ADVERTISEMENT

ಕೊರಟಗೆರೆ ಎಪಿಎಂಸಿ ವಿಲೀನಕ್ಕೆ ಆಕ್ರೋಶ

ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:32 IST
Last Updated 22 ಸೆಪ್ಟೆಂಬರ್ 2021, 3:32 IST

ಕೊರಟಗೆರೆ: ‘ಬಿಜೆಪಿ ಸರ್ಕಾರ ದುರುದ್ದೇಶದಿಂದ ಕೊರಟಗೆರೆ ತಾಲ್ಲೂಕಿಗೆ ಮುಂಜೂರಾಗಿದ್ದ ಎಪಿಎಂಸಿ ಮಾರುಕಟ್ಟೆಯನ್ನು ತುಮಕೂರು ಎಪಿಎಂಸಿ ಮಾರುಕಟ್ಟೆಯೊಂದಿಗೆ ವಿಲೀನಗೊಳಿಸಿದೆ’ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ದುರುದ್ದೇಶ ಪೂರ್ವಕವಾಗಿ ಕೊರಟಗೆರೆ ಎಪಿಎಂಸಿ ಮಾರುಕಟ್ಟೆಯನ್ನು ಸರ್ಕಾರದ ಮೇಲೆ ಒತ್ತಡ ಹೇರಿ ವಿಲೀನಗೊಳಿಸಲು ಕಾರಣರಾಗಿದ್ದಾರೆ. ಇದರಿಂದ ತಾಲ್ಲೂಕಿನ ಜನರು ಹಾಗೂ ರೈತರಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆಗೆ ಪ್ರತ್ಯೇಕ ಎಪಿಎಂಸಿ ಮಾರುಕಟ್ಟೆಯನ್ನು ಮುಂಜೂರು ಮಾಡಿಸಿದ್ದರು. ಅದರಂತೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಸ.ನಂ. 31/1ರಲ್ಲಿ 9 ಎಕರೆ ಸರ್ಕಾರಿ ಜಮೀನು ಗುರುತಿಸಲಾಯಿತು. 2018ರಲ್ಲಿ ಸಮಿಶ್ರ ಸರ್ಕಾರದಲ್ಲಿ ಎಪಿಎಂಸಿ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ₹4 ಕೋಟಿ, ಕಾಂಪೌಡ್ ನಿರ್ಮಾಣಕ್ಕೆ ₹1 ಕೋಟಿ ಬಿಡುಗಡೆ ಮಾಡಲಾಯಿತು. ಈಗಾಗಲೇ ₹1 ಕೋಟಿ ವೆಚ್ಚದಲ್ಲಿ ಕಾಪೌಂಡ್ ನಿರ್ಮಾಣ ಪೂರ್ಣಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಗೊಳಿಸಿದ್ದ ಹಣವನ್ನು ವಾಪಸ್ ಪಡೆಯಲಾಗಿದೆ. ಇದರೊಂದಿಗೆ ಸರ್ಕಾರ ಕ್ಷುಲಕ ಕಾರಣ ನೀಡಿ ಇಲ್ಲಿನ ಮಾರುಕಟ್ಟೆಯನ್ನು ತುಮಕೂರು ಮಾರುಕಟ್ಟೆಗೆ ವಿಲೀನಗೊಳಿಸಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ರೈತರು ಸೇರಿದಂತೆ ಸಾರ್ವಜನಿಕರೊಂದಿಗೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದರು.

ADVERTISEMENT

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಮಾಜಿ ಶಾಸಕ ಸುರೇಶ್ ಗೌಡ ಎಪಿಎಂಸಿ ಚುನಾವಣೆಯಲ್ಲಿ ತಮ್ಮ ಹಿಂಬಾಲಕರನ್ನು ಗೆಲ್ಲಿಸಿ ಕೊಳ್ಳಲು ಶಕ್ತಿ ಇಲ್ಲದೆ ಕೊರಟಗೆರೆ ಎಪಿಎಂಸಿಯನ್ನು ತುಮಕೂರಿಗೆ ವಿಲೀನಗೊಳಿಸುವ ಕೆಲಸ ಮಾಡಿದ್ದಾರೆ. ನಾಮನಿರ್ದೇಶನ ಮಾಡಲು ಅವಕಾಶಕ್ಕಾಗಿ ಈ ರೀತಿ ಆನ್ಯಾಯ ಮಾಡಿದ್ದಾರೆ. ತುಮಕೂರು ಎಪಿಎಂಸಿಗೆ ಕೊರಟಗೆರೆ ತಾಲ್ಲೂಕಿನಿಂದ ಅತಿ ಹೆಚ್ಚು ಅಡಿಕೆ, ಜೋಳ ಸರಬರಾಜಾಗುತ್ತಿದೆ. ಇನ್ನು ಮಾರುಕಟ್ಟೆಯೇ ಪ್ರಾರಂಭವಾಗಿಲ್ಲ ಇದು ಲಾಂಭಾಂಶವಿಲ್ಲ ಎಂದು ಸುಳ್ಳು ವರದಿ ನೀಡಿ ತಾಲ್ಲೂಕಿನ ಜನರಿಗೆ ಇಂತಹ ಅನ್ಯಾಯ ಮಾಡಿದ್ದಾರೆ. 1962ರಿಂದ ಎಪಿಎಂಸಿಯಲ್ಲಿ ತಾಲ್ಲೂಕಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಕೂಡ ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿನ ರೈತರನ್ನು ಕಡೆಗಣಿಸುತ್ತಿದ್ದು, ಯೋಜನೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಜನರಿಗೆ ಅನ್ಯಾಯವಾಗಲಿದೆ. ದುರುದ್ದೇಶದಿಂದಲೇ ಕ್ಷೇತ್ರಕ್ಕೆ ಈ ರೀತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರಸ್ ಮಾಜಿ ಅಧ್ಯಕ್ಷ ಮೈಲಾರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಅಧ್ಯಕ್ಷ ವಿನಯ್, ಕೃಷಿಕ ಸಮಾಜದ ನಿರ್ದೇಶಕ ಹುಲಿಕುಂಟೆ ಪ್ರಸಾದ್, ಮುಖಂಡರಾದ ಕೆ.ವಿ.ಮಂಜುನಾಥ್, ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.