ADVERTISEMENT

Karnataka Election 2023 ಇಬ್ಬರು ಸಚಿವರನ್ನು ನೀಡಿದ ಮಧುಗಿರಿ ಕ್ಷೇತ್ರ

ಅನಿತಾ ಮೊದಲ ಮಹಿಳಾ ಶಾಸಕಿ; ಹಿಂದೆ ದ್ವಿಸದಸ್ಯ ಕ್ಷೇತ್ರವಾಗಿತ್ತು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 23:45 IST
Last Updated 21 ಮಾರ್ಚ್ 2023, 23:45 IST
ಮಧುಗಿರಿ ವಿಧಾನಸಭಾ ಕ್ಷೇತ್ರ
ಮಧುಗಿರಿ ವಿಧಾನಸಭಾ ಕ್ಷೇತ್ರ   

ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಶಾಸಕರಾಗಿ ರಾಜವರ್ಧನ್ ಹಾಗೂ ಡಾ.ಜಿ.ಪರಮೇಶ್ವರ ಆಯ್ಕೆ ಆಗಿರುವುದನ್ನು ಹೊರತುಪಡಿಸಿದರೆ ಉಳಿದ ಯಾರೊಬ್ಬರೂ ಎರಡನೇ ಅವಧಿಗೆ ಗೆದ್ದು ಬಂದಿಲ್ಲ. ಜತೆಗೆ ಇಬ್ಬರೂ ಸಚಿವರಾಗಿದ್ದು ಕ್ಷೇತ್ರದ ವಿಶೇಷ.

1957ರಲ್ಲಿ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕು ದ್ವಿ ಸದಸ್ಯ ಕ್ಷೇತ್ರವಾಗಿತ್ತು. ಕೊರಟಗೆರೆ (ಪರಿಶಿಷ್ಟ ಜಾತಿ), ಮಧುಗಿರಿ ಸಾಮಾನ್ಯ ಕ್ಷೇತ್ರವಾಗಿತ್ತು. ಕೊರಟಗೆರೆ ಕ್ಷೇತ್ರದಿಂದ ಆರ್.ಚೆನ್ನಿಗರಾಮಯ್ಯ (ಕಾಂಗ್ರೆಸ್) ಹಾಗೂ ಮಧುಗಿರಿಯಿಂದ ಮಾಲೀಮರಿಯಪ್ಪ (ಕಾಂಗ್ರೆಸ್) ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

1962ರ ಕ್ಷೇತ್ರ ಪುನರ್ ವಿಂಗಡಣೆಯಾದ ಸಮಯದಲ್ಲಿ ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರಗಳು ಪ್ರತ್ಯೇಕಗೊಂಡವು. ಆಗ ಪಿಎಸ್‌ಪಿ ಪಕ್ಷದ ಟಿ.ಎಸ್.ಶಿವಣ್ಣ ಶಾಸಕರಾಗಿ ಆಯ್ಕೆಯಾದರು. 1967ರಲ್ಲಿ ಐ.ಡಿ.ಹಳ್ಳಿಯ ಜಿ.ಟಿ.ಗೋವಿಂದರೆಡ್ಡಿ (ಕಾಂಗ್ರೆಸ್) ವಿಜೇತರಾದರು. 1972ರಲ್ಲಿ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮದ ಆರ್.ಚಿಕ್ಕಯ್ಯ (ಕಾಂಗ್ರೆಸ್) ಗೆಲುವು ಸಾಧಿಸಿದರು.

ADVERTISEMENT

1978ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಗಂಗಹನುಮಯ್ಯ (ಕಾಂಗ್ರೆಸ್–ಐ) ವಿಜೇತರಾದರು. 1983ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ರಾಜವರ್ಧನ್ ಶಾಸಕರಾದರು. 1985ರಲ್ಲಿ ರಾಜವರ್ಧನ್ ಪುನರ್ ಆಯ್ಕೆಯಾದರು. 1989ರ ಚುನಾವಣೆಯಲ್ಲಿ ಎರಡು ಬಾರಿ ಶಾಸಕರಾಗಿದ್ದ ರಾಜವರ್ಧನ್ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಡಾ.ಜಿ.ಪರಮೇಶ್ವರ ಸ್ಪರ್ಧಿಸಿದರು. ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದರು.

1994ರಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಸೋಲಿಸಿದ ಗಂಗಹನುಮಯ್ಯ (ಜನತಾ ಪಕ್ಷ) ಗೆಲುವಿನ ನಗೆ ಬೀರಿದ್ದರು. 1999 ಹಾಗೂ 2004ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ ಸತತ ಎರಡು ಅವಧಿಗೆ ಶಾಸಕರಾಗಿದ್ದರು. 2004ರಲ್ಲಿ ಗಂಗಹನುಮಯ್ಯ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ಕೈತಪ್ಪಿದ್ದು, ಎಚ್.ಕೆಂಚಮಾರಯ್ಯ ಸ್ಪರ್ಧಿಸಿ, ಪರಮೇಶ್ವರ ವಿರುದ್ಧ ಸೋತರು.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಬೆಳ್ಳಾವಿ ಕ್ಷೇತ್ರದಲ್ಲಿದ್ದ ದೊಡ್ಡೇರಿ ಹೋಬಳಿಯನ್ನು ಕ್ಷೇತ್ರಕ್ಕೆ ಸೇರಿಸಲಾಯಿತು. ಮಧುಗಿರಿ ಕ್ಷೇತ್ರದಲ್ಲಿದ್ದ ಪುರವರ ಹೋಬಳಿಯನ್ನು ಕೊರಟಗೆರೆ ಮೀಸಲು ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು.

2008ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್, ಕಾಂಗ್ರೆಸ್‌ನಿಂದ ಕೆ.ಎನ್.ರಾಜಣ್ಣ ಸ್ಪರ್ಧೆ ಮಾಡಿದ್ದರು. ಡಿ.ಸಿ.ಗೌರಿಶಂಕರ್ ಶಾಸಕರಾಗಿ ಆಯ್ಕೆಯಾದರೂ ಆಪರೇಷನ್ ಕಮಲಕ್ಕೆ ಒಳಗಾಗಿ ಕೆಲವೇ ತಿಂಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೌರಿಶಂಕರ್ ಮತ್ತೆ ಸ್ಪರ್ಧಿಸಲಿಲ್ಲ. ಕೆ.ಎನ್.ರಾಜಣ್ಣ (ಕಾಂಗ್ರೆಸ್), ಸಿ.ಚೆನ್ನಿಗಪ್ಪ (ಬಿಜೆಪಿ) ಹಾಗೂ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ (ಜೆಡಿಎಸ್) ಸ್ಪರ್ಧಿಸಿದ್ದರು. ಕೊನೆಗೆ ಅನಿತಾ ಶಾಸಕರಾಗಿ ಆಯ್ಕೆಯಾದರು. ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

2013ರಲ್ಲಿ ಕೆ.ಎನ್.ರಾಜಣ್ಣ (ಕಾಂಗ್ರೆಸ್) ಹಾಗೂ ಎಂ.ವಿ.ವೀರಭದ್ರಯ್ಯ (ಜೆಡಿಎಸ್) ಸ್ಪರ್ಧೆ ಮಾಡಿದ್ದರು. ಕೆ.ಎನ್.ರಾಜಣ್ಣ ಜಯಗಳಿಸಿದರು. 2018ರಲ್ಲಿ ಕೆ.ಎನ್.ರಾಜಣ್ಣ (ಕಾಂಗ್ರೆಸ್) ಹಾಗೂ ಎಂ.ವಿ.ವೀರಭದ್ರಯ್ಯ (ಜೆಡಿಎಸ್) ಸ್ಪರ್ಧಿಸಿದ್ದು, ಎರಡನೇ ಪ್ರಯತ್ನದಲ್ಲಿ ಎಂ.ವಿ.ವೀರಭದ್ರಯ್ಯ ಶಾಸಕರಾಗಿ ಆಯ್ಕೆಯಾದರು.

ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡುತ್ತಿರಲಿಲ್ಲ. ಗ್ರಾಮದ ಮುಖಂಡರ ಮನೆಗೆ ಮಾತ್ರ ಭೇಟಿ ಕೊಟ್ಟು ಮತಯಾಚನೆ ಮಾಡುತ್ತಿದ್ದರು.‌ ಆ ಮುಖಂಡರೇ ಜನರ ವಿಶ್ವಾಸಗಳಿಸಿ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿಸುತ್ತಿದ್ದರು. ಈಗ ಚುನಾವಣೆ ಪ್ರಕ್ರಿಯೆಗಳು ಬದಲಾಗಿವೆ ಎಂದು ಕೆಪಿಸಿಸಿ ಸದಸ್ಯ ಮಲ್ಲಿಕಾರ್ಜುನಯ್ಯ ನೆನಪಿಸಿಕೊಳ್ಳುತ್ತಾರೆ.

**

ಇಬ್ಬರು ಮಾತ್ರ ಸ್ಥಳೀಯರು

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 15 ಬಾರಿ ಚುನಾವಣೆ ನಡೆದರೂ ಕೇವಲ ಎರಡು ಬಾರಿ ಮಾತ್ರ ಸ್ಥಳೀಯರು ಶಾಸಕರಾಗಿ ಆಯ್ಕೆ ಆಗಿದ್ದಾರೆ.

1967ರಲ್ಲಿ ಐ.ಡಿ.ಹಳ್ಳಿಯ ಜಿ.ಟಿ.ಗೋವಿಂದರೆಡ್ಡಿ, 1972ರಲ್ಲಿ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ರಂಗಾಪುರ ಗ್ರಾಮದ ಆರ್.ಚಿಕ್ಕಯ್ಯ ಶಾಸಕರಾಗಿ ಆಯ್ಕೆಯಾದ ಸ್ಥಳೀಯರು. ಒಮ್ಮೆ ಪ್ರಸನ್ನ ಕುಮಾರ್ ಲೋಕಸಭಾ ಸದಸ್ಯರಾಗಿದ್ದರು. ರಾಜವರ್ಧನ್ ಹಾಗೂ ಡಾ.ಜಿ.ಪರಮೇಶ್ವರ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.