ADVERTISEMENT

ಬೇಸಿಗೆ ಬಂದರೂ ತೆರೆಯದ ಈಜುಕೊಳ

ಎರಡು ವರ್ಷದ ಹಿಂದೆಯೇ ಬಂದ್; ಕ್ರೀಡಾಪ್ರಿಯರಿಗೆ ನಿರಾಸೆ

ಆರ್.ಜಿತೇಂದ್ರ
Published 20 ಮಾರ್ಚ್ 2023, 5:26 IST
Last Updated 20 ಮಾರ್ಚ್ 2023, 5:26 IST
ಈಜುಕೊಳದ ಸದ್ಯದ ಪರಿಸ್ಥಿತಿ
ಈಜುಕೊಳದ ಸದ್ಯದ ಪರಿಸ್ಥಿತಿ   

ರಾಮನಗರ: ಈ ಬಾರಿ ಬೇಸಿಗೆ ಆರಂಭ ಆದರೂ ಇನ್ನೂ ಈಜುಕೊಳದ ಬಾಗಿಲು ತೆರೆಯದಿರುವುದು ಕ್ರೀಡಾಪ್ರಿಯರಿಗೆ ನಿರಾಸೆ ಮೂಡಿಸಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ಮಾಣ ಮಾಡಿರುವ ಈಜುಕೊಳವು 2019ರಲ್ಲಿ ಉದ್ಘಾಟನೆ ಆಗಿ, ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸಿತ್ತು. ಸ್ವಿಮ್‌ಲೈಫ್‌ ಸಿಮ್ಮಿಂಗ್‌ ಅಕಾಡೆಮಿಯು ಇದರ ಹೊರಗುತ್ತಿಗೆ ಪಡೆದಿದ್ದು, ಆಸಕ್ತರಿಗೆ ಈಜಿನ ತರಬೇತಿಯನ್ನೂ ನೀಡುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಇದನ್ನು ಮುಚ್ಚಲಾಯಿತು. ಕೋವಿಡ್ ಭೀತಿ ದೂರವಾಗಿ ವರ್ಷವೇ ಕಳೆದರೂ ಇನ್ನೂ ಇದರ ಬಾಗಿಲು ಮಾತ್ರ ತೆರೆಯುತ್ತಿಲ್ಲ.

ನಗರದ ಕುಮಾರಸ್ವಾಮಿ ಬಡಾವಣೆ ಬಳಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿರುವ ಈ ಈಜುಕೊಳವು ಕ್ರೀಡಾ ಪ್ರಿಯರ ಪಾಲಿನ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೇಳಿಕೊಳ್ಳುವಂತಹ ತಾಣಗಳು ಇಲ್ಲ. ಇರುವ ಕೆಲವೇ ಸೌಲಭ್ಯಗಳಲ್ಲಿ ಒಂದಾದ ಈಜುಕೊಳ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತೆ ಆಗಿದೆ. ಬೇಸಿಗೆ ಹಾಗೂ ಬಿಡುವಿನ ಅವಧಿಯಲ್ಲಿ ಈಜು ಕಲಿಯುವ, ಕ್ರೀಡಾಭ್ಯಾಸ ಮಾಡುವ ಆಸಕ್ತರ ಕನಸಿಗೆ ಇದರಿಂದ ಅಡ್ಡಿಯಾಗಿದೆ.

ADVERTISEMENT

ಬಹುದಿನಗಳ ಕನಸು: ಜಿಲ್ಲಾ ಕೇಂದ್ರದಲ್ಲಿ ಉತ್ತಮವಾದ ಈಜುಕೊಳ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕ್ರೀಡಾಪ್ರೇಮಿಗಳ ಬಹುದಿನದ ಕನಸು. ರಾಮನಗರವು ಜಿಲ್ಲಾ ಕೇಂದ್ರವಾಗಿ ನಿರ್ಮಾಣವಾದ ಖುಷಿಯಲ್ಲಿಯೇ 2007ರಲ್ಲಿ ಈ ಕೊಳದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ನಗರಾಭಿವೃದ್ಧಿ ಪ್ರಾಧಿಕಾರವು ಇದಕ್ಕಾಗಿ ಕುಮಾರಸ್ವಾಮಿ ಬಡಾವಣೆಯಲ್ಲಿ 1.5 ಎಕರೆ ಜಾಗ ನೀಡಿತ್ತು. ಆರಂಭದಲ್ಲಿ ನಿರ್ಮಾಣದ ವೆಚ್ಚ ₹1.5 ಕೋಟಿ ಆಗಿದ್ದು, ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ನಂತರ ಮತ್ತೆ ಆರಂಭಗೊಂಡು ಕುಂಟುತ್ತಾ ಸಾಗಿತ್ತು.

ವರ್ಷಗಳ ಹಿಂದೆ ಕ್ರೀಡಾ ಇಲಾಖೆಯು ಮತ್ತೆ ₹99.9 ಲಕ್ಷ ವೆಚ್ಚದಲ್ಲಿ ಕೊಳದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ಕಡೆಗೂ ಕಾಮಗಾರಿ ಮುಗಿದು 2019ರ ಮಾರ್ಚ್‌ನಿಂದ ಇದು ಬಳಕೆಗೆ ಮುಕ್ತವಾಗಿತ್ತು.

ಅಂತರರಾಷ್ಟ್ರೀಯ ಗುಣಮಟ್ಟ: ಈ ಈಜುಕೊಳವು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದ್ದು, ತರಬೇತಿಗೆ ಸೂಕ್ತವಾಗಿದೆ. ಸ್ಪರ್ಧೆಗಳನ್ನೂ ನಡೆಸುವ ಸಾಮರ್ಥ್ಯ ಹೊಂದಿದೆ. 25 ಮೀಟರ್‌ನಷ್ಟು ಅಗಲ ಹಾಗೂ 50 ಮೀಟರ್‌ನಷ್ಟು ಉದ್ದವಿದೆ. ಏಳು ಅಡಿಗಳಷ್ಟು ಆಳವಾಗಿರುವ ಕೊಳಕ್ಕೆ ನೀರು ಒಳ ಬರುವ ಮತ್ತು ಹೊರಹೋಗುವ ವ್ಯವಸ್ಥೆ ಇದೆ. ಇದರೊಟ್ಟಿಗೆ ನೀರು
ಶುದ್ಧೀಕರಣ ಯಂತ್ರವನ್ನು ಅಳವಡಿಸಲಾಗಿದೆ. ಕೊಳಕ್ಕೆ ಹೊಂದಿಕೊಂಡಂತೆ ಸುತ್ತ ಪ್ರೇಕ್ಷಕರ ಗ್ಯಾಲರಿ, ಕಂಪೌಂಡ್ ಸೌಲಭ್ಯವೂ ಇದೆ.

ನಿರ್ವಹಣೆಯದ್ದೇ ಸಮಸ್ಯೆ: ನಿರ್ವಹಣೆಯ ಕೊರತೆ ಕಾರಣಕ್ಕೆ ಈಜುಕೊಳವನ್ನು ಬಹುದಿನದಿಂದ ಮುಚ್ಚಲಾಗಿದೆ. ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಈಜುಕೊಳಗಳಿಗೆ ಬೇಡಿಕೆ ಹೆಚ್ಚು. ಉಳಿದ ದಿನಗಳಲ್ಲಿ ಜನ ಬರುವುದು ಕಡಿಮೆ. ಒಳಾಂಗಣದಲ್ಲಿದ್ದು, 25 ಮೀಟರ್‌ ವಿಸ್ತೀರ್ಣದಲ್ಲಿ ಇರುವ ಕೊಳಗಳನ್ನು ನಿರ್ವಹಣೆ ಮಾಡಬಹುದು. ಆದರೆ ಇದು ವಿಸ್ತೀರ್ಣದಲ್ಲಿ ಅದರ ದುಪ್ಪಟ್ಟು ಇದೆ. ಕೊಳವನ್ನು ನಿರ್ವಹಣೆ ಮಾಡಿದ್ದೇ ಆದಲ್ಲಿ ತಿಂಗಳಿಗೆ ₹30–35 ಸಾವಿರ ವಿದ್ಯುತ್‌ ಬಿಲ್ ಬರುತ್ತದೆ. ಇದಲ್ಲದೆ ಇಬ್ಬರು ಜೀವ
ರಕ್ಷಕರು, ಒಬ್ಬ ತರಬೇತುದಾರರು, ಭದ್ರತಾ ಸಿಬ್ಬಂದಿ ಆದಿಯಾಗಿ ಅನೇಕ ಮಂದಿ ಬೇಕಾಗುತ್ತದೆ.

ಸನ್‌ಶೈನ್‌ ಕಂಪನಿಗೆ ಗುತ್ತಿಗೆ

ಸದ್ಯ ಈಜುಕೊಳವನ್ನು ಸನ್‌ಶೈನ್‌ ಪೂಲ್‌ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಸದ್ಯದಲ್ಲೇ ಕಂಪನಿಯು ಸಾರ್ವಜನಿಕರಿಗೆ ಕೊಳದ ಬಾಗಿಲು ತೆರೆಯಲಿದೆ ಎನ್ನುತ್ತಾರೆ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ.

ರಾಮನಗರ ಜೊತೆಗೆ ಚಿಕ್ಕಬಳ್ಳಾಪುರ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈಜುಕೊಳ ನಿರ್ವಹಣೆಗೆ ಇಲಾಖೆಯು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಿದೆ. ಸದ್ಯ ರಾಮನಗರದಲ್ಲಿನ ಈಜುಕೊಳದ ನೀರನ್ನು ಸ್ವಚ್ಛ ಮಾಡುವ ಕಾರ್ಯ ನಡೆದಿದೆ. ಕೆಮಿಕಲ್ ರೈಲಿಂಗ್‌ ಸೇರಿದಂತೆ ಕೆಲವು ಕೆಲಸಗಳು ಬಾಕಿ ಇದ್ದು, ಅವುಗಳು ಮುಗಿದ ನಂತರ ಕಾರ್ಯಾರಂಭ ಮಾಡಲಿದೆ. ಖಂಡಿತ ಈ ಬೇಸಿಗೆಯಲ್ಲಿ ಮಕ್ಕಳಿಗೆ ಇಲ್ಲಿ ಈಜುವ ಅವಕಾಶ ಸಿಗಲಿದೆ ಎಂದು ಅವರು ಭರವಸೆ ನೀಡುತ್ತಾರೆ.

‘ಕಡಿಮೆ ಶುಲ್ಕ ನಿಗದಿ ಮಾಡಿ’

ಈ ಹಿಂದೆ ಕೊಳದ ಗುತ್ತಿಗೆ ಪಡೆದಿದ್ದ ಕಂಪನಿಯು ವಿಧಿಸುತ್ತಿದ್ದ ಪ್ರವೇಶ ಶುಲ್ಕವು ದುಬಾರಿ ಆಗಿದೆ ಎಂದು ಈಜುಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿ ಬ್ಯಾಚ್‌ನಲ್ಲಿ ಈಜಲು 45 ನಿಮಿಷ ಕಾಲ ಅವಕಾಶ ನೀಡಿದ್ದು, ಇದಕ್ಕಾಗಿ ಒಬ್ಬರಿಗೆ ₹50 ಶುಲ್ಕ ವಿಧಿಸಲಾಗುತ್ತಿತ್ತು.

ಕ್ರೀಡಾ ಇಲಾಖೆಯು ಸಾರ್ವಜನಿಕರ ತೆರಿಗೆಯ ಹಣ ವಿನಿಯೋಗಿಸಿ ಈ ಕೊಳವನ್ನು ನಿರ್ಮಾಣ ಮಾಡಿದೆ. ಹೀಗಿರುವಾಗ ಜನರಿಗೆ ಕೈಗೆಟಕುವ ದರದಲ್ಲಿ ₹20–25 ಶುಲ್ಕ ನಿಗದಿ ಮಾಡಬೇಕು. ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಈಜು ತರಬೇತಿ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.