ADVERTISEMENT

ತುಮಕೂರು: ಧಾನ್ಯ, ತರಕಾರಿ ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:34 IST
Last Updated 19 ಸೆಪ್ಟೆಂಬರ್ 2021, 4:34 IST
ಧಾನ್ಯ
ಧಾನ್ಯ   

ತುಮಕೂರು: ತರಕಾರಿ ಬೆಲೆಯಲ್ಲಿ ಅಲ್ಪ ಕಡಿಮೆಯಾಗಿದ್ದು, ಹಿಂದಿನ ವಾರಕ್ಕೆ ಹೋಲಿಸಿದರೆ ಧಾರಣೆ ಇಳಿಕೆಯತ್ತ ಸಾಗುತ್ತಿದೆ ಎನಿಸುತ್ತದೆ.

ದುಬಾರಿಯಾಗಿದ್ದ ಬೀನ್ಸ್, ಗೆಡ್ಡೆಕೋಸು, ಹೂ ಕೋಸು ತುಸು ತಗ್ಗಿದ್ದರೆ, ಕಳೆದ ವಾರಕ್ಕೆ ಹೋಲಿಸಿದರೆ ಸೌತೆಕಾಯಿ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಈರುಳ್ಳಿ, ಟೊಮೆಟೊ ಧಾರಣೆ ಇಳಿಕೆಯಾಗಿದ್ದರೆ, ಹಾಗಲಕಾಯಿ, ಬೆಂಡೆಕಾಯಿ, ಹಸಿಮೆಣಸಿನ ಕಾಯಿ ಬೆಲೆ ಅಲ್ಪ ಪ್ರಮಾಣದಲ್ಲಿ ಚೇತರಿಸಿದೆ.

ಬೀನ್ಸ್ ಕೆ.ಜಿ ₹35–40ಕ್ಕೆ, ಗೆಡ್ಡೆಕೋಸು ಕೆ.ಜಿ ₹30–35, ಹೂ ಕೋಸು ಒಂದಕ್ಕೆ ₹30ಕ್ಕೆ ಮಾರಾಟವಾಗಿದ್ದು, ಉಳಿದಂತೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸೊಪ್ಪಿನ ಬೆಲೆಗಳು ಇಳಿಕೆ ಕಂಡಿದ್ದು, ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹20, ಪಾಲಕ್ ಸೊಪ್ಪಿನ ಬೆಲೆ ಕೆ.ಜಿ ₹30ಕ್ಕೆ ಕುಸಿದಿದೆ.

ADVERTISEMENT

ಗೌರಿ, ಗಣೇಶ ಹಬ್ಬ ಮುಗಿದಿದ್ದು, ಮಹಾಲಯ ಅಮಾವಾಸ್ಯೆ ಬರುವವರೆಗೂ ಯಾವುದೇ ಹಬ್ಬಗಳು ಕಾಣುತ್ತಿಲ್ಲ. ಹಾಗಾಗಿ ಧಾನ್ಯ, ತರಕಾರಿ ಬೆಲೆಗಳು ಇಳಿಕೆಯತ್ತ ಸಾಗಿವೆ. ಧಾನ್ಯಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಬಾದಾಮಿ ಕೆ.ಜಿ ₹900, ಗೋಡಂಬಿ ಕೆ.ಜಿ ₹700 ಬೆಲೆ ಇದ್ದರೆ, ಸಾಸಿವೆ ಕೆ.ಜಿ ₹100ಕ್ಕೆ ಜಿಗಿದಿದೆ. ಜೀರಿಗೆ ಕೆ.ಜಿ ₹170–200ಕ್ಕೆ ಹೆಚ್ಚಳವಾಗಿದೆ. ಗಸಗಸೆ (ಗುಣಮಟ್ಟದ್ದು) ಕೆ.ಜಿ ₹1,800ಕ್ಕೆ (ಕಳಪೆ ಮಾಲು ಕೆ.ಜಿ ₹1,200ಕ್ಕೆ ಸಿಗುತ್ತಿದೆ) ಮಂಡಿಪೇಟೆಯಲ್ಲಿ ಮಾರಾಟವಾಗುತ್ತಿದೆ. ಅಡುಗೆ ಎಣ್ಣೆ ಬೆಲೆ ಇಳಿಯುವಂತೆ ಕಾಣುತ್ತಿಲ್ಲ. ಸನ್‌ಫ್ಲವರ್ ಕೆ.ಜಿ ₹148– ₹152, ಪಾಮಾಯಿಲ್ ₹125– ₹130ಕ್ಕೆ ಮಾರಾಟವಾಗಿದೆ.

ಹಣ್ಣು ದುಬಾರಿ: ಗೌರಿ, ಗಣೇಶ ಹಬ್ಬದ ನಂತರ ಹಣ್ಣುಗಳು ದುಬಾರಿಯಾಗಿದ್ದು, ಸೇಬು, ದಾಳಿಂಬೆ, ಕಿತ್ತಳೆ, ಏಲಕ್ಕಿ ಬಾಳೆ, ಪೈನಾಪಲ್, ಕಲ್ಲಂಗಡಿ ಹಣ್ಣಿನ ಬೆಲೆ ಸ್ವಲ್ಪ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.

ಕೋಳಿ ದುಬಾರಿ: ಶ್ರಾವಣ ಮಾಸದಲ್ಲಿ ದುಬಾರಿಯಾಗಿದ್ದ ಕೋಳಿ ಬೆಲೆ, ನಂತರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಬ್ರಾಯ್ಲರ್ ಕೋಳಿ ಕೆ.ಜಿ ₹175ಕ್ಕೆ, ರೆಡಿ ಚಿಕನ್ ₹250ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹140ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೊಟ್ಟೆ ಕೋಳಿ ಹಿಂದಿನ ವಾರಕ್ಕಿಂತ ಮತ್ತಷ್ಟು ದುಬಾರಿಯಾಗಿದೆ.

ಮೀನು: ಬಂಗುಡೆ ಕೆ.ಜಿ 260, ಕಪ್ಪು ಮಾಂಜಿ ₹530, ಅಂಜಲ್ ₹560, ಮಯ್ಯಾ ಕೆ.ಜಿ ₹480, ಸೀಗಡಿ ಕೆ.ಜಿ 650ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.