ADVERTISEMENT

ಮಿಶ್ರ ಬೆಳೆ ಪದ್ಧತಿಯಲ್ಲಿ ಆಚಾಪುರದ ಶಿಕ್ಷಕ ನೂರುಲ್ಲಾ ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:50 IST
Last Updated 22 ಸೆಪ್ಟೆಂಬರ್ 2021, 4:50 IST
ಕಾಳುಮೆಣಸು ಬೆಳೆಯೊಂದಿಗೆ ರೈತ ನೂರುಲ್ಲಾ
ಕಾಳುಮೆಣಸು ಬೆಳೆಯೊಂದಿಗೆ ರೈತ ನೂರುಲ್ಲಾ   

ಆನಂದಪುರ: ಸರ್ಕಾರಿ ಉದ್ಯೋಗ ಒಂದಿದ್ದರೆ ಸಾಕು ಉತ್ತಮ ಜೀವನ ನಡೆಸಬಹುದು ಎನ್ನುವ ಈ ಕಾಲದಲ್ಲಿ ಸರ್ಕಾರಿ ಹುದ್ದೆಯೊಂದಿಗೆ ಕೃಷಿಯಲ್ಲೂ ಉತ್ತಮ ಬೆಳೆ ಬೆಳೆಯುವುದರ ಮೂಲಕ ಕೃಷಿಕರಿಗೆ ಮಾದರಿಯಾಗಿದ್ದಾರೆ ಆಚಾಪುರದ ಶಿಕ್ಷಕ ನೂರುಲ್ಲಾ.

ಆನಂದಪುರದಿಂದ ಶಿವಮೊಗ್ಗಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸಿಗುವ ಆಚಾಪುರದಲ್ಲಿ ಇವರ ಸುಂದರ ಪ್ರಾಯೋಗಿಕವಾದ ತೋಟವನ್ನು ಕಾಣಬಹುದು. ನೂರುಲ್ಲಾ ಸಹೋದರ ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಕೃಷಿಯಲ್ಲಿ ಇಬ್ಬರೂ ಆಸಕ್ತಿ ಹೊಂದಿದ್ದಾರೆ. ಇರುವ ಎರಡು ಎಕರೆ ಜಮೀನಿನಲ್ಲಿ ಅಚ್ಚುಕಟ್ಟಾಗಿ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಸಾಗರದ ಮಾದರಿ ಕೃಷಿಕರಾದ ಅಮಾನುಲ್ಲಾ ಅವರ ಮಾರ್ಗದರ್ಶನದಲ್ಲಿ ತೋಟವನ್ನು ನಿರ್ಮಿಸಿದ್ದಾರೆ. ಕೊಳವೆಬಾವಿಯಿಂದ ಹನಿ ನೀರಾವರಿ ಪದ್ಧತಿ ಮೂಲಕ ತೋಟಕ್ಕೆ ನೀರುಣಿಸುತ್ತಿದ್ದಾರೆ. ಸಾವಯವ ಗೊಬ್ಬರದ
ಜೊತೆಗೆ ರಾಸಾಯನಿಕ ಗೊಬ್ಬರವನ್ನೂ ಬಳಸಿ ಬೆಳೆ ತೆಗೆಯುತ್ತಿದ್ದಾರೆ.

ADVERTISEMENT

ಕಾಫಿ ಬೆಳೆಯನ್ನೂ ಮಲೆನಾಡಿಯಲ್ಲೂ ಬೆಳೆಯುವ ಮೂಲಕ ಇಲ್ಲಿನ ವಾತಾವರಣದಲ್ಲೂ ಉತ್ತಮ ಬೆಳೆಯನ್ನು ತೆಗೆಯಬಹುದು ಎಂಬುದನ್ನು ತೋರಿಸಿದ್ದಾರೆ. ಇದರ ಮಧ್ಯದಲ್ಲಿಯೇ ಅಡಿಕೆ ಹಾಗೂ ಕಾಳು ಮೆಣಸು ಬೆಳೆಯುತ್ತಿದ್ದಾರೆ.

ಒಂದು ಬೆಳೆಗಿಂತ ಮಿಶ್ರ ಬೆಳೆ ಬೆಳೆದಾಗ ಒಂದರಲ್ಲಿ ನಷ್ಟವಾದರೆ ಮತ್ತೊಂದು ಬೆಳೆಯಲ್ಲಿ ಸರಿದೂಗಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಇವರ ಕೃಷಿ ಪದ್ಧತಿ ನೋಡಲು ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಅನೇಕ ಕೃಷಿಕರು ಇದೇ ಮಾದರಿಯನ್ನು ಅಳವಡಿಸಿಕೊಳ್ಳುವುದಾಗಿ ಹೇಳಿ ಹೋಗುತ್ತಿದ್ದಾರೆ.

‘10-15 ಎಕರೆಯಲ್ಲಿ ಕೃಷಿ ಮಾಡಿ ಲಾಭಕ್ಕಿಂತ ನಷ್ಟ ಅನುಭವಿಸುವುದಕ್ಕಿಂತ ಒಂದೆರಡು ಎಕರೆಯಲ್ಲಿ ಮಿಶ್ರ ಬೆಳೆಯುವುದರಿಂದ ಸಮಯ ಹಾಗೂ ಹಣದ ಉಳಿತಾಯದ ಜೋತೆಗೆ ಹೆಚ್ಚಿನ ಲಾಭ ಗಳಿಸಬಹುದು’ ಎಂದು ರೈತ ನೂರುಲ್ಲಾ ಹೇಳುತ್ತಾರೆ.

ಒಂದು ಎಕರೆಯಲ್ಲಿ 360 ಅಡಿಕೆ ಗಿಡ, 190 ಸಿಲ್ವರ್ ಗಿಡ, 1200 ಅರೇಬಿಕಾ ಕಾಫಿ ಬೆಳೆಸಿದ್ದಾರೆ. ಅಡಿಕೆ ಸಾಲುಗಳ ನಡುವೆ ಕಾಫಿ ಗಿಡ ಹಾಗೂ ಸಿಲ್ವರ್ ಮರಗಳನ್ನು ಬೆಳೆಸಿದ್ದಾರೆ. ಸಿಲ್ವರ್ ಮರಗಳಿಗೆ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸಿದ್ದಾರೆ.

‘6 ಅಡಿಗಳ ಅಂತರದಲ್ಲಿ ಅಡಿಕೆ ಸಸಿ, 5 ಅಡಿಗಳ ಅಂತರದಲ್ಲಿ ಕಾಫಿ ಗಿಡ ಹಾಗೂ ಸಿಲ್ವರ್ ಗಿಡಗಳನ್ನು 12 ಅಡಿ ಅಂತರದಲ್ಲಿ ಹಾಕುವುದರಿಂದ ಉತ್ತಮ ಫಸಲು ಬರುತ್ತದೆ’ ಎಂದು ಮಾಹಿತಿ ನೀಡಿದರು.

5 ವರ್ಷಗಳ ಹಿಂದೆಯೇ ಕೃಷಿ ಆರಂಭಿಸಿ ಉತ್ತಮ ಆದಾಯ ಸಂಪಾದಿಸುತ್ತಿದ್ದಾರೆ. ವರ್ಷಕ್ಕೆ ₹ 1 ಲಕ್ಷವನ್ನು ಕೃಷಿ ಕಾರ್ಯಕ್ಕೆ ವ್ಯಯ ಮಾಡುತ್ತಿದ್ದಾರೆ.
ಕೃಷಿ ಮಾಡಿದ 3ನೇ ವರ್ಷದಿಂದ ಉತ್ತಮ ಫಸಲು ಬರುತ್ತಿದೆ. ಮೊದಲಿಗೆ ಅಲ್ಪ ಮೊತ್ತದ ಆದಾಯ ಸಂಪಾದಿಸಿದ್ದ ಇವರು
5ನೇ ವರ್ಷದಲ್ಲಿ
₹ 4 ಲಕ್ಷದಿಂದ ₹ 5 ಲಕ್ಷ ಆದಾಯ ನೀರಿಕ್ಷೆ ಮಾಡಿದ್ದಾರೆ. ಶಿಕ್ಷಕರಾಗಿರುವುದರಿಂದ ಹೆಚ್ಚಿನ ಸಮಯ ಶಾಲೆಯಲ್ಲಿರುವ ಇವರು ಬೆಳಿಗ್ಗೆ ಹಾಗೂ ಸಂಜೆಯ ಬಿಡುವಿನ ಸಮಯದಲ್ಲಿ ತೋಟದ ಕಡೆ ಗಮನಹರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.