ADVERTISEMENT

ತಂಬಾಕು ಮುಕ್ತ ಗ್ರಾಮಕ್ಕೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 1:59 IST
Last Updated 17 ಸೆಪ್ಟೆಂಬರ್ 2021, 1:59 IST
ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿಯಲ್ಲಿ ‘ತಂಬಾಕು ಮುಕ್ತ ಮಾದರಿ ಗ್ರಾಮ’ದ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು
ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿಯಲ್ಲಿ ‘ತಂಬಾಕು ಮುಕ್ತ ಮಾದರಿ ಗ್ರಾಮ’ದ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು   

ತಿಪಟೂರು: ಸಾರ್ಥವಳ್ಳಿ ಗ್ರಾಮವನ್ನು ತಂಬಾಕು ಮುಕ್ತ ಮಾದರಿ ಗ್ರಾಮ ಮಾಡುವಲ್ಲಿ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಂಪೂರ್ಣ ಸಹಕಾರ ಮತ್ತು ಸಹಯೋಗ ಅಗತ್ಯ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೂಪ ಹೇಳಿದರು.

ತಾಲ್ಲೂಕಿನ ಸಾರ್ಥವಳ್ಳಿ ಗ್ರಾಮದಲ್ಲಿ ಬುಧವಾರ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಮತ್ತು ಬೆಂಗಳೂರಿನ ಐಪಿಎಚ್ ಸಂಸ್ಥೆಯಿಂದ ‘ತಂಬಾಕು ಮುಕ್ತ ಮಾದರಿ ಗ್ರಾಮ’ದ ಕುರಿತು ಆಯೋಜಿಸಲಾಗಿದ್ದ ಬೀದಿ ನಾಟಕವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ತಂಬಾಕು ಸಾಮಾಜಿಕ ಪಿಡುಗಾಗಿದೆ. ಇದರಿಂದ ಮಕ್ಕಳು ಮತ್ತು ಯುವಕರನ್ನು ರಕ್ಷಿಸಬೇಕಿದೆ. ಧೂಮಪಾನ ಮಾಡುವವರಿಗಿಂತ ಅದರಿಂದ ಬರುವ ಹೊಗೆ ಕುಡಿಯುವವರಿಗೂ ತೊಂದರೆ ಆಗಲಿದೆ. ಸರ್ಕಾರದಿಂದ ಈಗಾಗಲೇ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಗ್ರಾಮಗಳಲ್ಲಿನ ಹಿರಿಯರು ತಮ್ಮ ಮಕ್ಕಳ ಮುಂದೆಯೇ ಧೂಮಪಾನ ಮಾಡುವುದನ್ನು ಕಡಿಮೆ ಮಾಡಬೇಕು ಎಂದರು.

ADVERTISEMENT

ಐಪಿಎಚ್ ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಅಚ್ಯುತ ಎನ್.ಜಿ. ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಗ್ರಾಮದ ನಿರ್ಮಾಣ ಅಗತ್ಯ. ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳು ಯೋಜನೆಯಡಿ ಹಲವು ಗ್ರಾಮಗಳನ್ನು ತಂಬಾಕು ಮುಕ್ತ ಮಾದರಿ ಗ್ರಾಮವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಇದರ ಮೊದಲ ಹಂತವಾಗಿ ಜನರು ಹೆಚ್ಚಾಗಿ ಸೇರುವ ಹಾಲಿನ ಡೇರಿ, ಜಗಲಿಕಟ್ಟೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮಾಡಲಾಗಿದೆ ಎಂದರು.

ಬೀದಿ ನಾಟಕದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.