ADVERTISEMENT

ಮಳೆ ಇಲ್ಲದೆ ದಿಕ್ಕೆಟ್ಟ ರೈತರು

ನೆಲ ಕಚ್ಚುತ್ತಿರುವ ಮೆಕ್ಕೆಜೋಳ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:11 IST
Last Updated 14 ಸೆಪ್ಟೆಂಬರ್ 2021, 7:11 IST
ಮಳೆಯಿಲ್ಲದೆ ಒಣಗುತ್ತಿರುವ ಮೆಕ್ಕೆಜೋಳದ ಬೆಳೆ
ಮಳೆಯಿಲ್ಲದೆ ಒಣಗುತ್ತಿರುವ ಮೆಕ್ಕೆಜೋಳದ ಬೆಳೆ   

ಕೊಡಿಗೇನಹಳ್ಳಿ: ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರಿಂದ ಬಿತ್ತನೆ ಮಾಡಿದ್ದ ಎಲ್ಲ ಬೆಳೆಗಳು ಹುಲುಸಾಗಿ ಬೆಳೆದು ಕಂಗೊಳಿಸುತ್ತಿದ್ದವು. ಇನ್ನೇನು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳೆದ 15 ದಿನಗಳಿಂದ ಮಳೆ ಬೀಳದಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕೊಡಿಗೇನಹಳ್ಳಿ, ಪುರವರ ಹಾಗೂ ಐಡಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಈ ಬಾರಿ ಮೆಕ್ಕೆಜೋಳ, ಶೇಂಗಾ, ರಾಗಿ, ತೊಗರಿ, ಅವರೆ, ಅಲಸಂದಿ ಜೊತೆಗೆ ಅಲ್ಲಲ್ಲಿ ಸಿರಿಧಾನ್ಯ ಬಿತ್ತಿದ್ದರು. ಚಿಗುರೊಡೆದ ಪೈರಿಗೆ ಕೂಲಿಯಾಳು ಸಿಗದೆ ಮತ್ತು ಗಗನಕ್ಕೇರಿದ್ದ ಕೂಲಿ ವೆಚ್ಚದ ನಡುವೆಯೂ ಕಳೆ ತೆಗೆಸಿದ್ದರು. ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕೊಂಡೊಯ್ದಿದ್ದ ಗೊಬ್ಬರವನ್ನು ಬೆಳೆಗಳಿಗೆ ಎರಚಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ರೈತನ ಶ್ರಮಕ್ಕೆ ತಕ್ಕಂತೆ ಬೆಳೆ ಕೂಡ ಹುಲುಸಾಗಿ ಬಂದಿತ್ತು. ಮೆಕ್ಕೆಜೋಳ ತೆನೆ ಬಿಡುತ್ತಿದ್ದರೆ, ಶೇಂಗಾ ಬೆಳೆ ಹೂಳು ಬಿಟ್ಟು ಸೊಂಡೆಯಾಗಿದೆ. ರಾಗಿ ತೆನೆ ಕುಡಿಯೊಡೆದಿರುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿದೆ.

ADVERTISEMENT

ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಇಲ್ಲಿ ಯಾವುದೇ ನೀರಾವರಿ ಸೌಕರ್ಯವಿಲ್ಲ. ಹಾಗಾಗಿ, ಮುಂಗಾರಿನಲ್ಲಿ ಬೀಳುವ ಮಳೆ ಮೇಲೆಯೇ ರೈತರ ಭವಿಷ್ಯ ಅಡಗಿದೆ. ಇಂತಹ ಸಂದರ್ಭದಲ್ಲಿ ಒಂದು ವರ್ಷ ಮಳೆ ಕೊರತೆ ಎದುರಾಯಿತು ಎಂದರೆ ಮುಂದೆ ಬೆಳೆಯ ಜೊತೆಗೆ ಕುಡಿಯುವ ನೀರಿನ ಕೊರತೆ ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ.

‘ಶೀಘ್ರ ಮಳೆ ಬಂದರೆ ಎಲ್ಲರಿಗೂ ತುಂಬಾ ಅನುಕೂಲವಾಗುತ್ತದೆ. ಇಲ್ಲವಾದರೆ ಮುಂದೆ ತುಂಬಾ ಕಠಿಣ ಪರಿಸ್ಥಿತಿಯ ದಿನಗಳನ್ನು ಎದುರಿಸ ಬೇಕಾಗುತ್ತದೆ’ ಎನ್ನು ತ್ತಾರೆ ಕಸಿನಾಯಕನಹಳ್ಳಿ ರೈತ
ಸುನೀಲ್.

‘ಸಕಾಲಕ್ಕೆ ಉತ್ತಮ ಮಳೆ ಬಿದ್ದಿದ್ದರಿಂದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಇಲಾಖೆಯಿಂದ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ ನೀಡಲಾಗಿತ್ತು. ಕೆಲವೆಡೆ ಮಳೆ ಬೀಳದಿರುವ ಕಾರಣ ಬೆಳೆಗಳು ಒಣಗುತ್ತಿವೆ. ಶೀಘ್ರದಲ್ಲೇ ಮಳೆ ಬರುವ ನಿರೀಕ್ಷೆಯಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.