ADVERTISEMENT

ಪ್ರಜಾವಾಣಿ@75: ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 13:34 IST
Last Updated 7 ಫೆಬ್ರುವರಿ 2023, 13:34 IST
   

ಮಂಡ್ಯ: ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ನಗರದ ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಮಂಗಳವಾರ ಆಯೋಜಿಸಿದ್ದ ‘ಇತಿಹಾಸ ರಸಪ್ರಶ್ನೆ ಸ್ಪರ್ಧೆ’ಯಲ್ಲಿ ಕೆ.ಆರ್‌.ಪೇಟೆಯ ಸರ್ಕಾರಿ ಪಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ಪಡೆಯಿತು.

ಕಾಲೇಜು ಆವರಣದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕ್ವಿಜ್‌ ನಡೆಯಿತು. ಜಿಲ್ಲೆಯ 26 ಪದವಿ ಕಾಲೇಜುಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಅತೀ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳ 5 ತಂಡವನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ಸಂಪೂರ್ಣ ಡಿಜಿಟಲ್‌ಮಯವಾಗಿದ್ದ ಸ್ಪರ್ಧೆಯಲ್ಲಿ ಕೆ.ಆರ್‌.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಚಂದು, ಡಿ.ಎಲ್‌.ರಘು ಎಲ್ಲಾ ಸುತ್ತಿನ ಪ್ರಶ್ನೆಗಳಿಗೆ ಉತ್ತಮವಾಗಿ ಉತ್ತರಿಸಿದರು. ಅಂತಿಮವಾಗಿ 90 ಅಂಕ ಕಳಿಸುವ ಮೂಲಕ ಅವರು ಪ್ರಥಮ ಸ್ಥಾನ ಮುಡಿಗೇರಿಸಿಕೊಂಡರು. ಟ್ರೋಫಿಯೊಂದಿಗೆ ಪ್ರಶಸ್ತಿ ಪತ್ರ, ₹ 3 ಸಾವಿರ ನಗದು ಬಹುಮಾನ ಪಡೆದರು.

ADVERTISEMENT

ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಜಿ.ಚಂದನ್‌ ಹಾಗೂ ಎಚ್‌.ಎನ್‌.ವೈಶಾಖ್‌ ಅವರ ತಂಡ ದ್ವಿತೀಯ ಸ್ಥಾನ, ₹ 2 ಸಾವಿರ ನಗದು ಬಹುಮಾನ ಪಡೆಯಿತು. ಮಂಡ್ಯ ವಿಶ್ವವಿದ್ಯಾಲಯದ ಬಿ.ವಿ.ಪುನೀತ್‌, ಸಿ.ಎ.ಲೋಕೇಶ್‌ ಅವರ ತಂಡ ತೃತೀಯ ಸ್ಥಾನ, ₹ 1 ಸಾವಿರ ನಗದು ಬಹುಮಾನ ಪಡೆದರು.

ಮದ್ದೂರು ತಾಲ್ಲೂಕು, ಕೊಪ್ಪ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಎಸ್‌.ಅನನ್ಯಾ, ಬಿ.ನಂದೀಶ್‌ ಅವರ ತಂಡ ಸಮಾಧಾನಕರ, ₹ 500 ನಗದು ಬಹುಮಾನ ಪಡೆಯಿತು. ಸಹಾಯಕ ಪ್ರಾಧ್ಯಾಪಕ ಕಿರಣ್‌ ಎ.ಎಸ್‌. ಕ್ವಿಜ್‌ ನಡೆಸಿಕೊಟ್ಟರು.

ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಕ್ವಿಜ್‌ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್‌ ಹುಲ್ಮನಿ ಸ್ಪರ್ಧಿಗಳಿಗೆ ಶುಭ ಕೋರಿದರು. ಹಿರಿಯ ಸಿವಿಲ್‌ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ, ಪಿಇಎಸ್‌ ಪದವಿ ಕಾಲೇಜು ಪ್ರಾಚಾರ್ಯ ಡಾ.ಜೆ.ಮಹಾದೇವ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಡೇವಿಡ್‌ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.