ADVERTISEMENT

ಶಿವಮೊಗ್ಗ | ಮೇ 11ರಿಂದ ಅಡಿಕೆ ವಹಿವಾಟು ಆರಂಭ: ಬೆಳೆಗಾರರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 9 ಮೇ 2020, 16:11 IST
Last Updated 9 ಮೇ 2020, 16:11 IST
ಅಡಿಕೆ ಮಾರುಕಟ್ಟೆ– ಸಂಗ್ರಹ ಚಿತ್ರ
ಅಡಿಕೆ ಮಾರುಕಟ್ಟೆ– ಸಂಗ್ರಹ ಚಿತ್ರ   

ಶಿವಮೊಗ್ಗ: ಜಿಲ್ಲೆಯ ಎಪಿಎಂಸಿ ವರ್ತಕರು, ಸಹಕಾರ ಸಂಸ್ಥೆಗಳು ಮೇ 11ರಿಂದ ಅಡಿಕೆ ವಹಿವಾಟು ಆರಂಭಿಸುತ್ತಿದ್ದು, ಮಲೆನಾಡು ಹಾಗೂ ಸುತ್ತಲ ಅಡಿಕೆ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ.

ಕೊರೊನಾ ನಿರ್ಬಂಧಗಳ ಕಾರಣ ಒಂದೂವರೆ ತಿಂಗಳಿನಿಂದ ಅಡಿಕೆ ಮಾರುಕಟ್ಟೆಯೂ ಬಂದ್‌ ಆಗಿತ್ತು. ಅಡಿಕೆ ಮಾರಾಟ ಮಾಡಲು ರೈತರಿಗೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಕೇಂದ್ರ ಸರ್ಕಾರ ಜನರು ಜಗಿದು ಎಲ್ಲೆಂದರಲ್ಲಿ ಉಗುಳುವ ಪರಿಣಾಮ ಕೊರೊನಾ ವೈರಸ್‌ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಗುಟ್ಕಾ, ಪಾನ್‌ಮಸಾಲ ಉತ್ಪಾದನೆ, ಮಾರಾಟ ನಿಷೇಧಿಸಿತ್ತು. ಇದು ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು.

ರಾಜ್ಯದ ಅಡಿಕೆಗೆ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ. ದೇಶದ ಶೇ 90ರಷ್ಟು ಗುಟ್ಕಾ, ಪಾನ್‌ಮಸಾಲ ಕಂಪನಿಗಳು, ಕಾರ್ಖಾನೆಗಳು ಇರುವುದು ಉತ್ತರದ ರಾಜ್ಯಗಳಲ್ಲೇ. ಕೊರೊನಾ ಭೀತಿಯ ಕಾರಣ ಬಾಗಿಲು ಮುಚ್ಚಿದ್ದವು. ಹಾಗಾಗಿ, ರಾಜ್ಯದಲ್ಲೂ ಅಡಿಕೆ ವಹಿವಾಟು ಸ್ಥಗಿತವಾಗಿತ್ತು. ಈಗ ಶಿವಮೊಗ್ಗದ ಮ್ಯಾಮ್‌ಕೋಸ್‌, ಎಪಿಎಂಸಿ ಮಂಡಿಗಳು ಏಕ ಕಾಲಕ್ಕೆ ಮತ್ತೆ ವಹಿವಾಟು ಆರಂಭಿಸುತ್ತಿವೆ.

ADVERTISEMENT

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60ರಷ್ಟಿದೆ. ರಾಜ್ಯದಲ್ಲಿ ಪ್ರತಿವರ್ಷ 4 ಲಕ್ಷದಿಂದ 5 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಶೇ 70ರಷ್ಟು ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲೇ ಬೆಳೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ವಾರ್ಷಿಕ ಸರಾಸರಿ ₹20 ಸಾವಿರ ಕೋಟಿ ವಹಿವಾಟು ನಡೆಯುತ್ತದೆ.

'ಕೇಂದ್ರ ಸರ್ಕಾರ ಗುಟ್ಕಾ, ಪಾನ್‌ ಮಸಾಲ ಉತ್ಪಾದನೆ, ಮಾರಾಟದ ಮೇಲೆ ವಿಧಿಸಿದ್ದ ನಿರ್ಬಂಧ ಹಿಂದಕ್ಕೆ ಪಡೆದಿದೆ. ಸಾರ್ವಜನಿಕವಾಗಿ ಉಗುಳುವುದರ ಮೇಲೆ ನಿಷೇಧ ಹೇರಿದೆ. ಉತ್ತರ ಭಾರತದಲ್ಲಿ ಪಾನ್‌ ಮಸಾಲ ತಯಾರಿಕಾ ಘಟಕಗಳು ಆರಂಭವಾಗಿವೆ. ಹಾಗಾಗಿ, ಅಡಿಕೆ ವಹಿವಾಟು ಮತ್ತೆ ಆರಂಭವಾಗುತ್ತಿದೆ' ಎಂದು ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಕೆ.ಸಿ.ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.