ADVERTISEMENT

ತುಮಕೂರು: ಮಾರುಕಟ್ಟೆಗೆ ಬಂದ ಗಣೇಶ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:54 IST
Last Updated 7 ಸೆಪ್ಟೆಂಬರ್ 2021, 5:54 IST
ತುಮಕೂರಿನಲ್ಲಿ ಗಣೇಶ ಮೂರ್ತಿಗಳ ಮಾರಾಟ ಆರಂಭವಾಗಿದೆ
ತುಮಕೂರಿನಲ್ಲಿ ಗಣೇಶ ಮೂರ್ತಿಗಳ ಮಾರಾಟ ಆರಂಭವಾಗಿದೆ   

ತುಮಕೂರು: ಐದು ದಿನಗಳ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡುತ್ತಿದ್ದಂತೆ ಗಣೇಶ ಮೂರ್ತಿಗಳ ಮಾರಾಟ ಸೋಮವಾರದಿಂದ ಆರಂಭವಾಗಿದೆ.

ಕೋವಿಡ್ ತಡೆಗಟ್ಟುವ ಸಲುವಾಗಿ ಜಾತ್ರೆ, ಉತ್ಸವ, ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ನಿರ್ಬಂಧಿಸಲಾಗಿತ್ತು. ಆದರೆ, ಈಗ ಕೋವಿಡ್ ನಿಯಮ ಪಾಲನೆಯೊಂದಿಗೆ ಆಚರಣೆಗೆ ಅವಕಾಶ ನೀಡುತ್ತಿದ್ದಂತೆ ಜನರು ಹಬ್ಬಕ್ಕೆ ಸಿದ್ಧತೆ ನಡೆಸಿದ್ದಾರೆ.

ಗೌರಿ, ಗಣೇಶ ಹಬ್ಬದ ಆರಂಭಕ್ಕೆ ಒಂದು ವಾರ ಮೊದಲೇ ಮೂರ್ತಿಗಳ ಮಾರಾಟ ಆರಂಭವಾಗುತಿತ್ತು. ವಿವಿಧ ಬಗೆಯ, ಬಣ್ಣ ಬಣ್ಣದ, ಸಾಕಷ್ಟು ಎತ್ತರದ ಮೂರ್ತಿಗಳು ರಾರಾಜಿಸುತ್ತಿದ್ದವು. ಎತ್ತರದ ಮೂರ್ತಿ ಪ್ರತಿಷ್ಠಾಪಿಸುವುದೇ ಪ್ರತಿಷ್ಠೆಯಾಗಿತ್ತು.

ADVERTISEMENT

ಕಳೆದ ವರ್ಷದಿಂದ ಕೋವಿಡ್ ಕಾಡುತ್ತಿದ್ದು, ಗಣೇಶೋತ್ಸವದ ಮೇಲೆ ಕರಿನೆರಳು ಆವರಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಪರಸರ ಸ್ನೇಹಿ, ಬಣ್ಣ ರಹಿತ ಗಣೇಶ ಮೂರ್ತಿ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ತಯಾರಕರು ಸಹ ಪರಿಸರ ಸ್ನೇಹಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದು ಅವುಗಳೇ ಈಗ ಹೆಚ್ಚು ಮಾರಾಟ ಆಗುತ್ತಿವೆ.

ಈ ವರ್ಷ ಗಣೇಶೋತ್ಸವಕ್ಕೆ ಅನುಮತಿ ಸಿಗುವ ಬಗ್ಗೆ ಆತಂಕವಿತ್ತು. ಕೊನೆಗೂ ಷರತ್ತುಗಳನ್ನು ವಿಧಿಸಿ ಅವಕಾಶ ಮಾಡಿಕೊಡಲಾಗಿದ್ದು, ಮೂರ್ತಿಗಳನ್ನು ತಯಾರಿಸಿ ಇಟ್ಟುಕೊಂಡಿದ್ದವರು ಈಗ ಮಾರಾಟಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರದಲ್ಲಿ ಪ್ರತಿಷ್ಠಾಪಿಸಲು ನಿರ್ಬಂಧ ಇರುವುದರಿಂದ ಮಾರಾಟವೂ ಇನ್ನೂ ಬಿರುಸು ಪಡೆದುಕೊಂಡಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಖರೀದಿಸಬಹುದು ಎಂದು ಕಾದು ನೋಡುತ್ತಿದ್ದಾರೆ.

ಕಳೆದ ವರ್ಷ ಕೋವಿಡ್‌ನಿಂದಾಗಿ ಕೇವಲ ಒಂದು ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ತಯಾರಿಸಿದ ಸಾವಿರಾರು ಮೂರ್ತಿಗಳು ಮಾರಾಟವಾಗದೆ ಉಳಿದು, ಕುಂಬಾರರು ಸಂಕಷ್ಟಕ್ಕೆ ಸಿಲುಕಿದ್ದರು. ಮೂರ್ತಿ ತಯಾರಕರ ಬದುಕು ಬೀದಿಗೆ ಬಿದ್ದಿತ್ತು. ಈ ಬಾರಿ ಆಚರಣೆಗೆ ಅವಕಾಶ ನೀಡಿದ್ದು, ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಲಾಗುವುದು ಎಂದು ಕರ್ನಾಟಕ ಕುಂಬಾರರ ಸಂಘದ ಗೌರವಾಧ್ಯಕ್ಷ ಬಸವರಾಜು ತಿಳಿಸಿದರು.

ಮನೆಗಳಲ್ಲಿ 2 ಅಡಿ, ಸಾರ್ವಜನಿಕವಾಗಿ 4 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಮೂರ್ತಿ ಖರೀದಿಸಿ ಹಬ್ಬ ಆಚರಿಸುವ ಮೂಲಕ ಸಂಕಷ್ಟದಲ್ಲಿರುವ ಕುಂಬಾರರ ನೆರವಿಗೆ ಬರುವಂತೆ ಮನವಿ ಮಾಡಿದರು.

ಜಿಲ್ಲಾ ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ನವೀನ್, ನಿರ್ದೇಶಕ ಕಾಂತರಾಜು ಸಹ ಸಹಕಾರ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.