಗೂ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದಕ್ಕೆ ಸುಸಜ್ಜಿತ ಬಸ್‌ಗಳ ವ್ಯವಸ್ಥೆ ಘೋಷಿಸಲಾಗಿದೆ.

–ಎನ್.ಮಹೇಶ್, ಕೊಳ್ಳೇಗಾಲ ಶಾಸಕ

ದಕ್ಷಿಣ ಭಾಗದ ಕಡೆಗಣನೆ

ಬಜೆಟ್‌ನಲ್ಲಿ ಕೇವಲ ಬಿಜೆಪಿ ಸಚಿವರು, ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ನೀಡುವ ಮೂಲಕ ದಕ್ಷಿಣ ಭಾಗದ ಕ್ಷೇತ್ರಗಳನ್ನು ಕಡೆಗಣಿಸಿ ತಾರತಮ್ಯ ಮಾಡಲಾಗಿದೆ. ನಮ್ಮ ಜಿಲ್ಲೆಗೇ ಒಂದೇ ಒಂದು ಮಹತ್ವದ ಕೊಡುಗೆ ನೀಡಿಲ್ಲ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ.

-ಆರ್. ನರೇಂದ್ರ, ಹನೂರು ಶಾಸಕ

ದೂರದೃಷ್ಟಿಯ ಬಜೆಟ್‌

ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮಿತಿಯನ್ನು ₹3 ರಿಂದ ₹5 ಲಕ್ಷಕ್ಕೆ ಏರಿಸಲಾಗಿದೆ. ಅಕ್ಷರ, ಆರೋಗ್ಯ, ಅಧ್ಯಾತ್ಮ, ಉದ್ಯಮ, ಉದ್ಯೋಗ, ಕೃಷಿ, ಕೃಷಿಕ, ಶ್ರಮಿಕ, ಕ್ರೀಡೆ, ಸಾಂಸ್ಕೃತಿಕ, ದಲಿತ, ಹಿಂದುಳಿದ, ಮಹಿಳಾ ಹೀಗೆ ಎಲ್ಲ ವರ್ಗದವರ ಅಭಿವೃದ್ಧಿ ಪರವಾಗಿದೆ. ತೆರಿಗೆ ಹಿಗ್ಗಿಸದೆ, ಆದಾಯ ಕುಗ್ಗಿಸದೆ ದೂರದೃಷ್ಟಿಯ ಬಜೆಟ್‌ ಅನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.

ಸಿ.ಎಸ್.ನಿರಂಜನ್ ಕುಮಾರ್, ಗುಂಡ್ಲುಪೇಟೆ ಶಾಸಕ

---

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಬದನಗುಪ್ಪೆಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಯ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ
ಕೆ.ಪ್ರಭಾಕರ್‌, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ

--

ಚುನಾವಣಾ ಗಿಮಿಕ್ ಇದು. ಜಿಲ್ಲೆಗೆ ವಿಶೇಷ ಪ್ಯಾಕೇಜ್‌ನ ನಿರೀಕ್ಷೆಯಲ್ಲಿದ್ದೆವು. ಎಲ್ಲವೂ ಹುಸಿಯಾಗಿದೆ. ಜನರ ಕಣ್ಣೊರೆಸುವ ತಂತ್ರ ಇದರಲ್ಲಿ ಅಡಗಿದೆ.
ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

--

ಅತ್ಯುತ್ತಮ ಬಜೆಟ್‌. ಕೃಷಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳು, ಎಲ್ಲ ವರ್ಗಗಳಿಗೂ ಕೊಡುಗೆಗಳನ್ನು ಸಿ.ಎಂ. ನೀಡಿದ್ದಾರೆ. ಕೈಗಾರಿಕೆಗೆ ಹೆಚ್ಚು ಉತ್ತೇಜನ ನೀಡಲಾಗಿದೆ.
ಜಿ.ನಾರಾಯಣ ಪ್ರಸಾದ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

--

ನಿರಾಶಾದಾಯಕ ಬಜೆಟ್‌. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಕೊಟ್ಟಿಲ್ಲ. ರಜತ ಸಂಭ್ರಮದಲ್ಲಿರುವ ಜಿಲ್ಲೆಯ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕಿತ್ತು.
ಎನ್‌.ನಾಗಯ್ಯ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.