ADVERTISEMENT

ರಾಯಚೂರು | ‘ಮದ್ಯ ಕುಡಿಯೋದು ಬಿಟ್ಟು ಆರಾಮ ಇದ್ದೀವಿ’

ನಾಗರಾಜ ಚಿನಗುಂಡಿ
Published 24 ಏಪ್ರಿಲ್ 2020, 19:30 IST
Last Updated 24 ಏಪ್ರಿಲ್ 2020, 19:30 IST
ಗೋಪಾಲ
ಗೋಪಾಲ   

ರಾಯಚೂರು: ‘ಲಾಕ್‌ಡೌನ್‌ ಶುರುವಾದಾಗಿನಿಂದ ಮದ್ಯ ಕುಡಿಯುವುದನ್ನು ಬಿಟ್ಟಿದ್ದೇನೆ. ಅದರಿಂದಾಗಿ ಬಹಳ ಆರಾಮ ಇದ್ದೀನಿ. ದಿನಪೂರ್ತಿ ಕೆಲಸ, ರಾತ್ರಿ ಊಟ ಮಾಡ್ಕೊಂಡು ಮಲ್ಕೊಂತಿನಿ. ಇನ್ಯಾವತ್ತಿಗೂ ಮದ್ಯ ಕುಡಿಬಾರದು ಅನ್ನಿಸಿದೆ’ ಎಂದು ಮದ್ಯವಸನಿಯಾಗಿದ್ದ ಗೋಪಾಲ ಅವರು ಹೇಳಿದ ಮಾತಿದು.

ರಾಯಚೂರಿನ ಎಪಿಎಂಸಿ ಗಂಜ್‌ನಲ್ಲಿ ಕೃಷಿ ಉತ್ಪನ್ನಗಳನ್ನು ವಾಹನಕ್ಕೆ ತುಂಬಿಸುವ ಹಮಾಲಿ ಕೆಲಸ ಮಾಡುತ್ತಿರುವ ಜಲಾಲನಗರ ನಿವಾಸಿ ಗೋಪಾಲ ನಾಯಕ ಅವರು, ಮದ್ಯ ನಿಷೇಧದಿಂದಾಗಿ ಪರಿವರ್ತನೆ ಆಗಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಈಗ ಯಾವುದು ಚಿಂತೆಯಿಲ್ಲ. ಬಹಳ ಆರಾಮ ಇದ್ದೀವಿ. ಮದ್ಯ ಕುಡಿತದಿಂದ ಏನೂ ಸುಖ ಇಲ್ಲ. ನಮ್ಮ ಜೊತೆ ಇದ್ದ ಗೆಳೆಯರು ಸೇರಿ ಕುಡಿತಿದ್ದೀವಿ. ಈಗ ಎಲ್ಲರೂ ಕುಡಿತಿಲ್ಲ. ಇನ್ಮುಂದೆ ಕುಡಿಯುವುದನ್ನು ಕೈಬಿಡಲು ನಿರ್ಧಾರ ಮಾಡಿದ್ದೀನಿ’ ಎಂದರು.

ADVERTISEMENT

‘ಕುಡಿಯುವುದು ಬಿಟ್ಟ ಮ್ಯಾಲ್‌ ಮನೆಯಲ್ಲಿ ಬಹಳ ಖುಷಿ ಆಗಿದ್ದಾರೆ. ದೇವರು ನಿನ್ನ ಹಿಂಗೇ ಇಟ್ಟಿರಲಪ್ಪ ಅಂಥಾರ. ಇದರಿಂದ ಸಂಸಾರ ಭೇಷ್‌ ಇರತೈತಿ. ಮಕ್ಕಳು, ಹೆಂಡತಿ, ತಂದೆ–ತಾಯಿ ಎಲ್ಲರೂ ಆರಾಮದಿಂದ ಇದ್ದೀವಿ. ಕೆಲಸ ಮಾಡಿಕೊಂಡು ಮನೆಗೆ ಹೋಗ್ತೀನಿ. ಕೆಲಸ ಎಲ್ಲಾ ಮುಗಿಸಿಕೊಂಡು ಮನೆಗೆ ಹೋಗುವಾಗ ಮೊದಲು ಕುಡಿಯುವ ಚಟಾ ಇತ್ತು. ಸರ್ಕಾರದವರು ಮದ್ಯ ನಿಷೇಧ ಮಾಡಿದ ಮ್ಯಾಲ್‌, ಒಂದೆರಡು ದಿನ ಕೈ, ಕಾಲು ನೋವು ಅದಾಂಗ ಅನಿಸಿತ್ತು. ಈಗೇನೂ ಸಮಸ್ಯೆಯಿಲ್ಲ. ಆರಾಮ ಇದ್ದೀನಿ’ ಎಂದು ಹೇಳಿದರು.

ಗೋಪಾಲ ಅವರ ಪತ್ನಿ ಸುಜಾತಾ ಅವರು, ಪತಿಯು ಮದ್ಯ ಸೇವಿಸುವುದನ್ನು ನಿಲ್ಲಿಸಿದ್ದ ಬಗ್ಗೆ ಖುಷಿಯಾಗಿದ್ದಾರೆ. ಪತಿಯ ಕುರಿತು ತುಂಬಾ ಕಾಳಜಿ ವಹಿಸಿದ್ದಾರೆ. ‘ಮದ್ಯ ಮಾರಾಟ ಮಾಡೋದನ್ನು ಕಾಯಂ ಬಂದ್‌ ಮಾಡಿದ್ರ ಚಲೋ ಆಗತೈತಿ. ದಿನ ಮನೆಗೆ ಬರುವಾಗ ₹100 ಖರ್ಚು ಮಾಡಿ ಮದ್ಯ ಕುಡಿದು ಬರ್ತಿದ್ರು. ಕುಡಿಯಾಕಂಥ ನಮ್ಮತ್ರ ರೊಕ್ಕ ಕೇಳತಿದ್ದಲ್ಲ. ಕುಟುಂಬದ ಬಗ್ಗೆ ಮೊದಲಿದ್ದಂತೆಯೆ ಕಾಳಜಿ ಇದೆ. ಯಾವಾಗಲೂ ಹೀಗೆ ಇರಬೇಕು. ಮದ್ಯ ಕುಡಿಯುವುದನ್ನು ಬಿಟ್ಟಬಿಡು ಅಂಥ ಹೇಳಿದ್ದೀವಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.