ADVERTISEMENT

7 ವರ್ಷದಲ್ಲಿ ಭಾರತ ಬದಲಾಗಿದೆ: ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 4:44 IST
Last Updated 6 ಅಕ್ಟೋಬರ್ 2021, 4:44 IST
ತುಮಕೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ ದೀನ ದಯಾಳ್ ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಜಿ.ಬಿ.ಜೋತಿಗಣೇಶ್, ಎಂ.ಬಿ.ನಂದೀಶ್, ಸಂಪಿಗೆ ಶ್ರೀಧರ್, ಪಾವಗಡ ರವಿ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ ದೀನ ದಯಾಳ್ ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಜಿ.ಬಿ.ಜೋತಿಗಣೇಶ್, ಎಂ.ಬಿ.ನಂದೀಶ್, ಸಂಪಿಗೆ ಶ್ರೀಧರ್, ಪಾವಗಡ ರವಿ ಉಪಸ್ಥಿತರಿದ್ದರು   

ತುಮಕೂರು: ಕಳೆದ ಏಳು ವರ್ಷಗಳಲ್ಲಿ ಭಾರತ ಬದಲಾಗಿದ್ದು, ದೇಶೀಯ ವಿಚಾರಧಾರೆಗಳಿಗೆ ಮನ್ನಣೆ ದೊರೆಯುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇಲ್ಲಿ ಮಂಗಳವಾರ ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ‘ಸೇವಾ ಮತ್ತು ಸಮರ್ಪಣಾ ಅಭಿಯಾನ’ದ ಅಂಗವಾಗಿ ಆಯೋಜಿಸಿದ್ದ ‘ಸೇವಾ ಯಜ್ನದಲ್ಲಿ ಸಮರ್ಪಿತ ಜೀವನ’ ಕುರಿತು ಮಾತನಾಡಿದರು.

‘ಕಳೆದ 75 ವರ್ಷಗಳಲ್ಲಿ ಹಿರಿಯರು ಕಂಡ ಕನಸು ನನಸಾಗುತ್ತಿದೆ. ಸಮಾಜದ ಅಭಿವೃದ್ಧಿಯಲ್ಲಿ ಕೆಲವರ ಅಭಿವೃದ್ಧಿಯಾಗಿತ್ತು. ಛಿದ್ರಗೊಂಡ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಹಲವು ಸೌಕರ್ಯಗಳು ಕಳೆದ ಏಳು ವರ್ಷಗಳಲ್ಲಿ ದೊರೆತಿವೆ. ಇಡೀ ಭಾರತವನ್ನು ನನ್ನ ಪರಿವಾರ ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಶಾಸಕ ಜಿ.ಬಿ.ಜೋತಿಗಣೇಶ್, ‘ಬಿಜೆಪಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಬಂಡವಾಳಶಾಹಿ,ಎಡಪಂಥೀಯ ವಿಚಾರಗಳಿಗೆ ಬದಲಾಗಿ ಪಂಡಿತ ದೀನ ದಯಾಳ್ ಉಪಾಧ್ಯಾಯ ನೀಡಿದ ಸಮತೋಲನ ಸಿದ್ಧಾಂತದ ಮೇಲೆ ಪ್ರತಿಯೊಬ್ಬರಿಗೂ ಸೌಲಭ್ಯ ದೊರೆಯಬೇಕು ಎಂಬ ಮೂಲ ಆಶಯವನ್ನು ಹೊಂದಿದೆ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್, ‘ಜನಸಂಘದಲ್ಲಿ ಕೊಂಚ ಹಿನ್ನಡೆಯಾದರೂ, ಬಿಜೆಪಿ ಕಟ್ಟಿದ ನಂತರ ಇಡೀ ಭಾರತವನ್ನು ತಲುಪಲು ಸಾಧ್ಯವಾಗಿದೆ. ಎಲ್‌.ಕೆ.ಅಡ್ವಾಣಿ, ಎ.ಬಿ.ವಾಜಪೇಯಿ ಅವರ ಕನಸುಗಳನ್ನು ನರೇಂದ್ರ ಮೋದಿ, ಅಮಿತ್ ಶಾ ನನಸು ಮಾಡುತ್ತಿದ್ದಾರೆ. ಅವರ ಹುಟ್ಟಿದ ದಿನವನ್ನು ಸೇವಾ ಮತ್ತು ಸಮರ್ಪಣಾ ಅಭಿಯಾನದ ಹೆಸರಿನಲ್ಲಿ 20 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಉಪಾಧ್ಯಕ್ಷ ಪಾವಗಡ ರವಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.