ADVERTISEMENT

ಯೋಜನೆ ಜಾರಿ ಮಾಡಿ ಚರ್ಚೆಗೆ ಬಿಡುವುದು ಯಾವ ಪುರುಷಾರ್ಥಕ್ಕೆ: ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:45 IST
Last Updated 22 ಸೆಪ್ಟೆಂಬರ್ 2021, 4:45 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ಹೊಸನಗರ: ಯಾವುದೇ ಯೋಜನೆಯನ್ನು ಜಾರಿ ಮಾಡುವುದಕ್ಕಿಂತ ಮೊದಲು ಚರ್ಚೆಗೆ ಬಿಡುವುದು ವಾಡಿಕೆ. ಆದರೆ ಅತ್ಯಂತ ಮಹತ್ವದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿ ನಂತರ ಚರ್ಚೆಗೆ ಅವಕಾಶ ನೀಡುತ್ತೇವೆ ಎನ್ನುವ ಸರ್ಕಾರ ನಿರ್ಧಾರ ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದ್ದಾರೆ.

‘ದೇಶದಲ್ಲಿ ಪ್ರೊಫೆಸರ್‌ಗಳಿದ್ದಾರೆ. ಶಿಕ್ಷಣ ತಜ್ಞರಿದ್ದಾರೆ, ದೇಶದಲ್ಲಿ 7 ಸಾವಿರಕ್ಕೂ ಹೆಚ್ಚು ಶಾಸಕರಿದ್ದಾರೆ. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ದೇಶದಲ್ಲಿ 22 ಭಾಷೆಗಳಿದ್ದು, ಅವೆಲ್ಲದರ ಒಟ್ಟಾರೆ ಸಂಗಮದಿಂದ ದೇಶ ನಿಂತಿದೆ. ನ್ಯಾಯಾಲಯ ಕೂಡ ಮಾತೃಭಾಷೆಗೆ ಆದ್ಯತೆ ನೀಡಿದೆ. ಆದರೆ ಒಂದು ಧರ್ಮ, ಒಂದು ಭಾಷೆ ಎಂಬ ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್‌ ಹಿಡನ್ ಅಜೆಂಡಾ ಇಲ್ಲಿ ಕಂಡು ಬರುತ್ತಿದೆ ಎಂದು ಆರೋಪಿಸಿದರು.

ADVERTISEMENT

‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಗೊಳಿಸುವುದಕ್ಕಿಂತ ಮುಂಚಿತ ವಾಗಿ ಸಂಸತ್ತು, ರಾಜ್ಯಸಭೆ, ವಿಧಾನ ಸಭೆಯಲ್ಲಿ ಚರ್ಚೆಗಿಟ್ಟು ಅನುಮೋದನೆ ಪಡೆಯಬೇಕಿತ್ತು. ಆದರೆ ಈಗ ಚರ್ಚೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಕೇಂದ್ರ ಅದ್ಯಾವುದನ್ನೂ ಮಾಡದೇ ಆತುರಾತುರವಾಗಿ ನೀತಿಯನ್ನು ತಂದಿರುವ ಹಿಂದೆ ಷಡ್ಯಂತ್ರ ಕೆಲಸ ಮಾಡಿದಂತಿದೆ’ ಎಂದು ಟೀಕಿಸಿದರು.

ಮೀಸಲಾತಿ ತೆಗೆಯುವ ಹುನ್ನಾರ: ದೂರಸಂಪರ್ಕ, ಬ್ಯಾಂಕಿಂಗ್, ಏರ್‌ಪೋರ್ಟ್‌, ರೈಲ್ವೆ, ಸೇರಿ ಅತ್ಯುನ್ನತ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಸರ್ಕಾರ ಸಾಮ್ಯತೆಯಲ್ಲಿದ್ದರೆ ಸಂವಿಧಾನದ ಪ್ರಕಾರ ಮೀಸಲಾತಿ ನೀಡಬೇಕು. ಆದರೆ ಬಿಜೆಪಿಯವರು ಬುದ್ಧಿವಂತರಾಗಿದ್ದು, ಸಂಸ್ಥೆಗಳನ್ನೇ ಖಾಸಗಿಗೆ ನೀಡಿದರೆ ಮೀಸಲಾತಿ ಎಲ್ಲಿಂದ ಬಂತು. ಸರ್ಕಾರದಿಂದ ಮೀಸಲಾತಿ ತೆಗೆದರೆ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಈ ರೀತಿಯ ವಾಮಮಾರ್ಗಕ್ಕೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಮುಖರಾದ ಬಂಡಿ ರಾಮಚಂದ್ರ, ಬಿ.ಜಿ.ಚಂದ್ರಮೌಳಿ, ಕರುಣಾಕರಶೆಟ್ಟಿ, ಸದಾಶಿವ ಶ್ರೇಷ್ಠಿ, ಅಶ್ವಿನಿ, ಪ್ರಭಾಕರರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.