ADVERTISEMENT

ಸಾವಯವ ಮೇಳ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 15:54 IST
Last Updated 13 ಅಕ್ಟೋಬರ್ 2022, 15:54 IST

ಬೆಂಗಳೂರು: ಜೈವಿಕ ಕೃಷಿಕ್ ಸೊಸೈಟಿಯಿಂದ ಅಕ್ಟೋಬರ್ 15 ಮತ್ತು 16ರಂದು ಸಾವಯವ ಮೇಳವನ್ನು ಲಾಲ್‌ಬಾಗ್‌ನ ಡಾ. ಎಂ. ಎಚ್. ಮರಿಗೌಡ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

'ಸಾವಯವ ಕೃಷಿಕರು ಮತ್ತು ಗ್ರಾಹಕರ ನಡುವಿನ ಸಂಪರ್ಕ ವೇದಿಕೆಯಾಗಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಈ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಸಹಜ ಕೃಷಿಯಲ್ಲಿ ತೊಡಗಿರುವ ರಾಜ್ಯದ ಸಾವಿರಾರೂ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತು ವಿಸ್ತರಣೆಗೆ ವೇದಿಕೆ ಕಲ್ಪಿಸುವುದು ಮೇಳದ ಉದ್ದೇಶ’ ಎಂದು ಲಾಲ್‌ಬಾಗ್‌ ಜೈವಿಕ ಕೃಷಿಕ ಸೊಸೈಟಿಯ ಅಧ್ಯಕ್ಷ ರಾಮಕೃಷ್ಣಪ್ಪ ಮಾಹಿತಿ ನೀಡಿದರು.

ಎರಡು ದಿನಗಳ ಕಾಲ ನಡೆಯುವ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸಾವಯವ ಉತ್ಪನ್ನಗಳು, ಸಿರಿ ಧಾನ್ಯಗಳು, ಮರೆತುಹೋದ ಆಹಾರ, ಗೆಡ್ಡೆ ಮತ್ತು ಗೆಣಸು, ವಿನೂತನ ಹಣ್ಣು ಮತ್ತು ತರಕಾರಿಗಳು ಹಾಗೂ ದೇಶಿ ಬೀಜಗಳ ಮಾರಾಟ ಮತ್ತು ಪ್ರದರ್ಶನ ಮಾಡಲಾಗುತ್ತದೆ’ ಎಂದರು.

ADVERTISEMENT

‘ರಾಜ್ಯದ ವಿವಿಧ ಭಾಗಗಳಿಂದ 20ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ವರ್ಗದ ಸಾವಯವ ಕೃಷಿಕರು, ಕೃಷಿಕರ ಗುಂಪುಗಳು ತಾವೇ ಬೆಳೆದು, ಸಣ್ಣ ಪ್ರಮಾಣದಲ್ಲಿ ಸಂಸ್ಕರಣೆ ಮಾಡಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. 30ಕ್ಕೂ ಹೆಚ್ಚು ಸಾವಯವ ಕೃಷಿಕರ ಸಂಘ ಸಂಸ್ಥೆಗಳು, ಸಗಟು ವ್ಯಾಪಾರಸ್ಥರು, ಸಂಸ್ಕರಣೆ ಮತ್ತು ಮಾರಾಟ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ. ಸುಮಾರು 1 ಲಕ್ಷ ಜನ ಈ ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆ’ ಇದೆ ಎಂದು ಲಾಲ್‌ಬಾಗ್‌ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.