ADVERTISEMENT

3 ರೂಪಾಯಿ 46 ಪೈಸೆ ಸಾಲ ಕಟ್ಟಲು 15 ಕಿ.ಮೀ ನಡೆದು ಬಂದ ರೈತ

ಬ್ಯಾಂಕ್‌ ಸಿಬ್ಬಂದಿ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 3:34 IST
Last Updated 28 ಜೂನ್ 2020, 3:34 IST
ರೈತ ಲಕ್ಷ್ಮೀನಾರಾಯಣ
ರೈತ ಲಕ್ಷ್ಮೀನಾರಾಯಣ   

ಹೊಸನಗರ: ‘ನಿಮ್ಮ ಸಾಲದ ಬಾಕಿ ಇದೆ. ಕೂಡಲೇ ಬ್ಯಾಂಕ್‌ಗೆ ಬಂದು ಹಣ ಕಟ್ಟಿ. ಇಲ್ಲವಾದರೆ ಸಮಸ್ಯೆ ಆಗುತ್ತದೆ’ ಎಂದು ಬ್ಯಾಂಕಿನಿಂದ ಬಂದ ಕರೆಯಿಂದ ಗಾಬರಿಗೊಂಡ ಗ್ರಾಹಕರೊಬ್ಬರು 15 ಕಿ. ಮೀ ನಡೆದು ಬಂದು ಸಾಲದ ಮೊತ್ತ 3 ರೂಪಾಯಿ 46 ಪೈಸೆ ಕಟ್ಟಿದ ಪ್ರಕರಣ ತಾಲ್ಲೂಕಿನ ನಿಟ್ಟೂರಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಿಟ್ಟೂರು ಸಮೀಪದ ಅಮಡೆ ಗ್ರಾಮದ ರೈತ ಲಕ್ಷ್ಮಿನಾರಾಯಣ ನಿಟ್ಟೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ₹ 35,000 ಕೃಷಿ ಸಾಲ ಪಡೆದಿದ್ದರು. ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ₹ 32,000 ಮನ್ನಾ ಆಗಿತ್ತು. ಉಳಿದ ₹ 3 ಸಾವಿರವನ್ನು ಕೆಲವು ತಿಂಗಳ ಹಿಂದೆ ಬಡ್ಡಿ ಸಮೇತ ಕಟ್ಟಿದ್ದರು. ಆದರೆ, ಶುಕ್ರವಾರ ಬ್ಯಾಂಕ್‌ನಿಂದ ಫೋನ್‌ ಕರೆ ಬಂದಾಗ ಅವರು ಗಾಬರಿಗೊಂಡು ಕೃಷಿ ಕೆಲಸ ಬಿಟ್ಟು ಓಡೋಡಿ ಬಂದರು. ಕೊರೊನಾ ಲಾಕ್‌ಡೌನ್‌ ಕಾರಣ ಬಸ್ ಸೌಲಭ್ಯವೂ ಇಲ್ಲದಿರುವುದರಿಂದ ಕುಗ್ರಾಮದಿಂದ ನಡೆದು ಬಂದು ಚಿಲ್ಲರೆ ಸಾಲ ಕಟ್ಟಿದ್ದಾರೆ.

ಕೃಷಿ ಸಾಲ ಮರುಪಾವತಿಗೆ ಬ್ಯಾಂಕ್‌ಗಳು ರೈತರ ಮೇಲೆ ಒತ್ತಡ ತರುವಂತಿಲ್ಲ ಎಂಬ ಸರ್ಕಾರದ ಆದೇಶವಿದ್ದರೂ ಕೇವಲ 3 ರೂಪಾಯಿ 46 ಪೈಸೆ ಸಾಲದ ಹಣ ಕಟ್ಟುವಂತೆ ಸೂಚಿಸಿದ ಬ್ಯಾಂಕಿನ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

‘ಬ್ಯಾಂಕ್‌ನಿಂದ ಸಾಲ ಕಟ್ಟಿ ಎಂದು ಫೋನ್ ಬಂದಾಗ ಗಾಬರಿಯಾಯಿತು. ತೋಟಕ್ಕೆ ಔಷಧ ಸಿಂಪಡಿಸುವುದನ್ನು ಬಿಟ್ಟು ನಡೆದುಕೊಂಡು ಬಂದೆ. ಸಿಬ್ಬಂದಿ ಸಾಲ ಬಾಕಿ ಕಟ್ಟುವಂತೆ ಹೇಳಿದಾಗ ಆಶ್ಚರ್ಯವಾಯಿತು’ ಎಂದು ಲಕ್ಷ್ಮೀನಾರಾಯಣ ಹೇಳಿದರು.

‘ಬ್ಯಾಂಕಿನಲ್ಲಿ ಆಡಿಟ್ ನಡೆಯುತ್ತಿರುವುದರಿಂದ ಲಕ್ಷ್ಮೀನಾರಾಯಣ ಅವರ ಸಾಲ ರಿನಿವಲ್ ಮಾಡಲು ತುರ್ತಾಗಿ ಅವರ ಸಹಿ ಅಗತ್ಯವಿತ್ತು. ನಿಯಮದಂತೆ ಸಾಲದ ಬಾಕಿ ಹಣ ಕಟ್ಟಿಸಿಕೊಂಡು ಸಹಿ ಪಡೆದಿದ್ದೇವೆ’ ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಎಲ್‌.ಪಿಂಗ್ವಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.