ADVERTISEMENT

ಎಸ್‌ಟಿಗೆ ಸೇರಿಸಲು ಕಾಡುಗೊಲ್ಲರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 3:15 IST
Last Updated 12 ಸೆಪ್ಟೆಂಬರ್ 2021, 3:15 IST
ತುಮಕೂರಿನಲ್ಲಿ ಕಾಡುಗೊಲ್ಲರ ಸಮುದಾಯದ ಮುಖಂಡರ ಸಭೆ ನಡೆಯಿತು. ಸಮುದಾಯದ ಮುಖಂಡರಾದ ಷಣ್ಮುಗಪ್ಪ, ಡಿ.ಕೆ.ಗಂಗಾಧರ್, ಅಕ್ಕಲಪ್ಪ, ಎಂ.ಜಿ.ಶಿವಣ್ಣ, ಈರಣ್ಣ, ಚಿಕ್ಕರಾಜು, ನಾಗರಾಜು ಇತರರು ಇದ್ದರು
ತುಮಕೂರಿನಲ್ಲಿ ಕಾಡುಗೊಲ್ಲರ ಸಮುದಾಯದ ಮುಖಂಡರ ಸಭೆ ನಡೆಯಿತು. ಸಮುದಾಯದ ಮುಖಂಡರಾದ ಷಣ್ಮುಗಪ್ಪ, ಡಿ.ಕೆ.ಗಂಗಾಧರ್, ಅಕ್ಕಲಪ್ಪ, ಎಂ.ಜಿ.ಶಿವಣ್ಣ, ಈರಣ್ಣ, ಚಿಕ್ಕರಾಜು, ನಾಗರಾಜು ಇತರರು ಇದ್ದರು   

ತುಮಕೂರು: ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಕಾಡುಗೊಲ್ಲರ ಸಮುದಾಯದ ಮುಖಂಡರು ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಕಾಡುಗೊಲ್ಲರ ಪರಿಶಿಷ್ಟ ಪಂಗಡ ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ನಡೆಯಿತು.

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ತಕ್ಷಣ ನೇಮಕಮಾಡಿ, ಅನುದಾನ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಮುಖಂಡರು ಒಟ್ಟಾಗಿ ಆಗ್ರಹಿಸಿದರು.

ADVERTISEMENT

ಸಮುದಾಯದ ಮುಖಂಡ ಷಣ್ಮುಗಪ್ಪ, ‘ರಾಜ್ಯದಲ್ಲಿ ಮೊದಲ ಬಾರಿಗೆ 1982ರಲ್ಲಿ ಕಾಡುಗೊಲ್ಲ ಎಂಬಉಪ ಪಂಗಡಕ್ಕೆ ಸಿದ್ದಪ್ಪ ಅವರು ಅಂಕಿತ ಹಾಕಿದರು. ವಿ.ಪಿ.ಮಂಡಲ್ ಅವರನ್ನು ಕರೆದುಕೊಂಡು ಬಂದು ನಮ್ಮ ಸ್ಥಿತಿಗಳನ್ನು ಪರಿಚಯಿಸಿದರು. ಉತ್ತರ ಭಾರತದ ಯಾದವ ಸಮುದಾಯಕ್ಕಿಂತ ಭಿನ್ನವಾಗಿದ್ದು, ಸಾಮಾಜಿಕ ಕಟ್ಟುಪಾಡು, ಮೌಢ್ಯ, ಕಂದಾಚಾರವೇ ತುಂಬಿರುವುದನ್ನು ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಇದೆಲ್ಲವನ್ನು ಗಮನಿಸಿದ ಮಂಡಲ್ ಅವರು ಪರಿಶಿಷ್ಟ ಪಂಗಡದಜಾತಿ ಪಟ್ಟಿಗೆ ಸೇರಲು ಎಲ್ಲಾ ರೀತಿಯಿಂದಲೂಅರ್ಹವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ನಂತರ ಹೋರಾಟಗಳು ಆರಂಭವಾದವು’ ಎಂದು ನೆನಪಿಸಿಕೊಂಡರು.

ಕಳೆದ ನಾಲ್ಕು ದಶಕಗಳಿಂದಲೂ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಆಳುವ ಪಕ್ಷಗಳು ನಮ್ಮನ್ನು ಕೇವಲ ಓಟ್‍ ಬ್ಯಾಂಕ್ ಮಾಡಿಕೊಂಡು, ವಂಚಿಸಿವೆ. ಇದರ ವಿರುದ್ಧ ನಿರ್ಣಾಯಕ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ. ವಿವಿಧ ಹೆಸರುಗಳಲ್ಲಿ ಕಾಡುಗೊಲ್ಲರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿ
ರುವ ಸಂಘಟನೆಗಳು ಒಂದೇ ವೇದಿಕೆಗೆ ಬರಬೇಕು. ನಮ್ಮ ಗಟ್ಟಿ ಧ್ವನಿಯ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಲಹೆ ಮಾಡಿದರು.

ಗೊಲ್ಲ ಸಮುದಾಯ ಸೇರಿದಂತೆ ಎಲ್ಲಾ ಜಾತಿಗಳಲ್ಲಿಆರ್ಥಿಕವಾಗಿ ಹಿಂದುಳಿದ ಜನ ಇದ್ದಾರೆ. ಆದರೆ ಇನ್ನೂ ಮೌಢ್ಯ, ಕಂದಾಚಾರಕ್ಕೆ ಅಂಟಿಕೊಂಡು, ಸಮಾಜದ ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಿರುವ ಕಾಡುಗೊಲ್ಲ ಸಮುದಾಯವನ್ನು ಗೊಲ್ಲ, ಯಾದವ ಸಮುದಾಯಗಳು ಬೆಂಬಲಿಸಬೇಕು ಎಂದು ಕೇಳಿಕೊಂಡರು.

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ರಾಜ್ಯ ಸರ್ಕಾರ ಮಾಡಿರುವ ಶಿಫಾರಸು ಕೇಂದ್ರದ ಮುಂದಿದೆ. ಶಿಫಾರಸು ಅನುಷ್ಠಾನಕ್ಕೆ ಒತ್ತಡ ತರಬೇಕು. ಜತೆಗೆ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ಮುಖಂಡ ಡಿ.ಕೆ.ಗಂಗಾಧರ್, ‘ಶಿರಾ ಉಪಚುನಾವಣೆ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಹಾರಿಕೆ ಉತ್ತರ ನೀಡುವ ಬದಲು ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಅರ್ಹ ಕಾಡುಗೊಲ್ಲರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದು’ ಎಂದರು.

ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಬಿ.ಟಿ.ಗೋವಿಂದರಾಜು, ‘ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಸಮುದಾಯದ ಹೆಸರನ್ನು ಬಳಸಿಕೊಂಡರು. ಕಾಡುಗೊಲ್ಲರ ಮತಗಳನ್ನು ಪಡೆದು, ಗೆಲುವು ಸಾಧಿಸಿದ ನಂತರ, ನಿಗಮದ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಪೈಪೋಟಿ ಮತ್ತಿತರ ಸಬೂಬು ಹೇಳುತ್ತಿದೆ’ ಎಂದು ಆರೋಪಿಸಿದರು.

ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಅಕ್ಕಲಪ್ಪ, ಮುಖಂಡರಾದ ಎಂ.ಜಿ.ಶಿವಣ್ಣ, ಈರಣ್ಣ, ಚಿಕ್ಕರಾಜು, ನಾಗರಾಜು, ಯರ್ರಪ್ಪ ಪೂಜಾರ್, ಮಂಜುನಾಥ್, ಕೆಂಪರಾಜು, ದಿಲೀಪ್‍ಕುಮಾರ್, ಪುರುಷೋತ್ತಮ್ ಇತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.