ADVERTISEMENT

ರಾಯಚೂರು ವಿವಿ ಮಾದರಿಯಾಗಲು ಬೆಂಬಲ

ವಸತಿನಿಲಯಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಸನಗೌಡ ದದ್ದಲ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 15:50 IST
Last Updated 18 ಮಾರ್ಚ್ 2023, 15:50 IST
ರಾಯಚೂರು ತಾಲ್ಲೂಕಿನ ಯರಗೇರಾದ ಸಮೀಪ ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಾ.ಬಸನಗೌಡ ದದ್ದಲ್‌ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ರಾಯಚೂರು ತಾಲ್ಲೂಕಿನ ಯರಗೇರಾದ ಸಮೀಪ ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಾ.ಬಸನಗೌಡ ದದ್ದಲ್‌ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.   

ರಾಯಚೂರು: ‘ರಾಯಚೂರು ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡಲು ಈ ಕ್ಷೇತ್ರದ ಶಾಸಕನಾಗಿ ವಿಶ್ವವಿದ್ಯಾಲಯದ ಬೆನ್ನೆಲುಬಾಗಿ ಧ್ವನಿಯಾಗಿ ಬೆಂಬಲಿಸಿ ಕೆಲಸ ಮಾಡುತ್ತೇನೆ’ ಎಂದು ಶಾಸಕ ಬಸನಗೌಡ ದದ್ದಲ್‌ ಹೇಳಿದರು.

ತಾಲ್ಲೂಕಿನ ಯರಗೇರಾದ ಸಮೀಪ ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಇದೇ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ‘ಒಂದು ಅಪ್ಪುಗೆ’ ಕಿರುಚಿತ್ರದ ಟೀಸರ್ ಬಿಡುಗಡೆ ನೆರವೇರಿಸಿದರು.

ADVERTISEMENT

ರಾಯಚೂರು ಜಿಲ್ಲೆಯ ಸಾಕ್ಷರತೆ ಹೆಚ್ಚಿಸಬೇಕು ಮತ್ತು ಜೊತೆಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮೂಲ ಸೌಕರ್ಯಗಳ ಜೊತೆಗೆ‌ ಗುಣಮಟ್ಟದ ಶಿಕ್ಷಣ ಪಡೆದಾಗ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ ಎಂದು ಘೋಷಿಸಲಾಗಿದೆ. ಈ ಜಿಲ್ಲೆಯನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಮಾಡಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ಹುದ್ದೆ ಪಡೆಯಲಿ ಎಂದು ಶಾಲಾ ಕಾಲೇಜುಗಳಿಗೆ ಕಳುಹಿಸುತ್ತಾರೆ. ವಿದ್ಯಾರ್ಥಿಗಳು ಕೂಡ ತಂದೆ ತಾಯಿಗಳು ಆಸೆಯನ್ನು ಹುಸಿಯಾಗದಂತೆ, ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಿಶ್ವವಿದ್ಯಾಲಯಕ್ಕೆ ಬೇಕಾದ ಆರ್ಥಿಕ ಸೌಲಭ್ಯ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಇದನ್ನು ಮುನ್ನೆಡೆಸುವ ಸಂದರ್ಭದಲ್ಲಿ ಸಾಕಷ್ಟು ಸಾವಾಲುಗಳು ಎದುರಿಸಬೇಕಾಯಿತು. 13 ವಿಭಾಗಗಳನ್ನು ಒಳಗೊಂಡು ಅಗತ್ಯ ಭೋಧಕ ಬೋಧಕೇತರ ಸಿಬ್ಬಂದಿ ನೇಮಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಗುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಕಷ್ಟು ತೊಂದರೆಯಾಗುತ್ತಿತ್ತು ಎಂದರು.

ವಿಶ್ವವಿದ್ಯಾಲಯದ ಮೊದಲ ಕುಲಪತಿಯಾದ ಡಾ.ಹರೀಶ್ ರಾಮಸ್ವಾಮಿ ಅವರ ಮುಂದೆಯೂ ಅನೇಕ ಸವಾಲುಗಳಿವೆ. ಕ್ಷೇತ್ರದ ಶಾಸಕನಾಗಿ ವಿಶ್ವವಿದ್ಯಾಲಯ ಅನುದಾನ ಒದಗಿಸಲು ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಕುಲಪತಿ ಡಾ.ಹರೀಶ್ ರಾಮಸ್ವಾಮಿ, ಗಿಲ್ಲೆಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಾರಾಯಣ, ಫಾರೂಕ್, ರಮೇಶ ರೋಸ್ಲಿ,ಮಲ್ಲಾರೆಡ್ಡಿ,ನಲ್ಲರೆಡ್ಡಿ ಹನುಮಂತ ನಜೀರ್ ಸಾಬ್ ಗೌಡ, ಸಿಂಡಿಕೇಟ್ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.