ADVERTISEMENT

ರೈತರು, ಸೈನಿಕರನ್ನೂ ಎಂದಿಗೂ ಮರೆಯದಿರಿ:ಡಾ. ಕೆ.ಪಿ. ಪುತ್ತೂರಾಯ

ಆನಂದಪುರ: ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:49 IST
Last Updated 22 ಸೆಪ್ಟೆಂಬರ್ 2021, 4:49 IST
ಆನಂದಪುರ ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಬರಹಗಾರ ಡಾ.ಕೆ.ಪಿ. ಪುತ್ತೂರಾಯ ಉದ್ಘಾಟಿಸಿದರು.
ಆನಂದಪುರ ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಬರಹಗಾರ ಡಾ.ಕೆ.ಪಿ. ಪುತ್ತೂರಾಯ ಉದ್ಘಾಟಿಸಿದರು.   

ಆನಂದಪುರ: ದೇಶ ರಕ್ಷಣೆ ಮಾಡುವ ಸೈನಿಕರು ಹಾಗೂ ಹಸಿವು ನೀಗಿಸುವ ರೈತರನ್ನು ಎಂದಿಗೂ ಮರೆಯಬಾರದು ಎಂದು ಶಿಕ್ಷಣ ತಜ್ಞ ಡಾ. ಕೆ.ಪಿ. ಪುತ್ತೂರಾಯ ಅಭಿಪ್ರಾಯಪಟ್ಟರು.

ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಸಿದವನಿಗೆ ಅನ್ನ ಬೇಕೇ ಹೊರತು ವೇದಾಂತವಲ್ಲ. ಸೈನಿಕರು ಹಾಗೂ ರೈತರನ್ನು ಗೌರವಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಣ, ಜಾತಿ ಹಾಗೂ ಅಧಿಕಾರದ ಬಲದಿಂದ ಪ್ರತಿಭೆಯನ್ನು ಗುರುತಿಸುವಂತಹದ್ದಲ್ಲ. ಅದು ಸ್ವಪ್ರಯತ್ನದಿಂದ ಬರಬೇಕು’ ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳು ಅವರವರ ಮನೆಯ ನಂದಾದೀಪ. ಹೆತ್ತವರ ಕನಸುಗಳು, ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಸೊಗಡು, ಸಮಾಜದ ಆಸ್ತಿ, ದೇಶದ ಭವಿಷ್ಯ. ಹಾಗಾಗಿ ಹೆತ್ತವರು ಅವರ ಕನಸಿನಿಂದ ವಿದ್ಯಾಭ್ಯಾಸ ಮಾಡುತ್ತಿದ್ದಿರಿ. ಆದ್ದರಿಂದ ಅವರ ಜವಾವ್ದಾರಿ ನಿಮ್ಮ ಮೇಲಿದ್ದು, ಅದನ್ನು ಸಾಕಾರಗೊಳಿಸುವ ಕೆಲಸವನ್ನು ನೀವು ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಶಾಲಾ–ಕಾಲೇಜುಗಳಲ್ಲಿ ಪಡೆದ ವಿದ್ಯೆಯಿಂದ ಉತ್ತಮ ಚಾರಿತ್ರ್ಯ, ಕನಸುಗಳನ್ನು ನನಸು ಮಾಡುವ ಕಾರ್ಯತತ್ಪರತೆ, ಕಾರ್ಯಸೂಚಿ, ಆತ್ಮವಿಶ್ವಾಸ, ಬದ್ಧತೆ, ಶಿಸ್ತನ್ನು ಬಾಳಿನುದ್ದಕ್ಕೂ ಆಳವಡಿಸಿಕೊಳ್ಳಬೇಕು. ಉತ್ತಮ ಜೀವನವನ್ನು ರೂಪಿಕೊಳ್ಳಲು ಯಾರ ಸಂಘವನ್ನು ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ’ ಎಂದು ಹೇಳಿದರು.

‘ಯಾವುದೇ ನೌಕರರು ನಿವೃತ್ತಿ ಹೊಂದುವುದು ಅವರ ವೃತ್ತಿಯಿಂದಲೇ ಹೊರತು ಅವರ ಪ್ರವೃತ್ತಿಯಿಂದಲ್ಲ. ಹಾಗಾಗಿ ನಿಮ್ಮಲ್ಲಿರುವ ಜ್ಞಾನ, ಅನುಭ ವವನ್ನು ಸಾಯಲು ಬೀಡಬೇಡಿ. ಅದನ್ನು ಇನ್ನೊಬ್ಬರಿಗೆ ಹಂಚುವ ಮೂಲಕ ಜ್ಞಾನಾಭಿವೃದ್ದಿಯ ಜೊತೆಗೆ ದೇಶದ ಏಳಿಗೆಗೆ ಕೈಜೋಡಿಸೋಣ’ ಎಂದರು.

‘ಗುರುಗಳು ಸಹ ಕೆಲವೊಂದು ಗುಣಗಳನ್ನು ಆಳವಡಿಕೊಳ್ಳಬೇಕು. ಪಾಂಡಿತ್ಯ, ಭೋದನಾ ಸಾಮರ್ಥ್ಯ, ಉತ್ತೇಜನಾ ಶಕ್ತಿ, ಶಿಷ್ಯ ಸಂಪತ್ತು ಮೊದಲಾದ ಗುಣಗಳನ್ನು ಕರಗತ ಮಾಡಿಕೊಂಡಿರಬೇಕು. ಯಾವುದೇ ವಿದ್ಯಾರ್ಥಿ ಅಸಮರ್ಥರಲ್ಲ. ಅವರನ್ನು ಬದಲಾಯಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರತರುವುದು ಗುರುಗಳ ಕರ್ತವ್ಯ’ ಎಂದು ಹೇಳಿದರು.

‘ನೀವು ಯಾವುದೇ ಹುದ್ದೆಯಲ್ಲಿ ಇದ್ದರೂ ಮಾನವೀಯ ಮೌಲ್ಯಗಳನ್ನು ಮರೆಯಬೇಡಿ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕು ಸಾಗಿಸಿ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಪ್ರೀತಿಸುವ ವ್ಯಕ್ತಿಗಳಾಗೋಣ. ಆಸ್ತಿ, ಶ್ರೀಮಂತಿಕೆ ಇಲ್ಲದಿದ್ದರೂ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಿ. ನಿಮ್ಮನ್ನು ಪೋಷಕರು, ಶಿಕ್ಷಕರು, ದೇಶವೇ ಹೆಮ್ಮೆಪಡುವ ಕೆಲಸ ಮಾಡಿ’ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ನಾನಾ ವಿಭಾಗಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರಾದ ಡಾ. ಸತೀಶ್, ಡಾ. ಗಿರೀಶ್, ಡಾ.ಸಿ ಸುನಿಲ್, ಬಾಹ್ಯ ಸಂಸ್ಥೆಗಳಿಂದ ಪಡೆದ ಅನುದಾನದಿಂದ ಸಾಧನೆ ಮಾಡಿದ ಡಾ. ಸತ್ಯನಾರಾಯಣ ಸ್ವಾಮಿ, ಡಾ. ನಟರಾಜ್, ಡಾ. ಚಂದ್ರಶೇಖರ್, ಸಂಶೋದನಾ ಪ್ರಬಂಧ ಪ್ರಕಟಿಸಿದ ಡಾ. ಬಿ.ಎನ್ ಸತೀಶ್, ಡಾ.ಎಸ್ ಶ್ರೀಧರ್, ಡಾ.ಕಲ್ಲೇಶ್ವರ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯ್ಕ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ. ಗುಡಸಿ, ತರಿಕೇರೆ ಶಾಸಕ ಡಿ.ಎಸ್. ಸುರೇಶ್, ಪ್ರಗತಿಪರ ರೈತರಾದ ದೊಡ್ಡಗೌಡ ಸಿ. ಪಾಟೀಲ್. ಕೆ ನಾಗರಾಜ್, ವೀರಭದ್ರಪ್ಪ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.