ADVERTISEMENT

ಚಿಕ್ಕಪೇಟೆ ವೃತ್ತಕ್ಕೆ ‘ವಿಶ್ವಕರ್ಮ’ ಹೆಸರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 9:05 IST
Last Updated 20 ಸೆಪ್ಟೆಂಬರ್ 2021, 9:05 IST
ತುಮಕೂರಿನಲ್ಲಿ ಗಾಯತ್ರಿ ಕಾಳಿಕಾಂಬ ವಿಶ್ವಕರ್ಮ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿದರು. ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ವಿಶ್ವಕರ್ಮ ಯಜ್ಞಮಹೋತ್ಸವ ಸಮಿತಿ ಅಧ್ಯಕ್ಷ ಎಚ್‍ಪಿ.ನಾಗರಾಜಚಾರ್, ದೇವಾಲಯ ಸಮಿತಿ ಕಾರ್ಯದರ್ಶಿ ವೆಂಕಟರಮಣಚಾರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಚಾರ್, ಉಪಾಧ್ಯಕ್ಷ ಗೋವರ್ಧನಚಾರ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಗಜೇಂದ್ರಚಾರ್, ಕಾಳಿಕಾಂಬ ಬಸವಣ್ಣ ದೇವಾಲಯದ ಅಧ್ಯಕ್ಷರಾದ ಲಕ್ಷ್ಮಣಚಾರ್ ಪಾಲ್ಗೊಂಡಿದ್ದರು

ತುಮಕೂರು: ಚಿನ್ನ, ಬೆಳ್ಳಿ ಕೆಲಸಗಾರರು ಹೆಚ್ಚಾಗಿ ನೆಲೆಸಿ ಕುಲವೃತ್ತಿ ಮಾಡುತ್ತಿರುವ ಚಿಕ್ಕಪೇಟೆ ವೃತ್ತಕ್ಕೆ ವಿಶ್ವಕರ್ಮ ವೃತ್ತವೆಂದು ನಾಮಕರಣ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಭರವಸೆ ನೀಡಿದರು.

ವಿಶ್ವಕರ್ಮ ಯಜ್ಞ ಮಹೋತ್ಸವ ಸಮಿತಿಯಿಂದ ಪಾಂಡುರಂಗ ನಗರದ ಗಾಯತ್ರಿ ಕಾಳಿಕಾಂಬ ವಿಶ್ವಕರ್ಮ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯದಲ್ಲಿ ಈಚೆಗೆ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಚ ವೃತ್ತಿಗಳನ್ನು ಮಾಡುವ ವಿಶ್ವಕರ್ಮರು ನೆಲೆಸದ ಊರನ್ನುಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಭಗವಾನ್ ವಿಶ್ವಕರ್ಮ ಸೃಷ್ಟಿಕರ್ತರೆನಿಸಿದ್ದು, ಅವರ ಅನುಯಾಯಿಗಳಾಗಿ ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಿರುವ ಸಮುದಾಯವನ್ನು ಗುರುತಿಸಿ ಗೌರವಿಸಬೇಕಿದೆ. ಸಮುದಾಯದ ಬೇಡಿಕೆ, ಸ್ಥಳೀಯ ಪಾಲಿಕೆ ಸದಸ್ಯರ ಪ್ರಸ್ತಾವಕ್ಕೆ ಕಳೆದ ಸಾಮಾನ್ಯ ಸಭೆಯಲ್ಲೇ ವಿಶ್ವಕರ್ಮ ವೃತ್ತವೆಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಸರ್ಕಾರ ಅನುಮತಿ ನೀಡಿದ ನಂತರ ಹೆಸರಿಡಲಾಗುವುದು ಎಂದರು.

ADVERTISEMENT

ವಿಶ್ವಕರ್ಮ ಯಜ್ಞಮಹೋತ್ಸವ ಸಮಿತಿ ಅಧ್ಯಕ್ಷ ಎಚ್‍ಪಿ.ನಾಗರಾಜಚಾರ್, ‘ಮಾಂಗಲ್ಯದಿಂದ ಹಿಡಿದು ಯಾವುದೇ ಚಿನ್ನ, ಬೆಳ್ಳಿ ಆಭರಣಗಳನ್ನು ತಯಾರಿಸಲು ಮೌಲ್ಯಯುತ ಚಿನ್ನವನ್ನು ನಮ್ಮ ಸಮುದಾಯದ ಕೆಲಸಗಾರರಿಗೆ ನಂಬಿಕೆ ಮೇಲೆ ನೀಡುತ್ತಾ ಬರಲಾಗಿದೆ. ಸಮುದಾಯ ಪುರಾತನ ಕಾಲದಿಂದಲೂ ಪ್ರಾಮಾಣಿಕತೆ, ನಂಬಿಕೆಯಿಂದ ವೃತ್ತಿಯಲ್ಲಿ ತೊಡಗಿಸಿಕೊಂಡು ಬಂದಿದೆ’ ಎಂದು ಹೇಳಿದರು.

ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಮಹಾಸಂಸ್ಥಾನದ ನೀಲಕಂಠಾಚಾರ್ಯ ಸ್ವಾಮೀಜಿ, ‘ವಿಶ್ವಕರ್ಮ ಸಮುದಾಯ ಜಾತಿಯಲ್ಲ, ಸಂಸ್ಕೃತಿ’ ಎಂದರು.

ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್‍ಬಾಬು, ನವೀನಾ ಅರುಣಾ, ದೇವಾಲಯ ಸಮಿತಿ ಕಾರ್ಯದರ್ಶಿ ವೆಂಕಟರಮಣಚಾರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಚಾರ್, ಉಪಾಧ್ಯಕ್ಷ ಗೋವರ್ಧನಚಾರ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಗಜೇಂದ್ರಚಾರ್, ಕಾಳಿಕಾಂಬ ಬಸವಣ್ಣ ದೇವಾಲಯದ ಅಧ್ಯಕ್ಷರಾದ ಲಕ್ಷ್ಮಣಚಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.