ADVERTISEMENT

ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲೇ ಪಠ್ಯಪುಸ್ತಕ

ಮುಂದಿನ ಶೈಕ್ಷಣಿಕ ಸಾಲಿನ ಶೇ 80ರಷ್ಟು ಪಠ್ಯ ಪೂರೈಕೆ; ಶಾಲೆಗಳ ಮೂಲಕ ಹಂಚಿಕೆ

ಆರ್.ಜಿತೇಂದ್ರ
Published 21 ಮಾರ್ಚ್ 2023, 5:45 IST
Last Updated 21 ಮಾರ್ಚ್ 2023, 5:45 IST
ರಾಮನಗರ ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಿಗೆ 2023–24ನೇ ಸಾಲಿನ ಪಠ್ಯಪುಸ್ತಕಗಳನ್ನು ಬಿಇಒ ಪಾರ್ವತಮ್ಮ ವಿತರಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ಪಠ್ಯಪುಸ್ತಕ ಯೋಜನೆ ನೋಡಲ್‌ ಅಧಿಕಾರಿ ಮಂಜುನಾಥ್‌, ಇಸಿಒಗಳಾದ ಸಿದ್ದಲಿಂಗ ಸ್ವಾಮಿ, ಪ್ರಮೀಳಾ, ಸಿಆರ್‌ಪಿ ಮುನಿಯಪ್ಪ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಪ್ರೇಮಾ, ಕೃಷ್ಣಪ್ಪ, ಶಿವರುದ್ರಯ್ಯ ಇದ್ದರು
ರಾಮನಗರ ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಿಗೆ 2023–24ನೇ ಸಾಲಿನ ಪಠ್ಯಪುಸ್ತಕಗಳನ್ನು ಬಿಇಒ ಪಾರ್ವತಮ್ಮ ವಿತರಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ಪಠ್ಯಪುಸ್ತಕ ಯೋಜನೆ ನೋಡಲ್‌ ಅಧಿಕಾರಿ ಮಂಜುನಾಥ್‌, ಇಸಿಒಗಳಾದ ಸಿದ್ದಲಿಂಗ ಸ್ವಾಮಿ, ಪ್ರಮೀಳಾ, ಸಿಆರ್‌ಪಿ ಮುನಿಯಪ್ಪ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಪ್ರೇಮಾ, ಕೃಷ್ಣಪ್ಪ, ಶಿವರುದ್ರಯ್ಯ ಇದ್ದರು   

ರಾಮನಗರ: ರಾಜ್ಯದಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳು ಈ ವರ್ಷವೇ ವಿತರಣೆ ಆಗುತ್ತಿವೆ. ಈಗಾಗಲೇ ಶಾಲೆಗಳಲ್ಲಿ ಪುಸ್ತಕ ಹಂಚಿಕೆ ಕಾರ್ಯ ಆರಂಭವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಇತಿಹಾಸದಲ್ಲಿ ಇಷ್ಟು ಮುಂಗಡವಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಆಗುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಅಧಿಕಾರಿಗಳು. ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯಕ್ರಮದ 2023–24ನೇ ಸಾಲಿನ ಪಠ್ಯಪುಸ್ತಕಗಳು ಭಾಗಶಃ ಮುದ್ರಣಗೊಂಡಿದ್ದು, ಶಾಲೆಗಳ ಮೂಲಕ ಹಂಚಿಕೆ ಕಾರ್ಯ ನಡೆಯುತ್ತಿದೆ.

ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳ ಪೈಕಿ ಶೇ 80ರಷ್ಟು ಪುಸ್ತಕಗಳು ಈಗಾಗಲೇ ಕೇಂದ್ರ ಕಚೇರಿಯಿಂದ ಆಯಾ ತಾಲ್ಲೂಕು ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳನ್ನು ತಲುಪುತ್ತಿವೆ. ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳಿಗೆ ನೀಡುವ ನಲಿ–ಕಲಿ ಕಾರ್ಡ್‌ ಸೇರಿದಂತೆ ಕೆಲವೊಂದು ಸಾಮಗ್ರಿಗಳಷ್ಟೇ ಬರುವುದು ಬಾಕಿ ಇದೆ.

ADVERTISEMENT

ಸದ್ಯ ಶಾಲೆ ಹಂತದಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಅವು ಪೂರ್ಣಗೊಂಡ ನಂತರ ಏಪ್ರಿಲ್‌ 8ರಂದು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ 10ರಂದು ಪ್ರೌಢಶಾಲೆಗಳಲ್ಲಿ ಸಮುದಾಯದತ್ತ ಕಾರ್ಯಕ್ರಮ ನಡೆಯಲಿದೆ. ಅಷ್ಟರ ಒಳಗೆ ಎಲ್ಲ ವಿದ್ಯಾ‌ರ್ಥಿಗಳಿಗೂ ಪಠ್ಯ ತಲುಪಿಸುವ ಗುರಿ ಇದೆ ಎನ್ನುತ್ತಾರೆ ಅಧಿಕಾರಿಗಳು.

2022–23ನೇ ಸಾಲಿನಲ್ಲಿ ಸಕಾಲಕ್ಕೆ ಪಠ್ಯಪುಸ್ತಕ ಸಿಗದೆ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದರು. ಮುದ್ರಣ ಕಾಗದ ದುಬಾರಿ ಆದ ಕಾರಣ ಸಕಾಲಕ್ಕೆ ಪಠ್ಯಗಳನ್ನು ಮುದ್ರಣ ಮಾಡಿಕೊಡಲು ಗುತ್ತಿಗೆದಾರರು ವಿಫಲರಾಗಿದ್ದರು. ಹೀಗಾಗಿ ಜೂನ್‌–ಜುಲೈ ಕಳೆದರೂ ಪಠ್ಯ ಸಿಕ್ಕಿರಲಿಲ್ಲ. ಇದರ ಬದಲಿಗೆ ‘ಕಲಿಕಾ ಚೇತರಿಕೆ’ ಕೈಪಿಡಿಯನ್ನು ಇಲಾಖೆಯು ಶಾಲೆಗಳಿಗೆ ನೀಡಿತ್ತು. ಇಲಾಖೆ ನೀಡಿದ ಪಿಡಿಎಫ್‌ ರೂಪದ ಪಠ್ಯವನ್ನು ಆಯಾ ಶಾಲೆಗಳ ಶಿಕ್ಷಕರು ಶಿಕ್ಷಣ ಸ್ಥಳೀಯವಾಗಿ ಮುದ್ರಿಸಿಕೊಂಡು ಇಲ್ಲವೇ ಝೆರಾಕ್ಸ್‌ ಮಾಡಿಸಿಕೊಂಡು ವಿದ್ಯಾರ್ಥಿಗಳಿಗೆ ಹಂಚಿದ್ದರು. ಶಿಕ್ಷಣ ಇಲಾಖೆಯ ಈ ನಿರ್ಲಕ್ಷ್ಯದ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆಗಸ್ಟ್ 15ರ ನಂತರವಷ್ಟೇ ಸರ್ಕಾರಿ ಶಾಲೆಗಳಿಗೆ ಪಠ್ಯ ಸರಬರಾಜು ಆಗಿತ್ತು. ಇದರಿಂದ ಸಕಾಲಕ್ಕೆ ಪಾಠಗಳು ನಡೆಯದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಗಿತ್ತು.

ಅನುಕೂಲವೇನು?: ಮುಂಚೆಯೇ ಪಠ್ಯಪುಸ್ತಕ ಕೈ ಸೇರುವುದರಿಂದ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿಯೇ ತಮ್ಮ ಮುಂದಿನ ಪಠ್ಯಕ್ರಮ ತಿಳಿಯಬಹುದು. ಸಕಾಲಕ್ಕೆ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೂ ಇದು ಸಹಕಾರಿ ಆಗಲಿದೆ ಎಂದು ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಪೋಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.