ADVERTISEMENT

ಭಜನಾ ಪದ ಉಸಿರಾಗಿಸಿಕೊಂಡ ಶಿವಪ್ಪ

ರಾಜ್ಯ ಮಟ್ಟದ ‘ನಾಟ್ಯ ನಟರಾಜ’ ಪ್ರಶಸ್ತಿಯ ಗರಿಮೆ

​ಪ್ರಜಾವಾಣಿ ವಾರ್ತೆ
Published 29 ಮೇ 2021, 19:31 IST
Last Updated 29 ಮೇ 2021, 19:31 IST
ಚಿಕ್ಕಸೂಗೂರು ಗ್ರಾಮದ ಭಜನಾ ಕಲಾವಿದ ಶಿವಪ್ಪ ಅವರ ಕಲೆಯನ್ನು ಗುರುತಿಸಿ, ಬೆಂಗಳೂ‌ರಿನಲ್ಲಿ ಕರ್ನಾಟಕ ನವಚೇತನ ಕಲಾನಿಕೇತನ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ನಾಟ್ಯ ನಟರಾಜ ಪ್ರಶಸ್ತಿ ಪ್ರದಾನ ಮಾಡಿದೆ
ಚಿಕ್ಕಸೂಗೂರು ಗ್ರಾಮದ ಭಜನಾ ಕಲಾವಿದ ಶಿವಪ್ಪ ಅವರ ಕಲೆಯನ್ನು ಗುರುತಿಸಿ, ಬೆಂಗಳೂ‌ರಿನಲ್ಲಿ ಕರ್ನಾಟಕ ನವಚೇತನ ಕಲಾನಿಕೇತನ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ನಾಟ್ಯ ನಟರಾಜ ಪ್ರಶಸ್ತಿ ಪ್ರದಾನ ಮಾಡಿದೆ   

ಚಿಕ್ಕಸೂಗೂರು(ಶಕ್ತಿನಗರ): ಚಿಕ್ಕಸೂಗೂರು ಗ್ರಾಮದ ಭಜನಾ ಕಲಾವಿದ ಶಿವಪ್ಪ ಅವರ ಪ್ರತಿಭೆಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ನಾಟ್ಯ ನಟರಾಜ ಎನ್ನುವ ಪ್ರಶಸ್ತಿ ನೀಡಲಾಗಿದೆ.

ಭಜನಾ ಪದ ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಶಿವಪ್ಪ ಅವರು ಆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. 1972 ರಲ್ಲಿ ಚಿಕ್ಕಸೂಗೂರು ಗ್ರಾಮದಲ್ಲಿ ಜನಿಸಿದ ಪಿ.ಶಿವಪ್ಪ ಅವರು ಬಾಲ್ಯದಿಂದಲೇ ಭಜನಾ ಪದ ಕಲೆ, ಬಯಲಾಟದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. 3 ನೇ ತರಗತಿಯವರಿಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ಭಜನಾ ಪದ ಕಲೆಯಲ್ಲಿ ಮಾತ್ರ ಸಾಧನೆ ಅಮೋಘ. ಈ ಮೂಲಕಇತರರಿಗೆ ಮಾದರಿಯಾಗಿದ್ದಾರೆ.

25 ವರ್ಷಗಳಿಂದ ಭಜನೆ ಗಾಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ಗ್ರಾಮಗಳ ದೇವಸ್ಥಾನಗಳಲ್ಲಿ ಹಾಡುತ್ತಿದ್ದ ಭಜನಾ ಪದಗಳಿಂದ ಪ್ರಭಾವಿತರಾಗಿ ಅದೇ ಗ್ರಾಮದ ಹಿರಿಯರಾದ ದಿ. ಬುರಡ್ಡಿ ಈಶ್ವರಪ್ಪ ಅವರಲ್ಲಿ ಭಜನಾ ಪದ ಕಲೆಯನ್ನು ಕಲಿತು ಕರಗತ ಮಾಡಿಕೊಂಡಿದ್ದಾರೆ.

ADVERTISEMENT

‘ಎನ್‌.ಗಣೇಕಲ್‌ ಗ್ರಾಮದ ಮಹಾಂತ ಗುರುಗಳು ಅವರ ಕೃಪಾಶೀರ್ವಾದಿಂದ ಈ ಭಜನಾ ಪದಗಳ ಕ್ಷೇತ್ರದಲ್ಲಿ ಮುಂದುವರೆಸಲಾಗಿದೆ’ ಎನ್ನುತ್ತಾರೆ ಭಜನಾಪದ ಕಲಾವಿದ ಶಿವಪ್ಪ ಅವರು.

ಹಾರ್ಮೋನಿಯಂ ವಾದ್ಯ ನುಡಿಸುವಲ್ಲಿ ನಿಪುಣರು. ಅಲ್ಲದೆ ತಾವು ಕಲಿತ ಭಜನಾ ಪದ ಕಲೆಯನ್ನು ಯುವಕರಿಗೆ ಈಗಲೂ ಕಲಿಸಿಕೊಡುತ್ತಿದ್ದಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳು ಇವರ ಕಲಾ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕರ್ನಾಟಕ ನವಚೇತನ ಕಲಾನಿಕೇತನ ಸಂಸ್ಥೆಯು ರಾಜ್ಯಮಟ್ಟದ ನಾಟ್ಯ ನಟರಾಜ ಪ್ರಶಸ್ತಿ ಪ್ರದಾನ ಮಾಡಿ ಬೆಂಗಳೂರಿನಲ್ಲಿ ಗೌರವಿಸಿದೆ.

ಹಲವಾರು ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವ ಹಾಗೂ ವಿಶೇಷ ದಿನಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದಲ್ಲದೆ ಗ್ರಾಮಗಳಲ್ಲಿ ಬಯಲಾಟಗಳ ನಿರ್ದೇಶನ ಮಾಡಿ ಬಯಲಾಟಗಳನ್ನು ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ.

‘ಭಜನಾ ಪದ ಕಲೆಗಳು ಕಣ್ಮರೆಯಾಗುತ್ತಿವೆ. ಜನರ ಜೀವನ ಶೈಲಿ ಬದಲಾಗುತ್ತಿದೆ. ಬಡತನದಲ್ಲಿ ಬೆಳೆದಿರುವ, ಭಜನಾ ಪದ ಕಲೆಯನ್ನೇ ಜೀವನದ ಅವಿಭಾಜ್ಯ ಅಂಗವೆಂದು ತಿಳಿದ ಶಿವಪ್ಪ ಅವರ ಸಾಧನೆ, ಪ್ರತಿಭೆಯನ್ನು ಸರ್ಕಾರ ಗುರುತಿಸಬೇಕು’ ಎನ್ನುತ್ತಾರೆ ಗ್ರಾಮದ ನಿವಾಸಿ ಮಹಾದೇವ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.