ADVERTISEMENT

ತುಮಕೂರು: ಮೃತ್ಯು ಕೂಪವಾದ ರಾಷ್ಟ್ರೀಯ ಹೆದ್ದಾರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 3:53 IST
Last Updated 9 ಸೆಪ್ಟೆಂಬರ್ 2021, 3:53 IST
ಗುಂಡಿ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ
ಗುಂಡಿ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ   

ತುಮಕೂರು: ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆಯಿತು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿ ಉಳಿಯಲಿಲ್ಲ. ಮತ್ತೊಬ್ಬ ಸ್ಕೂಟರ್ ಸವಾರ ಬಿದ್ದು ಕಾಲು ಮುರಿದುಕೊಂಡ. ಗುಂಡಿಗೆ ಇಳಿಯುವುದನ್ನು ತಪ್ಪಿಸಲು ಒಮ್ಮೆಲೆ ಕಾರಿನ ವೇಗವನ್ನು ಕಡಿಮೆ ಮಾಡುತ್ತಿದ್ದಂತೆ ಹಿಂದಿನಿಂದ ಬಂದ ನಾಲ್ಕೈದು ವಾಹನಗಳು ಒಂದಕ್ಕೊಂದು ಗುದ್ದಿಕೊಂಡವು...

ನಿತ್ಯವೂ ನಡೆಯುವ ಇಂತಹ ಅಪಘಾತಗಳ ಬಗ್ಗೆ ಚಾಲಕ ನಾಗೇಶ್ ಹೇಳುತ್ತಿದ್ದರೆ ಎಂತಹವರಿಗೂ ಆತಂಕವಾಗುತ್ತದೆ. ಒಂದು ರೀತಿಯಲ್ಲಿ ಮೃತ್ಯು ಕೂಪವಾಗಿ ಪರಿಣಮಿಸಿದೆ. ಅಂತರಸನಹಳ್ಳಿ ಸೇತುವೆ ಸಮೀಪದ ಇಳಿಜಾರಿನಲ್ಲಿ ಗುಂಡಿಯ ತುದಿಗೆ ಕಾರಿನ ಟೈರ್ ತಗುಲಿ ಸಿಡಿದು, ಉರುಳಿ ಬಿತ್ತು. ಪ್ರಾಣಾಪಾಯ ಆಗಲಿಲ್ಲ ಎಂಬುದೇ ಸಮಾಧಾನದ ಸಂಗತಿ. ಆದರೆ ಕಾರಿನಲ್ಲಿ ಇದ್ದವರು ಕೈಕಾಲು ಮುರಿದುಕೊಂಡರು. ಗುಜರಿಗೆ ಹಾಕುವಷ್ಟರ ಮಟ್ಟಿಗೆ ಕಾರು ಹಾಳಾಗಿತ್ತು ಎಂದು ಘಟನೆಯನ್ನು ಅವರು ನೆನಪಿಸಿಕೊಂಡರು.

ಇದು ಯಾವುದೊ ಗ್ರಾಮೀಣ ಪ್ರದೇಶದ ಕಚ್ಚಾ ರಸ್ತೆಯ ಕಥೆಯಲ್ಲ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸಮಸ್ಯೆ. ತುಮಕೂರು ನಗರದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ನಿತ್ಯ ಅಪಘಾತಗಳು ನಡೆಯುತ್ತಲೇ ಇವೆ. ಜಾಸ್ ಟೋಲ್‌ನಿಂದ ಊರುಕೆರೆ, ಕೋರ ಭಾಗದವರೆಗೂ ರಸ್ತೆ ಹಾಳಾಗಿದ್ದು, ಮೊಳದುದ್ದ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಒಂದು ಗುಂಡಿ ತಪ್ಪಿಸಲು ಮುಂದಾದರೆ ಮುಂದೆ ಮತ್ತೊಂದು ಗುಂಡಿಗೆ ಬೀಳುತ್ತಾರೆ. ಇಲ್ಲವೆ ನಿಧಾನ ಮಾಡಿದರೆ ಹಿಂದಿನಿಂದ ಜೋರಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತವೆ. ಗುಂಡಿ ತಪ್ಪಿಸಲು ವಾಹನಗಳನ್ನು ಅಕ್ಕಪಕ್ಕಕ್ಕೆ ಸರಿಸಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ರಸ್ತೆ ಹಾಳಾದ ನಂತರ ಅಪಘಾತ ಸಂಭವಿಸದ ಗಳಿಗೆ, ದಿನವಿಲ್ಲ ಎನ್ನುವಂತಾಗಿದೆ.

ADVERTISEMENT

ಇದು ಚೆನ್ನೈ– ಬೆಂಗಳೂರು– ಪುಣೆ– ಮುಂಬೈ ಹೆದ್ದಾರಿ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಈ ಹೆದ್ದಾರಿ ಮೂಲಕವೇ ಹಾದುಹೋಗಬೇಕು. ತಮಿಳುನಾಡು, ಬೆಂಗಳೂರು ಭಾಗದಿಂದ ಮುಂಬೈ ಕಡೆಗೆ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಗೆ ಸಾಗುವವರು ಇದೇ ಮಾರ್ಗದಲ್ಲಿ ತೆರಳುತ್ತಾರೆ. ಈ ರಸ್ತೆಯಲ್ಲಿ ಸೆಕೆಂಡಿಗೆ ನಾಲ್ಕಾರು ವಾಹನಗಳು ಸಂಚರಿಸುತ್ತಿರುತ್ತವೆ.

ಈ ರಸ್ತೆಗೆ ಬೈಕು, ಕಾರುಗಳೇ ಚಿಕ್ಕ ವಾಹನಗಳು. ಹತ್ತಾರು ಟನ್‌ಗಳಷ್ಟು ಭಾರ ಹೊತ್ತ ಟ್ರಕ್ಕು, ಲಾರಿಗಳು, ಕಂಟೇನರ್‌ಗಳು, ಸರಕು ಸಾಗಣೆ ವಾಹನಗಳು, ಬಸ್‌ಗಳು ಸೇರಿದಂತೆ ಬೃಹತ್ ವಾಹನಗಳು ಸಾಗುತ್ತವೆ. ಇಡೀ ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಹತ್ತಾರು ವಾಹನಗಳು ಹಾದು ಹೋಗಿರುತ್ತವೆ ಎಂದರೆ ಇನ್ನೆಷ್ಟು ವಾಹನಗಳು ಸಂಚರಿಸಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಅತಿ ಹೆಚ್ಚು ವಾಹನಗಳ ದಟ್ಟಣೆ ಇರುವ ರಸ್ತೆಗಳಲ್ಲಿ ಈ ರಸ್ತೆಯೂ ಒಂದಾಗಿದೆ.

ಇಂತಹ ದಟ್ಟಣೆಯ ರಸ್ತೆ ಹಾಳಾಗಿರುವುದು ಅಪಘಾತಗಳನ್ನು ಹೆಚ್ಚಿಸುವಂತೆ ಮಾಡಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸುತ್ತಾರೆ. ಹೆದ್ದಾರಿ ನಿರ್ಮಾಣದ ನಂತರ ನಿರ್ವಹಣೆ ಮಾಡುವ ಹೊಣೆಯನ್ನೂ ಗುತ್ತಿಗೆ ನೀಡಲಾಗಿರುತ್ತದೆ. ರಸ್ತೆ ತೆರಿಗೆ, ದುಬಾರಿ ಟೋಲ್ ಶುಲ್ಕ ಸಂಗ್ರಹಿಸಿದ ನಂತರವೂ ರಸ್ತೆಯನ್ನುಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ. ಜನರಿಂದ ಮಾತ್ರ ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಾಹನ ಚಾಲಕರು, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜನರಿಂದ ಆಕ್ರೋಶ ಹೆಚ್ಚಾದಾಗ ನೆಪಮಾತ್ರಕ್ಕೆ ಆಗಾಗ ತೇಪೆಹಾಕಿ ಗುಂಡಿ ಮುಚ್ಚುವ ನಾಟಕ ನಡೆಯುತ್ತದೆ. ಸಣ್ಣಗೆ ಮಳೆ ಬಿದ್ದರೆ, ಇಲ್ಲವೆ ನಾಲ್ಕು ದಿನ ವಾಹನಗಳು ಓಡಾಡಿದರೆ ಮತ್ತೆ ಗುಂಡಿಗಳ ರೂಪ ತಾಳುತ್ತದೆ. ಮುಂಗಾರು ಮಳೆ ಆರಂಭದ ಸಮಯದಲ್ಲಿ ತೇಪೆ ಹಾಕಲಾಯಿತು. ಈಗ ಮತ್ತೆ ಗುಂಡಿಗಳು ಬಾಯ್ದೆರೆದು ಮೃತ್ಯು ಕೂಪಕ್ಕೆ ಕಾದು ನಿಂತಿವೆ. ಮತ್ತೊಮ್ಮೆ ತೇಪೆ ಕೆಲಸ ನಡೆದಿದ್ದು, ಒಂದೆರಡು ಮಳೆ ಬಂದರೆ ಮತ್ತೆ ಹಾಳಾಗುತ್ತದೆ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವವರೆಗೂ ಈ ಸಮಸ್ಯೆ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.