ADVERTISEMENT

ಮಾವು ಮಾರಾಟ ಮೇಳಕ್ಕೆ ಭರ್ಜರಿ ಸ್ಪಂದನೆ: ಮೂರೇ ದಿನದಲ್ಲಿ 24 ಟನ್‌ ಹಣ್ಣು ಮಾರಾಟ

ಗ್ರಾಹಕರಿಂದ ಉತ್ತಮ ಸಂದನೆ: ಅವಧಿ ವಿಸ್ತರಣೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 18:43 IST
Last Updated 13 ಮೇ 2019, 18:43 IST
ಮೇಳದಲ್ಲಿನ ಮಳಿಗೆಯಲ್ಲಿ ಮಾರಾಟಕ್ಕೆ ಇಟ್ಟ ಹಣ್ಣುಗಳು
ಮೇಳದಲ್ಲಿನ ಮಳಿಗೆಯಲ್ಲಿ ಮಾರಾಟಕ್ಕೆ ಇಟ್ಟ ಹಣ್ಣುಗಳು   

ರಾಮನಗರ: ಜಾನಪದ ಲೋಕದ ಮುಂಭಾಗ ನಡೆದಿರುವ ಮಾವು ಮಾರಾಟ ಮೇಳಕ್ಕೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ದೊರೆತಿದ್ದು, ಮೊದಲ ಮೂರು ದಿನದಲ್ಲೇ 24 ಟನ್‌ನಷ್ಟು ಹಣ್ಣು ಮಾರಾಟವಾಗಿದೆ.

ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿಯೇ ಹತ್ತಾರು ಮಳಿಗೆಗಳಲ್ಲಿ ಹಣ್ಣುಗಳ ಮಾರಾಟ ನಡೆದಿದೆ. ಕಾರ್ಬೈಡ್‌ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದೇ 10ರಂದು (ಶುಕ್ರವಾರ) ಮೇಳ ಆರಂಭಗೊಂಡಿದ್ದು, ಮೊದಲ ದಿನವೇ ₹ 5.32 ಲಕ್ಷದಷ್ಟು ವಹಿವಾಟು ನಡೆದಿತ್ತು. ಶನಿವಾರ ಹಾಗೂ ಭಾನುವಾರದಂದು ಗ್ರಾಹಕರು ಮಾವು ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದ್ದರು. ಅದರಲ್ಲೂ ಭಾನುವಾರ ಬರೋಬ್ಬರಿ 10 ಟನ್‌ನಷ್ಟು ಮಾವು ಮಾರಾಟವಾಗಿದ್ದು, ಒಂದೇ ದಿನ ₹ 9.56 ಲಕ್ಷದಷ್ಟು ವಹಿವಾಟು ನಡೆಯಿತು.

ದುಪ್ಪಟ್ಟು ವಹಿವಾಟು

ADVERTISEMENT

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಮೂರೇ ದಿನದಲ್ಲಿ ವಹಿವಾಟು ದುಪ್ಪಟ್ಟು ನಡೆದಿದೆ.

ಕಳೆದ ಸಾಲಿನಲ್ಲಿ 8 ದಿನ ಕಾಲ ಮೇಳ ನಡೆದಿತ್ತು. ಒಟ್ಟು 13.855 ಟನ್‌ ಮಾರಾಟದಿಂದ ₹ 10.32 ಲಕ್ಷದಷ್ಟು ವಹಿವಾಟು ಆಗಿತ್ತು. ಈ ವರ್ಷ ಮೂರು ದಿನದಲ್ಲಿ 24 ಟನ್‌ ಮಾವು ಮಾರಾಟವಾಗಿ ₹ 21.88 ಲಕ್ಷ ಮೊತ್ತದ ವಹಿವಾಟು ನಡೆದಿದೆ.

‘ಮೇಳಕ್ಕೆ ಎಂದಿಗಿಂತ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸೋಮವಾರವೂ ತಕ್ಕ ಮಟ್ಟಿಗೆ ವಹಿವಾಟು ನಡೆದಿದೆ. ನಿಗದಿತ ವೇಳಾಪಟ್ಟಿಯಂತೆ ಮಾರಾಟಕ್ಕೆ ಮಂಗಳವಾರ ಕಡೆಯ ದಿನವಾಗಿದೆ. ಆದರೆ ಗ್ರಾಹಕರ ಬೇಡಿಕೆ ಹಾಗೂ ರೈತರ ಅಭಿಪ್ರಾಯ ಆಧರಿಸಿ ಮೇಳದ ಅವಧಿಯನ್ನು ವಿಸ್ತರಿಸುವ ಕುರಿತು ಪರಿಶೀಲಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ ತಿಳಿಸಿದರು.

‘ಬೆಂಗಳೂರಿನ ಕಬ್ಬನ್‌ ಉದ್ಯಾನ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಮಾವು ಮಾರಾಟಕ್ಕೆ ರೈತರಿಗೆ ಈಗಾಗಲೇ ಅವಕಾಶ ದೊರೆತಿದೆ. ಇದೇ 19ರಂದು ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಚಟುವಟಕೆಗಳೂ ಸಹ ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಮೇಳದಲ್ಲಿನ ಮಾವು ದರ ಪಟ್ಟಿ (ಪ್ರತಿ ಕೆ.ಜಿಗೆ–₹ ಗಳಲ್ಲಿ)
ಬಾದಾಮಿ - ₹100
ಸೇಂದೂರ –₹52
ತೋತಾಪುರಿ – ₹28
ಬಂಗನಪಲ್ಲಿ – ₹70
ಮಲಗೋವ – ₹120
ಮಲ್ಲಿಕಾ – ₹95
ದಶಹರಿ – ₹95

*ಕಳೆದ ವರ್ಷಕ್ಕಿಂತ ಈ ಬಾರಿಯ ವಹಿವಾಟು ದುಪ್ಪಟ್ಟಾಗಿದೆ. ಕಾರ್ಬೈಡ್‌ಮುಕ್ತ ಹಣ್ಣುಗಳಿಗೆ ಗ್ರಾಹಕರಿಂದ ಬೇಡಿಕೆ ಇದೆ
ಗುಣವಂತ
–ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.