ADVERTISEMENT

ಅಪ್ಪಾಜಿ ಜನಾಸ್ತಿ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ: ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:03 IST
Last Updated 22 ಸೆಪ್ಟೆಂಬರ್ 2021, 4:03 IST
ಗೋಣಿಬೀಡು ಗ್ರಾಮದಲ್ಲಿ ಮಂಗಳವಾರ ಅಪ್ಪಾಜಿ ಸ್ಮರಣೆ ಹಾಗೂ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸೇರಿದ್ದ ಜನ
ಗೋಣಿಬೀಡು ಗ್ರಾಮದಲ್ಲಿ ಮಂಗಳವಾರ ಅಪ್ಪಾಜಿ ಸ್ಮರಣೆ ಹಾಗೂ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸೇರಿದ್ದ ಜನ   

ಭದ್ರಾವತಿ: ‘ಬದುಕಿನಲ್ಲಿ ಯಾವುದೇ ಸ್ವಂತ ಆಸ್ತಿ ಮಾಡಿಕೊಳ್ಳದ ವ್ಯಕ್ತಿ ಜನಾಸ್ತಿಯನ್ನೇ ಬಿಟ್ಟು ಹೋಗಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಒಟ್ಟಾಗಿ ಪಕ್ಷದ ಸಂಘಟನೆ ಮಾಡಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಗೋಣಿಬೀಡು ಗ್ರಾಮದಲ್ಲಿ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ತಮ್ಮ ಬದುಕಿನುದ್ದಕ್ಕೂ ಬಡ ಜನರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡಿದ್ದ ಅಪ್ಪಾಜಿ ಬಿಟ್ಟು ಹೋಗಿರುವುದೇ ನಿಮ್ಮಂತಹ ಜನಪ್ರೀತಿಯನ್ನು’ ಎಂದು ಹರ್ಷೋದ್ಗಾರದ ನಡುವೆ ಹೇಳಿದರು.

‘ಸರ್ಕಾರಕ್ಕೆ ಜನಪ್ರತಿನಿಧಿಗಳ ಬಗ್ಗೆ ಗೌರವ ಇದ್ದರೆ, ಇಲ್ಲಿನ ಮುಖ್ಯ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಡರಿಡಬೇಕೆಂಬ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ನಾನೇ ಮುಖ್ಯಮಂತ್ರಿಯಾಗಿ ಅದನ್ನು ಘೋಷಿಸುವ ದಿನ ದೂರವಿಲ್ಲ’ ಎಂದು ಕರತಾಡನದ ನಡುವೆ ಘೋಷಿಸಿದರು.

ADVERTISEMENT

ಸಹೋದರಿ ಮಡಿಲಿಗೆ: ‘ನನ್ನ ಸಹೋದರಿ ಅಪ್ಪಾಜಿ ಪತ್ನಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಇವರನ್ನು ಕ್ಷೇತ್ರದ ಮಗಳಾಗಿ ಸ್ವೀಕರಿಸಿ ಅವರನ್ನು ಆಶೀರ್ವದಿಸಿ’ ಎಂದು ಭಾವುಕರಾಗಿ ಕುಮಾರಸ್ವಾಮಿ ಹೇಳಿದಾಗ ಪಕ್ಕದಲ್ಲೇ ನಿಂತಿದ್ದ ಶಾರದಾ ಅಪ್ಪಾಜಿ ಅವರ ಕಣ್ಣಾಲಿಗಳಲ್ಲಿ ನೀರು ಹರಿಯಿತು.

‘ಕ್ಷೇತ್ರದ ಗ್ರಾಮ ಪಂಚಾಯಿತಿ ಹಾಗೂ ನಗರಸಭಾ ಚುನಾವಣೆಯಲ್ಲಿ ನಮ್ಮ ಎಲ್ಲಾ ಕಾರ್ಯಕರ್ತರು ಕಷ್ಟಪಟ್ಟು ಅಪ್ಪಾಜಿ ಹೆಸರಿನ ಶಕ್ತಿಯ ಮೇಲೆ ಸಾಕಷ್ಟು ಗೆಲುವು ಕಂಡಿದ್ದಾರೆ. ಈಗ ಈ ಸಹೋದರಿಯನ್ನು ಶಾಸನಸಭೆಗೆ ಕಳುಹಿಸುವ ಕೆಲಸವನ್ನು ಎಲ್ಲರೂ ಒಗ್ಗಟ್ಟಾಗಿ ಮಾಡಬೇಕು’ ಎಂದು ಕರೆ ನೀಡಿದರು.

ಎಲ್ಲಾ ಕೇರಿಯಲ್ಲೂ ಅಪ್ಪಾಜಿ: ‘ಕ್ಷೇತ್ರದ ಯಾವುದೇ ಕೇರಿಗೆ ಹೋದರೂ 10 ಮಂದಿ ಅಪ್ಪಾಜಿ ಬೆಂಬಲಿಗರು ಸಿಗುತ್ತಾರೆ. ಇದು ಅವರಿಗಿದ್ದ ಶಕ್ತಿ. ಈಗ ನೆರೆದಿರುವುದು ಬಂದ ಜನ, ತಂದ ಜನವಲ್ಲ ಎಂಬುದನ್ನು ಪ್ರತಿಯೊಬ್ಬ ನಾಗರಿಕರು ಅರಿಯಬೇಕು’ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.

‘1995ರಲ್ಲಿ ಕ್ಷೇತ್ರದ ರಾಮನಗರದ ಕಲ್ಯಾಣಮಂಟಪ ಕಾರ್ಯಕ್ರಮದಲ್ಲಿ ನಾನು, ದೇವೇಗೌಡರು ಒಂದೇ ವೇದಿಕೆಯಲ್ಲಿದ್ದಾಗ, ನೀವು ಮುಖ್ಯಮಂತ್ರಿ ಆಗುತ್ತೀರಾ ಅಂತ ಹೇಳಿದ್ದೆ. ಅವರು ಮುಖ್ಯಮಂತ್ರಿ ಆದರು. ಆ ಬಳಿಕ ಪ್ರಧಾನಿಯಾಗಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದರು. ಈಗ ಅವರ ಮಗನ ಜತೆ ವೇದಿಕೆಯಲ್ಲಿದ್ದೇನೆ. ಇಲ್ಲಿ ಹೇಳುತ್ತಿದ್ದೇನೆ, ಡಿಸೆಂಬರ್ ನಂತರ ಬದಲಾವಣೆಯಾಗಿ ರಾಜ್ಯದಲ್ಲಿ ಹೊಸ ರಾಜಕಾರಣ ಆರಂಭಿಸುವ ಮೊದಲ ಸಭೆಯಾಗಿ ಇದು ಬೆಳಕು ನೀಡಿದೆ’ ಎಂದು ಹೇಳಿದರು.

ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ‘ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರಿಡುವಂತೆ ನಡೆದಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಬೆಂಗಳೂರಿಗೆ ತೆರಳುವ ಸಂದರ್ಭ ಬಂದರೆ ಇಲ್ಲಿರುವ ಎಲ್ಲಾ ಕಾರ್ಯಕರ್ತರು ಅಲ್ಲಿಗೆ ಬಂದು ಹೋರಾಟ ಯಶಸ್ವಿ ಮಾಡಿಕೊಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ತೋರುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಕುಮಾರ್, ಜೆ.ಪಿ.ಯೋಗೀಶ್, ಮಣಿಶೇಖರ್, ಪಕ್ಷದ ಅಧ್ಯಕ್ಷ ಆರ್.ಕರುಣಾಮೂರ್ತಿ, ಎಂ.ಎ. ಅಜಿತ್, ಎಂ.ಶ್ರೀಕಾಂತ್ ಉಪಸ್ಥಿತರಿದ್ದರು.

ಸಸಿ ವಿತರಣೆ, ಅಭಿಮಾನಿ ಆಕ್ರೋಶ
ಪ್ರತಿಮೆ ಪುಣ್ಯ ಸ್ಮರಣೆ ನೆನಪಿನಲ್ಲಿ ಸಭಾ ಸ್ಥಳ ಹಾಗೂ ಪ್ರತಿಮೆ ಅನಾವರಣ ಸ್ಥಳದಲ್ಲಿ ನಾಗರಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು.

ಗೋಣಿಬೀಡು ಗ್ರಾಮದ ಪ್ರಮುಖ ರಸ್ತೆಯಲ್ಲಿ ತಳಿರು, ತೋರಣ, ರಂಗೋಲಿ ಹಾಕಲಾಗಿತ್ತು. ಎರಡೂ ಬದಿಗಳಲ್ಲಿ ಅಪ್ಪಾಜಿ ಹಾಗೂ ಇನ್ನಿತರೆ ಮುಖಂಡರ ಫ್ಲೆಕ್ಸ್ ಹಾಕಲಾಗಿತ್ತು.

‘ಫ್ಲೆಕ್ಸ್ ಕಿತ್ತು ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ’ ಎಂದು ವೇದಿಕೆ ಬಳಿ ಅಭಿಮಾನಿಯೊಬ್ಬ ಕೂಗಾಟ ನಡೆಸಿದ್ದು, ಕೆಲಹೊತ್ತು ಸಭಾಂಗಣದಲ್ಲಿ ಗೊಂದಲ ಸೃಷ್ಟಿ ಮಾಡಿತ್ತು.

‘ಅ.2ರ ನಂತರ ಸಕ್ರಿಯ ರಾಜಕಾರಣ’

ಭದ್ರಾವತಿ:‘ಅಪ್ಪಾಜಿ ನಂತರ ಕ್ಷೇತ್ರದಲ್ಲಿ ಯಾರೂ ಇಲ್ಲ ಎಂಬ ಪ್ರಶ್ನೆಗೆ ಉತ್ತರದ ರೀತಿಯಲ್ಲಿ ಕುಮಾರಣ್ಣ (ಎಚ್‌.ಡಿ.ಕುಮಾರಸ್ವಾಮಿ) ಅವರು ನನ್ನ ಹೆಸರು ಘೋಷಿಸಿದ್ದು, ಪರ್ಯಾಯದ ರೀತಿಯಲ್ಲಿ ಅಕ್ಟೋಬರ್ 2ರ ಗಾಂಧಿಜಯಂತಿ ದಿನದಿಂದ ನಾನು ಕ್ಷೇತ್ರದ ಸಕ್ರಿಯ ರಾಜಕಾರಣದಲ್ಲಿ ಕಾಲಿಡುತ್ತೇನೆ’ ಎಂದು ಶಾರದ ಅಪ್ಪಾಜಿ ಘೋಷಿಸಿದರು.

‘ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಅಭಿಮಾನವನ್ನು ಆಗಲೂ ನನ್ನ ಮೇಲೆ ಇಟ್ಟು ನನ್ನನ್ನು ಹರಸಿ ಬೆಳೆಸುವ ಶಕ್ತಿ ನಿಮ್ಮೆಲ್ಲರ ಮೇಲಿದೆ. ಇದನ್ನು ಯಶಸ್ವಿ ಮಾಡುತ್ತೀರಿ ಎಂಬ ನಂಬಿಕೆಯೊಂದಿಗೆ ಹೆಜ್ಜೆ ಇಡುತ್ತಿದ್ದೇನೆ’ ಎಂದು ಅಭಿಮಾನಿಗಳ ಮನವಿ ಮಾಡಿದರು.

==

ವೇದಿಕೆಯಲ್ಲಿ ಧಾರ್ಮಿಕ ಗುರುಗಳು

ಭದ್ರಾವತಿ: ವೇದಿಕೆಯಲ್ಲಿ ಆದಿ ಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಹೊಸದುರ್ಗ ಕನಕಪೀಠ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಪೀಠದ ಸರದಾರ ಸೇವಾಲಾಲ್ ಸ್ವಾಮೀಜಿ, ಹಿರಿಯೂರು ಮಾದಾರ ಪೀಠದ ಆದಿಜಾಂಬವ ಮಾರ್ಕಾಂಡಮುನಿ ಸ್ವಾಮೀಜಿ, ಭದ್ರಗಿರಿ ಮುರುಗೇಶ್ ಸ್ವಾಮೀಜಿ, ಸಿಎಸ್ಐ ವಲಯಾಧ್ಯಕ್ಷ ಜಿ. ಸ್ಟ್ಯಾನ್ಲಿ, ಶಿವಮೊಗ್ಗ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.