ADVERTISEMENT

ಪ್ರಾಕೃತಿಕ ಸೌಂದರ್ಯದ ಮಡಿಲು ಕಣ್ವ ಜಲಾಶಯ

ಎಚ್.ಎಂ.ರಮೇಶ್
Published 22 ಸೆಪ್ಟೆಂಬರ್ 2021, 4:42 IST
Last Updated 22 ಸೆಪ್ಟೆಂಬರ್ 2021, 4:42 IST
ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ
ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ   

ಚನ್ನಪಟ್ಟಣ: ಕಣ್ವ ಮಹರ್ಷಿ ತಪಸ್ಸು ಮಾಡಿದ್ದರು ಎಂಬ ಪ್ರಸಿದ್ಧಿ ಪಡೆದಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ತಾಲ್ಲೂಕಿನ ಜೀವನಾಡಿ ಕಣ್ವ ಜಲಾಶಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು.

ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಜಲಾಶಯವನ್ನು 1946ರಲ್ಲಿ ಅಂದಿನ ಮೈಸೂರಿನ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಅವರು ನಿರ್ಮಿಸಿದ್ದರು. ಸುತ್ತಮುತ್ತಲು ಇರುವ ಆಕರ್ಷಕ ಹಸಿರುಸಿರಿಯ ಬೆಟ್ಟಗುಡ್ಡೆಗಳ ನಡುವೆ ಇರುವ ಜಲಾಶಯ ಪ್ರಾಕೃತಿಕ ಸೌಂದರ್ಯದ ಮಡಿಲು ಎಂಬಂತಿದೆ.

ಕಣ್ವ ಜಲಾಶಯವು ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಸುಮಾರು 65 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಕಣ್ವ ಜಲಾಶಯದ ಸೊಬಗನ್ನು ವೀಕ್ಷಿಸಲು ಬೆಂಗಳೂರು ಮೈಸೂರು ಸೇರಿದಂತೆ ದೂರದೂರುಗಳಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಶನಿವಾರ ಭಾನುವಾರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವುದು ಇಲ್ಲಿಯ ವಿಶೇಷ.

ADVERTISEMENT

ಜಲಾಶಯದ ಪ್ರವೇಶ ದ್ವಾರದವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶವಿದೆ. ಜಲಾಶಯದ ಏರಿಯ ಮೇಲೆ ಪ್ರವೇಶ ನಿಷಿದ್ಧ ಮಾಡಲಾಗಿದೆ. ಜಲಾಶಯದ ಏರಿಯ ಮೇಲೆ ಹಿಂದೆ ಪ್ರವೇಶವಿತ್ತು. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಆರೋಪ ಕೇಳಿಬಂದ ಮೇಲೆ ಪ್ರವೇಶವನ್ನು ನಿಷಿದ್ಧ ಮಾಡಲಾಗಿದೆ. ಪ್ರವೇಶ ದ್ವಾರದ ಮುಂದೆ ಹಾಗೂ ಪಕ್ಕ ಸಾಕಷ್ಟು ವಿಶಾಲವಾದ ಜಾಗವಿದ್ದು, ಅಲ್ಲಿ ಜಲಾಶಯವನ್ನು ಕುಳಿತು ವೀಕ್ಷಣೆ ಮಾಡಲು ಸಿಮೆಂಟ್ ಬೆಂಚ್ ಗಳನ್ನು ಹಾಕಲಾಗಿದೆ. ಸುಂದರ ಪರಿಸರದಲ್ಲಿರುವ ಕಣ್ವ ಜಲಾಶಯ ಒಂದು ದಿನದ ಪಿಕ್ ನಿಕ್ ಗೆ ಹೇಳಿ ಮಾಡಿಸಿದಂತಿದೆ.

ಮಕ್ಕಳ ಪಾರ್ಕ್ ನಿರ್ಮಾಣಕ್ಕೆ ಯೋಜನೆ: ಕಣ್ವ ಜಲಾಶಯದ ಬಳಿ ಮಕ್ಕಳ ಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಯೋಜನೆ ಸಿದ್ಧಗೊಳಿಸಿದೆ. ವಿಶೇಷವಾಗಿ ಶನಿವಾರ, ಭಾನುವಾರದ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅದರಲ್ಲೂ ಮಕ್ಕಳಿಗಾಗಿ ಪಾರ್ಕ್ ನಿರ್ಮಾಣ ಮಾಡುವ ಯೋಜನೆ ಇದಾಗಿದ್ದು, ಮಕ್ಕಳ ಒಂದು ದಿನದ ಮನರಂಜನೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಈ ಪಾರ್ಕ್ ಒಳಗೊಂಡಿರುತ್ತದೆ. ಪಾರ್ಕ್ ನಿರ್ಮಾಣಕ್ಕೆ ಜಾಗ ನಿಗದಿಗೊಳಿಸಲಾಗಿದ್ದು, ಕಾಮಗಾರಿ ಆರಂಭಗೊಳ್ಳಬೇಕಿದೆ.

ಕಣ್ವ ಪ್ರವಾಸಿಮಂದಿರ: ಕಣ್ವ ಜಲಾಶಯದ ಪಕ್ಕದಲ್ಲೆ ಇರುವ ಗುಡ್ಡೆಯಲ್ಲಿ ಆಕರ್ಷಕ ಹಸಿರುವನದಲ್ಲಿರುವ ಕಣ್ವ ಪ್ರವಾಸಿಮಂದಿರ ಇಲ್ಲಿನ ಪ್ರವಾಸಿಗಳ ಮತ್ತೊಂದು ನೆಚ್ಚಿನ ತಾಣ. ಪ್ರವಾಸಿಮಂದಿರದ ಬಳಿಯಿಂದ ಜಲಾಶಯದ ಸೊಬಗು ಮತ್ತಷ್ಟು ಹೆಚ್ಚುತ್ತದೆ. ಜಲಾಶಯ ವೀಕ್ಷಿಸಲು ಬರುವ ಪ್ರವಾಸಿಗರು ಕಣ್ವ ಪ್ರವಾಸಿಮಂದಿರದ ಬಳಿಗೂ ಭೇಟಿ ನೀಡುತ್ತಾರೆ.

ಜಲಾಶಯ ವೀಕ್ಷಣೆಗೆ ಬರುವವರು ಸ್ವಂತ ವಾಹನದಲ್ಲಿ ಬರುವುದೇ ಹೆಚ್ಚು. ಇಲ್ಲಿಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಜಲಾಶಯದ ಹತ್ತಿರವಿರುವ ದಶವಾರ ಗ್ರಾಮದವರೆಗೆ ಮಾತ್ರ ಬಸ್ ಸೌಲಭ್ಯ ಇದೆ. ಅಲ್ಲಿಂದ ಜಲಾಶಯಕ್ಕೆ ಸುಮಾರು 4 ಕಿ.ಮೀ. ದೂರವಿದೆ. ಕೆಂಗಲ್ ಕಡೆಯಿಂದ ಜಲಾಶಯಕ್ಕೆ ಆಗಮಿಸುವ ರಸ್ತೆಯು ಅಲ್ಲಲ್ಲಿ ಗುಂಡಿಬಿದ್ದಿದೆ. ಇಲ್ಲಿಗೆ ಉತ್ತಮ ರಸ್ತೆ ನಿರ್ಮಾಣ ಮೊದಲ ಅವಶ್ಯಕತೆಯಾಗಿದೆ.

ಹೋಟೆಲ್ ಇಲ್ಲ: ಜಲಾಶಯದ ಬಳಿ ಊಟ, ತಿಂಡಿ ವ್ಯವಸ್ಥೆಗೆ ಯಾವುದೇ ಹೋಟೆಲ್ ಇಲ್ಲ. ಸಣ್ಣಪುಟ್ಟ ಅಂಗಡಿಗಳು ಇವೆ. ಶನಿವಾರ, ಭಾನುವಾರ ಪಾನಿಪೂರಿ, ಮಸಾಲಪೂರಿ, ಗೋಬಿ ಅಂಗಡಿಗಳು ತೆರೆಯುತ್ತವೆ.
ಜಲಾಶಯ ವೀಕ್ಷಣೆಗೆ ಬರುವವರು ಜೊತೆಯಲ್ಲಿ ತಿಂಡಿ, ಊಟ ಒಯ್ಯುವುದು ಉತ್ತಮ.
ಜಲಾಶಯ ವೀಕ್ಷಣೆಗೆ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಸಮಯ ಉತ್ತಮ. ನಂತರ ಈ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗುತ್ತದೆ. ಈ ಪ್ರದೇಶ ಸಂಪೂರ್ಣ ಬೆಟ್ಟಗುಡ್ಡಗಳಿಂದ ಕೂಡಿರುವ ಕಾರಣ ಕಾಡುಪ್ರಾಣಿಗಳ ವಾಸಸ್ಥಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.