ADVERTISEMENT

ಚನ್ನಪಟ್ಟಣ: ಜನಪದ ಸಂಸ್ಕೃತಿ ಕಲಾ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:32 IST
Last Updated 22 ಸೆಪ್ಟೆಂಬರ್ 2021, 4:32 IST
ಚನ್ನಪಟ್ಟಣದಲ್ಲಿ ನಡೆದ ಜನಪದ ಸಂಸ್ಕೃತಿ ಕಲಾ ಉತ್ಸವ ಮತ್ತು ಸೋಬಾನೆ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಕಲಾವಿದರು ನೃತ್ಯ ಪ್ರದರ್ಶನ
ಚನ್ನಪಟ್ಟಣದಲ್ಲಿ ನಡೆದ ಜನಪದ ಸಂಸ್ಕೃತಿ ಕಲಾ ಉತ್ಸವ ಮತ್ತು ಸೋಬಾನೆ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಕಲಾವಿದರು ನೃತ್ಯ ಪ್ರದರ್ಶನ   

ಚನ್ನಪಟ್ಟಣ: ಜಾನಪದ ಕಲೆ ಮತ್ತು ಸಾಹಿತ್ಯದ ಬಗ್ಗೆ ಉಪೇಕ್ಷೆ ಮಾಡಿದರೆ ಭವಿಷ್ಯದಲ್ಲಿ ಸಾಂಸ್ಕೃತಿಕ ದಾರಿದ್ರ್ಯ ಅನುಭವಿಸಬೇಕಾಗುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ಅಭಿಪ್ರಾಯಪಟ್ಟರು.

ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕಿನ ಸಂತೆಮೊಗೇನಹಳ್ಳಿಯ ಗಾನಸುಧೆ ಸಾಂಸ್ಕೃತಿಕ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಜನಪದ ಸಂಸ್ಕೃತಿ ಕಲಾ ಉತ್ಸವ ಮತ್ತು ಸೋಬಾನೆ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ರಾಂಪುರ ಲೋಕೇಶ್ ಮಾತನಾಡಿ, ‘ಹೊಸ ಪ್ರತಿಭೆಗಳು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ಆವಕಾಶ
ಒದಗಿಸುತ್ತಿರುವ ಸಂಘಸಂಸ್ಥೆಗಳ ಕಾರ್ಯ ಶ್ಲಾಘನೀಯ. ನಮ್ಮ ಸಾಂಸ್ಕೃತಿಕ ಪರಂಪರೆ ಉಳಿಸಲು ಹಾಗೂ ಕಲಾವಿದರ ಸಹಾಯಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು’ ಎಂದರು.

ADVERTISEMENT

ವಂದಾರಗುಪ್ಪೆ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್ ಮಾತನಾಡಿ, ‘ಜನಪದ ಕಲೆಯನ್ನು ಗೌರವಿಸುವ ಮೂಲಕ ಅಭಿಜಾತ ಕಲೆಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಸಂಘಸಂಸ್ಥೆಗಳ ಮೇಲಿದೆ’ ಎಂದರು.

ದಲಿತ ಮುಖಂಡ ಸಿದ್ದರಾಮಯ್ಯ ಮಾತನಾಡಿ, ‘ಜಾನಪದ ಕಲೆ ಮತ್ತು ಸಂಸ್ಕೃತಿಯತ್ತ ಯುವಜನಾಂಗ ಒಲವು ಬೆಳೆಸಿಕೊಳ್ಳುತ್ತಿಲ್ಲ. ಇದು ಜಾನಪದ ಕ್ಷೇತ್ರಕ್ಕೆ ಬಹು ದೊಡ್ಡ ಹೊಡೆತ’ ಎಂದರು.

ಪತ್ರಕರ್ತ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಸದಸ್ಯ ಶ್ರೀನಿವಾಸ್, ಟ್ರಸ್ಟ್ ಅಧ್ಯಕ್ಷೆ ಗೌರಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಜಾನಪದ ಗೀತಗಾಯನ, ಡೊಳ್ಳು ಕುಣಿತ, ಪಟದ ಕುಣಿತ, ಚಿಲಿಪಿಲಿ, ಸೋಮನ ಕುಣಿತ, ಕಂಸಾಳೆ, ಭರತನಾಟ್ಯ, ರಂಗಗೀತೆ, ಸೋಬಾನೆ ಗೀತೆಗಳ ಗಾಐನ ನಡೆಯಿತು.

ಕಲಾವಿದರಾದ ಕುಮಾರ್, ಚಕ್ಕಲೂರು ಚೌಡಪ್ಪ, ಸುರೇಶ್ ರಾಂಪುರ, ಶಿವಣ್ಣ ಅಬ್ಬೂರು, ಚೌ.ಪು. ಸ್ವಾಮಿ, ವಿಜೇಂದ್ರರಾವ್, ಜಯಸಿಂಹ, ರಾಜೇಶ್, ಮೇರಿ, ಕಿರಣ್, ಗುರುಮೂರ್ತಿ, ಸೌಮ್ಯಶ್ರೀ ರಾವ್, ಕೆ.ಟಿ.ಲಕ್ಷ್ಮಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.