ADVERTISEMENT

17ಕ್ಕೆ ಕೋವಿಡ್ ಲಸಿಕಾ ಮೆಗಾ ಮೇಳ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 7:58 IST
Last Updated 16 ಸೆಪ್ಟೆಂಬರ್ 2021, 7:58 IST
ವೈ.ಎಸ್.ಪಾಟೀಲ
ವೈ.ಎಸ್.ಪಾಟೀಲ   

ತುಮಕೂರು: ಜಿಲ್ಲೆಯಲ್ಲಿ ಸೆ. 17ರಂದು ಕೋವಿಡ್ ಲಸಿಕೆ ಮೆಗಾ ಮೇಳ ಹಮ್ಮಿಕೊಂಡಿದ್ದು, ಅಂದು 1.25 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಈ ಮೇಳದಲ್ಲಿ ನಿಗದಿತ ಗುರಿ ಸಾಧಿಸುವ ಮೂಲಕ ಯಶಸ್ವಿ
ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿ
ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಲಸಿಕಾ ಮೇಳದಲ್ಲಿ ತುಮಕೂರು ತಾಲ್ಲೂಕಿಗೆ 25 ಸಾವಿರ, ಶಿರಾ 15 ಸಾವಿರ, ಮಧುಗಿರಿ 12 ಸಾವಿರ, ಪಾವಗಡ 10 ಸಾವಿರ, ಚಿಕ್ಕನಾಯಕನಹಳ್ಳಿ 12 ಸಾವಿರ, ತುರುವೇಕೆರೆ 10 ಸಾವಿರ, ಕುಣಿಗಲ್ 10 ಸಾವಿರ, ಕೊರಟಗೆರೆ ತಾಲ್ಲೂಕಿಗೆ 10 ಸಾವಿರ ಸೇರಿ 1.25 ಲಕ್ಷ ಗುರಿ ನಿಗದಿಪಡಿಸಲಾಗಿದೆ. ಲಸಿಕೆ ನೀಡುವ ನಿಗದಿತ ಗುರಿ ಸಾಧಿಸದೆ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ತಾಲ್ಲೂಕು ಮಟ್ಟದ ಕಾರ್ಯಪಡೆಯು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಲಸಿಕಾ ಮೇಳದ ದಿನದಂದು ಬೆಳಿಗ್ಗೆಯೇ ನಿಗದಿತ ಸ್ಥಳದಲ್ಲಿ ಹಾಜರಿದ್ದು, ಕಾರ್ಯೋನ್ಮುಖರಾಗಬೇಕು ಎಂದರು.

ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಲಸಿಕೆ ಪಡೆಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಅವರ ಕುಟುಂಬದವರು, ವಿದ್ಯಾರ್ಥಿಗಳಿಗೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಹಾಕಿಸಬೇಕು. ಇದಕ್ಕೆ ಪೂರಕವಾಗಿ ಲಸಿಕಾ ಕೇಂದ್ರ ತೆರೆಯಬೇಕು ಎಂದು ವಿಶ್ವವಿದ್ಯಾನಿಲಯ ಮುಖ್ಯಸ್ಥರಿಗೆ ಸೂಚಿಸಿದರು.

ಲಸಿಕಾ ಮೇಳ ಹಮ್ಮಿಕೊಂಡಿರುವ ಬಗ್ಗೆ ಎಲ್ಲಾ ಶಾಲೆ, ಕಾಲೇಜುಗಳಿಗೆ ಮಾಹಿತಿ ಒದಗಿಸಬೇಕು. ಪೋಷಕರು ಲಸಿಕೆ ಹಾಕಿಸಿಕೊಳ್ಳುವಂತೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಬೇಕು. ಶಾಲಾ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ
ವರ್ಗದವರಿಗೆ ಕಡ್ಡಾಯವಾಗಿ ಲಸಿಕೆ
ನೀಡಲು ಕ್ರಮವಹಿಸುವಂತೆ ಶಿಕ್ಷಣ ಇಲಾ
ಖೆ ಉಪನಿರ್ದೇಶಕರಿಗೆ ನಿರ್ದೇಶಿಸಿದರು.

ಚುನಾವಣೆ ಮಾದರಿ: ಚುನಾವಣಾ ಮಾದರಿಯಲ್ಲಿ ನಡೆಸಬೇಕು. ನಿಯೋಜಿತ ನೋಡಲ್ ಅಧಿಕಾರಿಗಳು ಬೆಳಿಗ್ಗೆ 6.30 ಗಂಟೆಗೆ ಲಸಿಕೆ ಹಾಕಿಸಲು ಆರಂಭಿಸಿ ಸಂಜೆ 7 ಗಂಟೆವರೆಗೂ ನಡೆಸಬೇಕು. ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಶಾ, ಅಂಗನವಾಡಿ ಕಾರ್ಯಕರ್ತೆ ಯರನ್ನು ಬಳಸಿಕೊಂಡು ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ ಲಸಿಕೆ ಹಾಕಿಸುವಂತೆ ಸಲಹೆ ಮಾಡಿದರು.

ಪ್ರಚಾರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ.ವಿದ್ಯಾಕುಮಾರಿ, ‘ಗ್ರಾ.ಪಂ ಪಿಡಿಒ
ಗಳು ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾಮ
ಗಳಲ್ಲಿ ಟಾಂಟಾಂ ಮೂಲಕ ಸಾರ್ವಜನಿ
ಕರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯತಿಯಲ್ಲಿ ರೂಟ್ ಮ್ಯಾಪ್ ಹಾಕಿಕೊಂಡು ಅಭಿಯಾನ ಕೈಗೊಳ್ಳಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ‘ಹೋಬಳಿವಾರು ನೋಡಲ್ ಅಧಿಕಾರಿಗಳು ಮೇಳದ ಮುನ್ನಾ ದಿನವೇ ಲಸಿಕಾ ಮೇಳದಲ್ಲಿ ಭಾಗವಹಿಸುವವರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅಧಿಕಾರಿಗಳು ಲಸಿಕಾ ಅಭಿಯಾನಕ್ಕಾಗಿ ಎರಡು ದಿನ ಮೀಸಲಿಡಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್, ಅಗತ್ಯವಿದ್ದರೆ ವಾಹನ ವ್ಯವಸ್ಥೆ, ಬೀಟ್ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರ
ಭದ್ರಯ್ಯ, ಡಿಎಚ್ಒ ಡಾ.ನಾಗೇಂದ್ರಪ್ಪ, ಪಾಲಿಕೆ ಆಯುಕ್ತರಾದ ರೇಣುಕಾ, ಉಪವಿಭಾಗಾಧಿಕಾರಿ ಅಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.