ADVERTISEMENT

ನರೇಗಾ ದುರುಪಯೋಗ ಗ್ರಾಮಸ್ಥರಿಂದ ದೂರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:31 IST
Last Updated 21 ಸೆಪ್ಟೆಂಬರ್ 2021, 5:31 IST
ಕುಣಿಗಲ್ ತಾಲ್ಲೂಕಿನ ಡಿ.ಹೊಸಹಳ್ಳಿ ಗ್ರಾಮಪಂಚಾಯಿತಿಯ ಹುಣಸೆಕಟ್ಟೆ ನರೇಗಾ ಕಾಮಗಾರಿಗೆ ಜೆಸಿಬಿ ಬಳಕೆ ಮಾಡಿದ್ದಾರೆ.
ಕುಣಿಗಲ್ ತಾಲ್ಲೂಕಿನ ಡಿ.ಹೊಸಹಳ್ಳಿ ಗ್ರಾಮಪಂಚಾಯಿತಿಯ ಹುಣಸೆಕಟ್ಟೆ ನರೇಗಾ ಕಾಮಗಾರಿಗೆ ಜೆಸಿಬಿ ಬಳಕೆ ಮಾಡಿದ್ದಾರೆ.   

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಹಣ ದುರುಪಯೋಗವಾಗಿದ್ದು, ಗ್ರಾಮಸ್ಥರ ತಂಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಿದ್ದಾರೆ.

ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2020-21 ಸಾಲಿನ ನರೇಗಾ ಯೋಜನೆಯ ಕಾಮಗಾರಿಗಳನ್ನು ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಸಮೂಹ ಕಾಮಗಾರಿಗಳನ್ನು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು, ಉದ್ಯೋಗ ಚೀಟಿದಾರರ ಕೈಯಲ್ಲಿ ಮಾಡಿಸದೆ ಜೆಸಿಬಿ ಯಂತ್ರ ಬಳಸಿ ಮಾಡಿಸಿದ್ದಾರೆ. ಈ ಬಗ್ಗೆ ದಾಖಲೆಗಳ ಸಹಿತ ದೂರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಪರಿಗಣಿಸದೆ, ಕಾಮಗಾರಿ ಪ್ರಾರಂಭಿಸದಿದ್ದರೂ ಕೆಲ ಕಾಮಗಾರಿಗಳಿಗೆ ಒತ್ತಡಕ್ಕೆ ಮಣಿದು ಹಣ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಕೆರೆ ಕಟ್ಟೆಗಳ ಅಭಿವೃದ್ಧಿಗೆ ಮನವಿ ಮಾಡಿದ್ದರೂ, ಅಧ್ಯಕ್ಷರು ಮತ್ತು ಸದಸ್ಯರು ಮನಸಿಗೆ ಬಂದಂತೆ ಕ್ರಿಯಾ ಯೋಜನೆ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಕಳೆದ ತಿಂಗಳು ಹಣ ಪಾವತಿ ಮಾಡಿದ್ದಾರೆ. ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ ನಿರ್ಮಾಣ ಮಾಡಿದ ಫಲಾನುಭವಿಗಳಿಗೆ ಹಣ ಪಾವತಿ ಮಾಡಿಲ್ಲ. ತೆಂಗಿನ ಮರದಲ್ಲಿ ಫಸಲು ಬಿಡುತ್ತಿದ್ದರೂ, ತೆಂಗಿನ ಸಸಿಗಳಿಗೆ ಹಣ ಸಂದಾಯ ಮಾಡುವ ಮೂಲಕ ಹಣ ದುರುಪಯೋಗ ಮಾಡಿದ್ದಾರೆ
ಎಂದು ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ADVERTISEMENT

‘ಹಣ ದುರುಪಯೋಗದ ಬಗ್ಗೆ ಪಿಡಿಓ, ತಾಂತ್ರಿಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾರ್ಚ್ ತಿಂಗಳಲ್ಲೇ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕಾರಣ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿ, ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಗ್ರಾಮಸ್ಥರಾದ ಆನಂದ್, ಕೃಷ್ಣ. ಜಿ.ಟಿ., ಚಿಕ್ಕರಾಜು, ಚಂದ್ರಯ್ಯ, ಶಿವಲಿಂಗಯ್ಯ, ಎಂ.ಬಿ.ಬೆಟ್ಟಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.