ADVERTISEMENT

8ನೇ ತರಗತಿಗೆ ಮಧ್ಯಾಹ್ನ ಶಾಲೆ l ನಗರ ಪ್ರದೇಶದಲ್ಲಿ ಹಾಜರಾತಿ ಕಡಿಮೆ

ಖಾಸಗಿ ಶಾಲೆಗಳಿಂದ ಬಸ್‌ ಸಂಚಾರ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:23 IST
Last Updated 7 ಸೆಪ್ಟೆಂಬರ್ 2021, 5:23 IST
ತುಮಕೂರಿನ ಮರಳೂರುದಿಣ್ಣೆಯಲ್ಲಿ ಶಾಲೆಗಳತ್ತ ಸೈಕಲ್‌ನಲ್ಲಿ ಹೊರಟ ಮಕ್ಕಳು
ತುಮಕೂರಿನ ಮರಳೂರುದಿಣ್ಣೆಯಲ್ಲಿ ಶಾಲೆಗಳತ್ತ ಸೈಕಲ್‌ನಲ್ಲಿ ಹೊರಟ ಮಕ್ಕಳು   

ತುಮಕೂರು: ಕೋವಿಡ್ ಭಯ ಜನರನ್ನು ಇನ್ನೂ ಕಾಡುತ್ತಲೇ ಇದ್ದು, 6ರಿಂದ 8ನೇ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದರೂ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿಲ್ಲ.

ಒಂದೂವರೆ ವರ್ಷದ ನಂತರ ಶಾಲೆಗಳು ಆರಂಭವಾಗಿದ್ದು, ಕೆಲವು ಕಡೆಗಳಲ್ಲಿ ಮಕ್ಕಳು ಉತ್ಸಾಹದಿಂದಲೇ ಬಂದರೆ, ಸಾಕಷ್ಟು ಕಡೆಗಳಲ್ಲಿ ಅಂತಹ ವಾತಾವರಣ ಕಂಡು ಬರಲಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹಾಜರಾತಿ ತೀರಾ ಕಡಿಮೆ ಇತ್ತು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬಂದಿದ್ದರು.

ಕೋವಿಡ್‌ ಮೂರನೇ ಅಲೆಯ ಆತಂಕದ ನಡುವೆ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದೆ–ಮುಂದೆ ನೋಡುತ್ತಿದ್ದಾರೆ. ಮೊದಲ ದಿನವಾದ್ದರಿಂದ ಹಾಜರಾತಿ ಕಡಿಮೆ ಇತ್ತು. ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. 9, 10 ಹಾಗೂ ಪಿಯು ಕಾಲೇಜು ತರಗತಿಗಳು ಆರಂಭವಾದ ಸಮಯದಲ್ಲೂ ಇದೇ ಪರಿಸ್ಥಿತಿ ಇತ್ತು. ದಿನಗಳು ಕಳೆದಂತೆ, ಆತಂಕ, ಭಯ ಕಡಿಮೆಯಾದಂತೆ ಹಾಜರಾತಿಯಲ್ಲಿಸುಧಾರಣೆ ಕಂಡಿದೆ. ಪೋಷಕರೂ ನಿಧಾನವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು
ಆರಂಭಿಸಿದ್ದಾರೆ.

ADVERTISEMENT

6ರಿಂದ 8ನೇ ತರಗತಿಗಳಲ್ಲೂ ಮಕ್ಕಳ ಕಲವರ ಹೆಚ್ಚಲು ಕೆಲ ದಿನಗಳು ಹಿಡಿಯುತ್ತದೆ. ಗೌರಿ, ಗಣೇಶ ಹಬ್ಬ ಮುಗಿದು ಮುಂದಿನ ವಾರದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿವೆ. ಹಳ್ಳಿಯಲ್ಲೇ ಶಾಲೆ ಇರುವುದರಿಂದ ಗ್ರಾಮೀಣ ಮಕ್ಕಳು ಬಂದಿದ್ದಾರೆ.

ನಗರ ಪ್ರದೇಶದಲ್ಲಿ ಖಾಸಗಿ ಶಾಲೆಗಳು ಇನ್ನೂ ಬಸ್ ಸಂಚಾರ ಆರಂಭಿಸಿಲ್ಲ. ಪ್ರತಿಷ್ಠಿತ ಶಾಲೆಗಳು ಸ್ವಂತ ಬಸ್ ವ್ಯವಸ್ಥೆ ಮಾಡಿಕೊಂಡಿದ್ದು, ಮಕ್ಕಳು ಸಹ ಇದೇ ಬಸ್‌ಗಳನ್ನೇ ಅವಲಂಬಿಸಿರುತ್ತವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಬಸ್‌ಗಳ ಓಡಾಟ ಶುರುವಾದರೆ ಸಹಜವಾಗಿ ಮಕ್ಕಳೂ ಶಾಲೆಗಳತ್ತ ಬರುತ್ತಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.