ADVERTISEMENT

ಆದಾಯ ದ್ವಿಗುಣಕ್ಕೆ ಆನ್‌ಲೈನ್‌ ಮಾರುಕಟ್ಟೆ: ಶೋಭಾ ಕರಂದ್ಲಾಜೆ

ಕೃಷಿ ವಿಜ್ಞಾನ ಕೇಂದ್ರಗಳ ವಿವಿಧ ಕಾಮಗಾರಿಗಳ ಉದ್ಘಾಟನೆ; ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 15:55 IST
Last Updated 22 ಫೆಬ್ರುವರಿ 2023, 15:55 IST
ವಿಜಯಪುರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕೃಷಿ ವಿಜ್ಞಾನ ಕೇಂದ್ರಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭವನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು
ವಿಜಯಪುರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕೃಷಿ ವಿಜ್ಞಾನ ಕೇಂದ್ರಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭವನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು   

ವಿಜಯಪುರ: ‘ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ’ ಎಂದು ಕೇಂದ್ರ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ವಿಜಯಪುರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ಕೃಷಿ ವಿಜ್ಞಾನ ಕೇಂದ್ರಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ, ವಾತಾವರಣಕ್ಕೆ ತಕ್ಕಂತೆ ಬೀಜಗಳ ಅಭಿವೃದ್ಧಿ, ಸುಧಾರಿತ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ’ ಎಂದರು.

ADVERTISEMENT

‘ಪ್ರಧಾನಿಯವರ ಆಶಯದಂತೆ ರೈತರ ಬದುಕು ಹಸನಾಗಿಸಲು, ರೈತರಿಗೆ ತಮ್ಮ ಹೊಲಗಳಲ್ಲಿ ನವ ತಂತ್ರಜ್ಞಾನಗಳ ಬಳಸಲು ಪ್ರತಿ ಹೋಬಳಿ ಕೇಂದ್ರಗಳಲ್ಲಿ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣಗಳು ದೊರೆಯುವಂತೆ ಮಾಡಲು ಈಗಾಗಲೇ ಚರ್ಚೆ ಮಾಡಿದ್ದು, ಕೆಲವೇ ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ’ ಎಂದು ಹೇಳಿದರು.

‘ದೇಶದ ರೈತರು ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. ಅದಕ್ಕೆ ಕೇಂದ್ರ ಸರ್ಕಾರ ಪ್ಯಾಕೆಜಿಂಗ್, ಪ್ರೊಸೆಸಿಂಗ್ ಹಾಗೂ ಟ್ರಾನ್ಸ್‌ಪೋರ್ಟ್‌ಗೆ ಹೆಚ್ಚಿನ ಒತ್ತು ನೀಡುತ್ತಿದೆ, ರೈತರು ಬೆಳೆದ ಗುಣಮಟ್ಟದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ‌ರೈತರಿಗೆ ಆನ್‌ಲೈನ್ ಮಾರುಕಟ್ಟೆ ದರ ಸಿಗುವ ದೃಷ್ಟಿಕೋನದಿಂದ ಸರ್ಕಾರ ದೇಶ ಹಾಗೂ ರಾಜ್ಯದ ಎಲ್ಲ ಮಾರುಕಟ್ಟೆಯನ್ನು ಆನ್‌ಲೈನ್ ಮಾರುಕಟ್ಟೆಗೆ ಜೋಡಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸೌಲಭ್ಯ ದೊರೆಯುವಂತೆ ಮಾಡುತ್ತಿದೆ’ ಎಂದರು.

‘ರಾಜ್ಯದ ಕೆ.ವಿ.ಕೆಗಳಲ್ಲಿ ಅಭಿವೃದ್ಧಿಪಡಿಸಲಾದ ಹೊಸ ತಂತ್ರಜ್ಞಾನಗಳು ಕೇವಲ ಯುನಿವರ್ಸಿಟಿಗಳಿಗೆ ಸೀಮಿತವಾಗದೆ ರೈತರ ಹೊಲಗಳಿಗೆ ಬಳಕೆಯಾಗುವಂತೆ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರು ಕಾರ್ಯನಿರ್ವಹಿಸಬೇಕು’ ಎಂದರು.

ಕೃಷಿ ವಿವಿಯ ಕುಲಪತಿ ಪಿ.ಎಲ್.ಪಾಟೀಲ ಮಾತನಾಡಿ, ರೈತರಿಗೆ ಉತ್ತಮ ಗುಣಮಟ್ಟದ ಬೀಜ, ಪರಿಕರ ಸಿಗುವ ದೃಷ್ಟಿಕೋನದಿಂದ ಕೃಷಿ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದು, ರೈತರಿಗೆ ಗುಣಮಟ್ಟದ ಬೀಜ ಉತ್ಪಾದನೆಗೆ ತರಬೇತಿಯನ್ನು ನೀಡುತ್ತಿದೆ ಎಂದು ಹೇಳಿದರು.

ಬೀಜ ಮತ್ತು ಸಾವಯವ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ, ಶೈಲಜಾ ಯತ್ನಾಳ, ಡಾ. ವೆಂಕಟಸುಬ್ರಮಣ್ಯ, ವೈ.ಎಂ ಪಾಟೀಲ್‌, ಮಲ್ಲೆಶ, ಶ್ರೀನಿವಾಸ ಕೊಟ್ಯಾಳ, ಡಾ. ಸಾರವಾಡ, ಆರ್‌.ಎಸ್‌.ಪಾಟೀಲ ಕುಚಬಾಳ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.