ADVERTISEMENT

ಜೂನ್ 21ರ ನಂತರ ಶಾಲೆಯತ್ತ ಶಿಕ್ಷಕರು

ಜುಲೈ 1ರಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭ; ಆನ್‌ಲೈನ್‌, ಆಫ್‌ಲೈನ್‌ ತರಗತಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 5:28 IST
Last Updated 17 ಜೂನ್ 2021, 5:28 IST
ಎನ್‌.ಎಂ.ರಮೇಶ್
ಎನ್‌.ಎಂ.ರಮೇಶ್   

ಶಿವಮೊಗ್ಗ: ಜುಲೈ ಒಂದರಿಂದ ಶಾಲೆಗಳಿಗೆ ಅಧಿಕೃತವಾಗಿ ಆರಂಭವಾಗಲಿದ್ದು, ಆನ್‌ಲೈನ್, ಆಫ್‌ಲೈನ್ ತರಗತಿ ಸೇರಿ ಪಠ್ಯ ಚಟುವಟಿಕೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜೂನ್ 21ರ ನಂತರ ಶಿಕ್ಷಕರು ಶಾಲೆಗಳಿಗೆ ಬರಲಿದ್ದು, ಶಾಲೆಗಳ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಮಕ್ಕಳನ್ನು ಶಾಲೆಗೆ ಕರೆ ತರಲು ಪೋಷಕರ ಸಭೆ, ಎಸ್‌ಡಿಎಂಸಿ ಸದಸ್ಯರ ಸಭೆ ಇತರೆ ಶಾಲೆ ಆರಂಭದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ.

ಕೊರೊನಾ ಕಾರಣದಿಂದಾಗಿ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದಿದ್ದರೆ ಪರ್ಯಾಯವಾಗಿ ಆನ್‌ಲೈನ್‌, ದೂರದರ್ಶನದ ಕಲಿಕೆಯನ್ನು ಅನುಸರಿಸಲು ಎಲ್ಲ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ADVERTISEMENT

ಜುಲೈನಲ್ಲಿ ಸೇತುಬಂಧ ಕಾರ್ಯಕ್ರಮ: ಕಳೆದ ವರ್ಷವೂ ಕೊರೊನಾ ಕಾರಣದಿಂದ 1ರಿಂದ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸಲಾಗಿದೆ. ಆದ್ದರಿಂದ ಎಲ್ಲ ಮಕ್ಕಳು ಎಲ್ಲ ವಿಷಯವನ್ನು ಕಲಿತಿಲ್ಲ. ಹೀಗಾಗಿ, ವಿಷಯವಾರು ಕಲಿಕೆ ಕುರಿತು ಒಂದು ತಿಂಗಳ ಕಾಲ ಸೇತುಬಂಧು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ ಒಂದರಿಂದ ಮಕ್ಕಳು ಶಾಲೆಗೆ ಬಂದರೆ ಅವರಿಗೆ ಭೌತಿಕವಾಗಿ ಸೇತುಬಂಧ ಕಾರ್ಯಕ್ರಮ ನಡೆಯಲಿದೆ. ಒಂದು ವೇಳೆ ಮಕ್ಕಳು ಶಾಲೆಗೆ ಬಾರದೆ ಇದ್ದರೆ ಅಂತವರಿಗೆ ಆನ್‌ಲೈನ್‌ನಲ್ಲಿ ಸೇತುಬಂಧ ನಡೆಯಲಿದೆ.

ಆನ್‌ಲೈನ್, ಆಫ್‌ಲೈನ್ ಶಿಕ್ಷಣ: ಮಕ್ಕಳು ಶಾಲೆಗೆ ಬಾರದೆ ಇದ್ದರೆ ಆನ್‌ಲೈನ್‌ನಲ್ಲಿ ಪಠ್ಯ ಚಟುವಟಿಕೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಮಕ್ಕಳನ್ನು ಎರಡು ರೀತಿಯಲ್ಲಿ ವಿಂಗಡಣೆ ಮಾಡಲಾಗುತ್ತಿದೆ. ತಾಂತ್ರಿಕ ಸೌಲಭ್ಯ ಆಧಾರದ ಮೇಲೆ, ಯೋಜನೆ– 1, ಯೋಜನೆ– 2 ಎಂದು ವಿಭಜನೆ ಮಾಡಲಾಗಿದೆ.

ಯೋಜನೆ ಒಂದರಲ್ಲಿ ಮೊಬೈಲ್, ದೂರದರ್ಶನ, ರೇಡಿಯೊ ಈ ಯಾವ ಸೌಲಭ್ಯವನ್ನೂ ಹೊಂದಿರದ ವಿದ್ಯಾರ್ಥಿಗಳು, ಯೋಜನೆ ಎರಡರಲ್ಲಿ ತಾಂತ್ರಿಕ ಸೌಲಭ್ಯವುಳ್ಳ ಮಕ್ಕಳು ಎಂದು ವಿಂಗಡಣೆ ಮಾಡಲಾಗಿದೆ.

‘ಯಾವ ಸೌಲಭ್ಯ ಇಲ್ಲದ ಮಕ್ಕಳು ಕಳೆದ ಬಾರಿ ಶೇ 20ರಷ್ಟು ಇದ್ದರು. ಅವರಲ್ಲಿ ಈ ಬಾರಿ ಯಾರಾದರೂ ಮೊಬೈಲ್, ದೂರದರ್ಶನ, ರೇಡಿಯೊ ಸೌಲಭ್ಯ ಹೊಂದಿದ್ದಾರಾ? ಇಲ್ಲವೋ, ಯಾವ ಸೌಲಭ್ಯ ಹೊಂದಿಲ್ಲದ ವಿದ್ಯಾರ್ಥಿಗಳ ಅಕ್ಕ, ಪಕ್ಕದ ಮನೆಯವರು ಮೊಬೈಲ್ ಸೌಲಭ್ಯ ಹೊಂದಿದ್ದರೆ ಅಂಥವರಿಂದ ಸಹಕಾರ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಕಲಿಕೆ ಅನುಕೂಲ ಮಾಡಿಕೊಡಬೇಕು. ಅಥವಾ ಆ ಮನೆಯಲ್ಲಿ ಯಾರಾದರೂ ಹೆಚ್ಚಿನ ಶಿಕ್ಷಣ ‍ಪಡೆದವರು ಇದ್ದರೆ ಅವರಿಂದ ಕಲಿಕೆ ಮಾಡಿಸಬೇಕು. ಅಥವಾ ಮಕ್ಕಳನ್ನು ಒಂದೆಡೆ ಸೇರಿಸಿ ಶಿಕ್ಷಕರಿಂದ ಪಾಠ ಬೋಧನೆ ಮಾಡಿಸಲಾಗುವುದು. ಹೀಗೆ ಯಾವ ಸೌಲಭ್ಯ ಇಲ್ಲದ ಮಕ್ಕಳನ್ನು ತಲುಪಲು ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ಸೌಲಭ್ಯ ಇರುವ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಕಲಿಕೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಡಿಡಿಪಿಐ ಎನ್‌.ಎಂ.ರಮೇಶ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.