ADVERTISEMENT

ಬಾರದ ಮಳೆ; ಬಾಡಿದ ಬೆಳೆ

ಒಣಗುತ್ತಿದೆ ಶೇಂಗಾ, ರಾಗಿ; ಇಳುವರಿ ಕುಸಿತದ ಆತಂಕ

ಕೆ.ಜೆ.ಮರಿಯಪ್ಪ
Published 14 ಸೆಪ್ಟೆಂಬರ್ 2021, 7:02 IST
Last Updated 14 ಸೆಪ್ಟೆಂಬರ್ 2021, 7:02 IST
ಪಾವಗಡ ತಾಲ್ಲೂಕು ಅರಸೀಕೆರೆ ಬಳಿ ಮಳೆ ಇಲ್ಲದೆ ಬಾಡುತ್ತಿರುವ ಶೇಂಗಾ
ಪಾವಗಡ ತಾಲ್ಲೂಕು ಅರಸೀಕೆರೆ ಬಳಿ ಮಳೆ ಇಲ್ಲದೆ ಬಾಡುತ್ತಿರುವ ಶೇಂಗಾ   

ತುಮಕೂರು: ಸೆಪ್ಟೆಂಬರ್ ತಿಂಗಳ ಆರಂಭದ ದಿನಗಳಲ್ಲಿ ಬಿರುಸು ಪಡೆದಿದ್ದ ಮಳೆ ಮತ್ತೆ ಮರೆಯಾಗಿದ್ದು, ಬಿತ್ತನೆ ಮಾಡಿದ್ದ ಬೆಳೆಗಳು ಒಣಗಲಾರಂಭಿಸಿವೆ. ಪ್ರತಿ ಕ್ಷಣವೂ ಮಳೆಗಾಗಿ ರೈತರು ಮುಗಿಲು ನೋಡುವಂತಾಗಿದೆ.

ಶೇಂಗಾ ಕಾಯಿ ಕಟ್ಟುವ ಹಂತದಲ್ಲಿದ್ದು, ಕಳೆದ ಮೂರು ವಾರದಿಂದ ಮಳೆಯಾಗದೆ ಬಾಡಿದ್ದು, ಕಾಯಿ ಗಟ್ಟಿಯಾಗದೆ ಜೊಳ್ಳು ತುಂಬಿಕೊಂಡಿದೆ. ಈಗ ಇರುವ ಬೆಳೆಯೂ ಒಣಗುತ್ತಿದ್ದು, ಈ ವಾರದಲ್ಲಿ ಮಳೆಯಾಗದಿದ್ದರೆ ಕಡಲೆಕಾಯಿ ರೈತರ ಕೈಸೇರುವುದು ಅನುಮಾನ. ಬಿತ್ತನೆ ಸಮಯದಲ್ಲಿ ಸಕಾಲಕ್ಕೆ ಮಳೆಯಾಗದೆ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಬೆಳೆಯುತ್ತಿದ್ದ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಬಿತ್ತನೆಯೂ ಆಗಿಲ್ಲ.

ಮಳೆ ಇದೇ ರೀತಿ ಕೈಕೊಟ್ಟರೆ ಶೇಂಗಾ ಇಳುವರಿ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಶೇಂಗಾ ಸೇರಿದಂತೆ ಎಣ್ಣೆ ಕಾಳುಗಳ ಉತ್ಪಾದನೆ ಗಣನೀಯವಾಗಿ ತಗ್ಗಿದ್ದು, ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ. ಈಗಾಗಲೇ ಎಣ್ಣೆ ಧಾರಣೆ ಗಗನ ಮುಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಗಿಡದಿಂದ ಕಾಯಿ ಬೇರ್ಪಡಿಸಿದ ನಂತರ ಬಳ್ಳಿಯನ್ನು ಜಾನುವಾರುಗಳಿಗೆ ಮೇವಾಗಿ ಬಳಕೆ ಮಾಡಲಾಗುತ್ತದೆ. ಗಿಡ ಹುಲುಸಾಗಿ ಬೆಳೆಯದಿದ್ದರೆ ಜಾನುವಾರುಗಳು, ಕುರಿ, ಮೇಕೆಗಳಿಗೆ ಬೇಸಿಗೆ ಸಮಯದಲ್ಲಿ ಮೇವಿನ ಕೊರತೆಯೂ ಎದುರಾಗಲಿದೆ.

ADVERTISEMENT

ಶೇಂಗಾ ನಾಡು ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ತಾಲ್ಲೂಕಿನಲ್ಲಿ ಎಂಟತ್ತು ದಿನಗಳಿಂದ ಒಂದನಿಯೂ ಮಳೆಯಾಗಿಲ್ಲ. ಆಗಸ್ಟ್ ಕೊನೆ ವಾರದಲ್ಲೂ ಕೈಕೊಟ್ಟಿತ್ತು. ಪಾವಗಡ ತಾಲ್ಲೂಕಿನಲ್ಲಿ ಸೆ. 8ರಂದು ಮಳೆಯಾಗಿದ್ದೇ ಕೊನೆ. ಈ ತಿಂಗಳಲ್ಲಿ ನಾಲ್ಕು ದಿನಗಳಷ್ಟೇ ಅಲ್ಪಸ್ವಲ್ಪ ಭೂಮಿಯನ್ನು ತೇವ ಮಾಡಿತ್ತು. ಮಧುಗಿರಿ ತಾಲ್ಲೂಕಿನಲ್ಲಿ ಈ ತಿಂಗಳಲ್ಲಿ ನಾಲ್ಕು ದಿನಗಳಷ್ಟೇ ತುಂತುರು ಮಳೆಯಾಗಿದ್ದು, ಸೆ. 5ರ ನಂತರ ಮಳೆ ಕೃಪೆ ತೋರಿಲ್ಲ.

ಶಿರಾ, ಕೊರಟಗೆರೆ ತಾಲ್ಲೂಕಿನಲ್ಲಿ ಸೆ. 6ರ ನಂತರ ಒಣಹವೆ ಮುಂದುವರಿದಿದೆ. ಈ ತಿಂಗಳಲ್ಲಿ ಎರಡು ದಿನವಷ್ಟೇ ಒಂದು ಮಿ.ಮೀ.ನಷ್ಟು ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ನೆಲ ಗಟ್ಟಿಯಾಗಿದ್ದು, ಕಾಯಿಕಟ್ಟಲು ಭೂಮಿಯಲ್ಲಿ ತನುವು ಇಲ್ಲವಾಗಿದ್ದು, ಒಣಗಲಾರಂಭಿಸಿದೆ.

‘ಕಳೆದ ವರ್ಷ ಶೇಂಗಾ ಕೀಳುವ ಸಮಯದಲ್ಲಿ ಮಳೆ ಬಂದು ಬೆಳೆ ಹಾಳಾಯಿತು. ಈ ಸಲ ಕಾಯಿ ಕಟ್ಟಲು ಮಳೆ ಇಲ್ಲವಾಗಿದೆ. ಇದೇ ರೀತಿಯಾದರೆ ಕೃಷಿಕರು ಬದುಕುವುದು ಕಷ್ಟಕರ’ ಎಂದು ಪಾವಗಡ ತಾಲ್ಲೂಕು ನಾಗಲಮಡಿಕೆ ರೈತ ರಾಮಾಂಜನಪ್ಪ ಹೇಳುತ್ತಾರೆ.

ರಾಗಿಗೂ ಸಮಸ್ಯೆ: ಕುಣಿಗಲ್, ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ತೆಂಗು, ಅಡಿಕೆ ಬಿಟ್ಟರೆ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಮಳೆ ಕಣ್ಣಾಮುಚ್ಚಾಲೆಯಿಂದಾಗಿ ಆಗಸ್ಟ್ ಮಧ್ಯ ಭಾಗದವರೆಗೂ ರಾಗಿ ಬಿತ್ತನೆ ಮಾಡಿದ್ದು, ಈಗ ಬಾಡುತ್ತಿದೆ. ಕುಣಿಗಲ್ ತಾಲ್ಲೂಕಿನಲ್ಲಿ ಈ ತಿಂಗಳಲ್ಲಿ ಮೂರು ದಿನವಷ್ಟೇ ಮಳೆಯಾಗಿದ್ದು, ಸೆ. 6ರ ನಂತರ ಮಳೆ ಮರೆಯಾಗಿದೆ. ರಾಗಿ ಬಿತ್ತನೆಯಾಗಿರುವ ಇತರ ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಸೆಪ್ಟೆಂಬರ್‌ನಲ್ಲಿ ಎರಡು, ಮೂರು ದಿನಗಳು ಅಲ್ಪಸ್ವಲ್ಪ ಮಳೆಯಾಗಿದ್ದನ್ನು ಬಿಟ್ಟರೆ ನಂತರ ಮಳೆಯ ಸುಳಿವೇ ಕಾಣುತ್ತಿಲ್ಲ.

ರಾಗಿ ಜತೆಗೆ ಅಕ್ಕಡಿ ಬೆಳೆಯಾಗಿ ಬಿತ್ತನೆ ಮಾಡಿರುವ ಅವರೆ, ಹುಚ್ಚೆಳ್ಳು, ಜೋಳದ ಬೆಳೆಯೂ ಮುದುಡಿದೆ. ಅರಳು, ತೊಗರಿ, ಸಾಸಿವೆ ಬೆಳೆಗಳು ಬಾಡಿ ನಿಂತಿವೆ. ತಕ್ಷಣಕ್ಕೆ ಇಳೆ ತಂಪಾಗದಿದ್ದರೆ ಬೆಳವಣಿಗೆ ಹಂತದಲ್ಲೇ ಹಾನಿಯಾಗಲಿದೆ. ಹುರುಳಿ ಕಾಳು ಬಿತ್ತನೆಗೂ ಹಿನ್ನಡೆಯಾಗಲಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.